ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

  ಕೊರಟಗೆರೆ :

      ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಡೀಸೆಲ್ ಮತ್ತು ಪೆಟ್ರೋಲ್ ಸೇರಿದಂತೆ ಜನಸಮಾನ್ಯರು ಉಪಯೋಗಿಸುವ ದಿನ ನಿತ್ಯದ ವಸ್ತುಗಳ ಬೆಲೆ ಏರಿಕೆ ಮಾಡಿರುವ ಮೂಲಕ ಕಡುಬಡವರು ಮತ್ತು ಮಧ್ಯಮ ಹಾಗೂ ಕೂಲಿ ಕಾರ್ಮಿಕರ ಬದುಕನ್ನು ನಿರ್ಲಕ್ಷಿಸಿದೆ ಎಂದು ಕೆ.ಪಿ.ಸಿ.ಸಿ ವಕ್ತಾರ ಮುರಳಿಧರ ಹಾಲಪ್ಪ ಆರೋಪಿಸಿದರು.

      ಅವರು ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಸಿರುವ ವಿರುದ್ದ ಸೈಕಲ್ ಜಾಥಾದೊಂದಿಗೆ ಪ್ರತಿಭಟನೆ ನಡೆಸಿ ಮಾತನಾಡಿದರು. ಜನತೆ ಹಿಂದೆಂದು ಕಾಣದಂತ ಬೆಲೆ ಏರಿಕೆಯಿಂದಾಗಿ ತತ್ತರಿಸಿದ್ದು, ಜನತೆಯ ಸಂಕಷ್ಟದಲ್ಲಿ ಕೇಂದ್ರಸರ್ಕಾರ ನೆರವಿಗೆ ಬರಬೇಕಿತ್ತು. ಬಿಜೆಪಿ ಪಕ್ಷದ ಸರ್ಕಾರಗಳು ಉಳ್ಳವರ ಪರವಾಗಿರುವುದರಿಂದ ಬಡವರ ಬವಣೆ ಅವರಿಗೆ ಅರ್ಥವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಬಡವರ ಸಿಟ್ಟು ಅವರಿಗೆ ಅರ್ಥವಾಗಲಿದೆ ಎಂದು ತಿಳಿಸಿದರು.
ಅದಾನಿ, ಅಂಬಾನಿಯವರಿಗೆ ರಿಸರ್ವ್ ಬ್ಯಾಂಕ್ ಇಂಡಿಯಾದಿಂದ 1.5 ಲಕ್ಷ ಕೋಟಿ ಪಡೆದ ಸಾಲವನ್ನು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 96 ಸಾವಿರ ಕೋಟಿ ಪಡೆದ ಸಾಲವನ್ನು ಹಿಂದೆ-ಮುಂದೆ ನೋಡದೆ ಮನ್ನಾ ಮಾಡುತ್ತಾರೆ. ಆದರೆ ಜನಸಾಮಾನ್ಯರು ಮತ್ತು ರೈತರು ತಿಂಗಳುಗಟ್ಟಲೆ ಪ್ರತಿಭಟನೆ ಮಾಡಿದರೂ ಸಹ ಅವರನ್ನು ಕಡೆಗಣಿಸುವ ಕೇಂದ್ರ ಸರ್ಕಾರ ಸಂಪೂರ್ಣ ಜನ ವಿರೋಧಿಯಾದದ್ದು ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್ ಮಾತನಾಡಿ, ಡೀಸೆಲ್ ಮತ್ತು ಪೆಟ್ರೋಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಅವೈಜ್ಞಾನಿಕ ಕೃಷಿ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ದೇಶವನ್ನು ದರೋಡೆ ಮಾಡಲು ಹೊರಟಿದೆ. ಜನತೆಯ ಒಳಿತಿಗಾಗಿ ಆಡಳಿತ ಇಲ್ಲ. ಆದರೆ ಜನತೆಯ ವಿರೋಧಿ ಆಡಳಿತವಾಗಿ ರೊಪಗೊಂಡು ಚುನಾವಣಾ ಸಂದರ್ಭದಲ್ಲಿ ಜನತೆಗೆ ಸ್ವರ್ಗ ತೋರಿಸುತ್ತೇವೆ ಎಂದ ಬಿಜೆಪಿ ಸರ್ಕಾರ ಈಗ ನರಕ ತೋರಿಸುತ್ತಿದೆ ಎಂದು ಟೀಕಿಸಿದರು.
ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್ ಮಾತನಾಡಿ, ಕೇಂದ್ರ ಸರ್ಕಾರ ನಿರಂತರವಾಗಿ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿರುವುದರಿಂದ ಜನಸಾಮಾನ್ಯರ ಕೊಳ್ಳುವ ಶಕ್ತಿಯನ್ನು ಕಿತ್ತ್ತುಕೊಂಡಂತೆ ಆಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿದ್ದ ತೆರಿಗೆಯನ್ನು ದುಪ್ಪಟ್ಟು ಮಾಡುವ ಮೂಲಕ ಜನರ ಜೇಬನ್ನು ಲೂಟಿ ಮಾಡುತ್ತಿದೆ. ಜನವಿರೋಧಿ ದೋರಣೆಯನ್ನು ಹೊಂದಿರುವ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬೆಲೆ ಏರಿಕೆಗೆ ಕಡಿವಾಣ ಹಾಕದೆ ಇದ್ದರೆ ಜನರ ಆಕ್ರೋಶವನ್ನುಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತೆಂಗು ಮತ್ತು ನಾರು ಅಭಿವೃದ್ದಿ ಮಂಡಲಿ ಮಾಜಿ ಅಧ್ಯಕ್ಷ ಜಿ.ವೆಂಕಟಾಚಲಯ್ಯ, ಕೆಪಿಸಿಸಿ ವೀಕ್ಷಕ ಪ್ರೊ.ರಾಧಾಕೃಷ್ಣ, ಕೆ.ಪಿ.ಸಿ.ಸಿ ಕಾರ್ಯದರ್ಶಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಚಂದ್ರಶೇಖರ್‍ಗೌಡ, ಜಿಪಂ ಮಾಜಿ ಸದಸ್ಯ ಪ್ರಸನ್ನಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್‍ಕುಮಾರ್, ಮಹಿಳಾ ಅಧ್ಯಕ್ಷೆ ಜಯಮ್ಮ, ಕವಿತಾ, ಶೈಲಜಾ, ಪಪಂ ಸದಸ್ಯರುಗಳಾದ ಎ.ಡಿ.ಬಲರಾಮಯ್ಯ, ಕೆ.ಆರ್.ಓಬಳರಾಜು, ನಾಗರಾಜು, ನಂದೀಶ್, ತಾಪಂ ಮಾಜಿ ಸದಸ್ಯ ರವಿಕುಮಾರ್, ಮುಖಂಡರುಗಳಾದ ಎಂ.ಎನ್.ಜೆ.ಮಂಜುನಾಥ್, ಹೆಚ್.ಎಂ.ರುದ್ರಪ್ರಸಾದ್, ಎಲ್.ರಾಜಣ್ಣ, ಟಿ.ಸಿ.ರಾಮಯ್ಯ, ವೆಂಕಟಪ್ಪ, ರಾಮಚಂದ್ರಪ್ಪ, ಚಿಕ್ಕರಂಗಯ್ಯ, ಮಾವತ್ತೂರು ವೆಂಕಟಪ್ಪ, ಗಣೇಶ್, ಮಂಜುನಾಥ್, ರಾಘವೇಂದ್ರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap