ಭಾರತದ ಹೈನುಗಾರಿಕೆ ವಿಶ್ವಕ್ಕೆ ಮಾದರಿ

 ಕೊರಟಗೆರೆ :

      ಹೈನುಗಾರಿಕೆಯನ್ನು ಸಹಕಾರ ಸಂಘಗಳ ಮೂಲಕ ಅಭಿವೃದ್ದಿಗೊಳಿಸುವುದನ್ನು ಪ್ರಪಂಚಕ್ಕೆ ಭಾರತವು ತೋರಿಸಿ ಕೊಟ್ಟಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.

      ಅವರು ತಾಲ್ಲೂಕಿನ ಕೋಳಾಲ ಹೋಬಳಿಯ ಎಂ.ಗೊಲ್ಲಹಳ್ಳಿಯಲ್ಲಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಿಂದ ನೂತನ ಮೇಲಂತಸ್ತು ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಹೈನುಗಾರಿಕೆಯಲ್ಲಿ ದೇಶದಲ್ಲೇ ಗುಜರಾತ್ ರಾಜ್ಯವು ಅತ್ಯುನ್ನತ ಪ್ರಗತಿಯನ್ನು ಸಾಧಿಸಿದೆ. ಅದು ಸಾರ್ವಜನಿಕ ಅಭಿವೃದ್ದಿ ಕಾಮಗಾರಿಗಳಿಗೆ ಡೈರಿ ಸಂಘದಿಂದ ಹಣ ನೀಡುವ ಹಂತಕ್ಕೆ ತಲುಪಿದೆ. ಕರ್ನಾಟಕವು ದೇಶದಲ್ಲಿ ಎರಡನೇ ಹೈನುಗಾರಿಕಾ ಪ್ರಗತಿ ಹೊಂದಿದ ರಾಜ್ಯವಾಗಿದೆ. ಬಹಳ ದೊಡ್ಡ ಪ್ರಮಾಣದಲ್ಲಿ ಬದಲಾವಣೆಯನ್ನು ಹೈನುಗಾರಿಕೆಯಲ್ಲಿ ಕೆಎಂಎಫ್ ತಂದಿದೆ. ಪ್ರಮುಖವಾಗಿ ಗ್ರಾಮೀಣ ಭಾಗದ ಮಹಿಳೆಯರು ಹಾಲು ಒಕ್ಕೂಟ ಸಂಘವನ್ನು ಗ್ರಾಮಗಳಲ್ಲಿ ಮಾಡಿದ್ದಾರೆ.

ಎಂ.ಗೊಲ್ಲಹಳ್ಳಿಯ ಮಹಿಳಾ ಹಾಲು ಒಕ್ಕೂಟವು ದಿನಕ್ಕೆ ಸುಮಾರು 1800 ಲೀಟರ್ ಹಾಲು ಶೇಖರಣೆ ಮಾಡಿ, ಸಂಪೂರ್ಣ ಮಹಿಳಾ ಸಬಲೀಕರಣವಾಗಿದೆ. ಇಲ್ಲಿ ಮಹಿಳೆಯರ ಸಾಧನೆ ಅತ್ಯಂತ ಶ್ಲಾಘನೀಯ. ಈ ಡೈರಿಯಲ್ಲಿ ಷೇರುದಾರರಿಂದ ಹಿಡಿದು ಅಧ್ಯಕ್ಷರು, ನಿರ್ದೇಶಕರು, ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಎಲ್ಲವೂ ಸಂಪೂರ್ಣ ಮಹಿಳೆಯರೆ ಇದ್ದಾರೆ. ಇದು ಗ್ರಾಮೀಣ ಮಹಿಳೆಯರ ಸ್ವಾಭಿಮಾನದ ಬದುಕು, ಕರ್ತವ್ಯ ಬದ್ದತೆ ಮತ್ತು ಪರಿಶ್ರಮವನ್ನು ತೋರಿಸುತ್ತದೆ. ಇಂತಹ ಪ್ರಗತಿ, ಸಾಧನೆಗಳು ಪ್ರತಿ ಗ್ರಾಮಗಳಲ್ಲು ನಡೆದಲ್ಲಿ ಮಹಿಳೆಯರ ಪ್ರಗತಿಯೊಂದಿಗೆ ದೇಶದ ಆರ್ಥಿಕತೆ ಸಬಲೀಕರಣಗೊಳ್ಳುತ್ತದೆ ಎಂದರು.

      ಬಯಲು ಸೀಮೆಯ ಈ ಪ್ರದೇಶದಲ್ಲಿ ಮಳೆಯಾಧಾರಿತ ಕೃಷಿಯನ್ನು ರೈತರು ಅವಲಂಬಿಸಿದ್ದು, ವ್ಯವಸಾಯದೊಂದಿಗೆ ಹೈನುಗಾರಿಕೆ ರೈತನ ಆರ್ಥಿಕ ಸ್ಥಿತಿಯನ್ನು ಭದ್ರಗೊಳಿಸಿದೆ. ತಾಲ್ಲೂಕಿನಲ್ಲಿ ದಿನಕ್ಕೆ ಸುಮಾರು 75 ಸಾವಿರ ಲೀಟರ್, ಜಿಲ್ಲೆಯಲ್ಲಿ ಸುಮಾರು 9 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದು ವಿವಿಧ ರೂಪಗಳಲ್ಲಿ ಜನರಿಗೆ ತಲುಪುತ್ತಿದೆ. ಇದು ಸಾವಿರಾರು ಜನರಿಗೆ ಜೀವನಾಧಾರವಾಗಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮತ್ತು ನಂತರದ ಸಮ್ಮಿಶ್ರ ಸರ್ಕಾರದಲ್ಲಿ ರೈತರ ಹಾಲಿನ ಪ್ರೋತ್ಸಾಹ ಧನವನ್ನು 5 ರೂ. ವರೆಗೂ ಏರಿಸಿ, ಹಾಲು ಉತ್ಪಾದನೆಗೆ ಹೆಚ್ಚು ಪ್ರೋತ್ಸಾಹವನ್ನು ನೀಡಲಾಗಿತ್ತು. ಕೊರೋನಾ ಸಂಕಷ್ಟದಲ್ಲೂ ಸಹ ಹೈನುಗಾರರಿಗೆ ಸಂಕಷ್ಟ ಉಂಟಾಗದಂತೆ ಕೆಎಂಎಫ್ ಸರಿದೂಗಿಸುತ್ತಿರುವುದು ಸಂತಸದ ಸಂಗತಿ ಎಂದರು.

      ನಿರ್ದೇಶಕ ಈಶ್ವರಯ್ಯ ಮಾತನಾಡಿ, ತುಮುಲ್ ರೈತರಿಗೆ ಸಾಕಷ್ಟು ಉತ್ತಮ ಯೋಜನೆಗಳನ್ನು ನೀಡುತ್ತಿದೆ. ಹವಾಮಾನ ವೈಪರೀತ್ಯದ ಕಾಲದಲ್ಲಿ ಹೈನುಗಾರಿಕೆ ಮಾಡುವ ರೈತರು ತಮ್ಮ ಹಸುಗಳಿಗೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿದರೆ ಸಂಕಷ್ಟದಲ್ಲಿ ನೆರವಾಗುತ್ತದೆ. ರೈತರ ಅಭಿವೃದ್ದಿಗೆ ವಿವಿಧ ಸವಲತ್ತುಗಳನ್ನು ತುಮುಲ್ ನೀಡುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಡೈರಿ ಅಧ್ಯಕ್ಷೆ ಸುಶೀಲಮ್ಮ, ಕಾರ್ಯದರ್ಶಿ ಕಮಲ, ಕೆ.ಎಂ.ಎಫ್ ಸಿಬ್ಬಂದಿ ರಂಜಿತ್, ವನಜಾಕ್ಷಿ, ಬಷೀರಾ, ತಾಪಂ ಮಾಜಿ ಅಧ್ಯಕ್ಷ ರಾಮಯ್ಯ, ಗ್ರಾಪಂ ಅಧ್ಯಕ್ಷ ರಾಮಣ್ಣ, ಸದಸ್ಯರಾದ ಸಿದ್ದಯ್ಯ, ವೆಂಕಟೇಗೌಡ, ಸುನೀತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅರಕೆರೆಶಂಕರ್, ಕೋಡ್ಲಹಳ್ಳಿ ಅಶ್ವತ್ಥನಾರಾಯಣ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಮಹಿಳಾ ಅಧ್ಯಕ್ಷೆ ಜಯಮ್ಮ, ಯುವಾಧ್ಯಕ್ಷ ವಿನಯ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
 

Recent Articles

spot_img

Related Stories

Share via
Copy link
Powered by Social Snap