ಕೊರಟಗೆರೆ :
ಹೈನುಗಾರಿಕೆ ನಂಬಿ ಮಕ್ಕಳ ವಿದ್ಯಾಭ್ಯಾಸ, ಸಂಸಾರ ನಿರ್ವಹಣೆ ಮಾಡುತ್ತಿದ್ದ ಕುಟುಂಬವೊಂದು ಏಕಾಏಕಿ ಹಸುವಿನ ದುರ್ಮರಣದಿ ಬೀದಿಗೆ ಬರುವಂತಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಕೋಟೆ ಬೀದಿ ವಾಸಿಯಾದ ಶ್ರೀನಿವಾಸ್ ಬಿನ್ ವೆಂಕಟಪ್ಪನವರ ಸುಮಾರು 60 ಸಾವಿರ ರೂ.ಬೆಲೆ ಬಾಳುವ ಸೀಮೆಹಸು ಹೊಲದಲ್ಲಿ ಮೇಯಿಸುವ ಸಂದರ್ಭದಲ್ಲಿ ಆಕಸ್ಮಿಕ ಸಾವಿಗೀಡಾಗಿದೆ. ಎಂದಿನಂತೆ ರೈತ ಶ್ರೀನಿವಾಸ್ ಸೋಮವಾರ ತನ್ನ ಹೊಲಕ್ಕೆ ಹಸುವನ್ನು ಮೇಯಿಸಲು ಒಡೆದುಕೊಂಡು ಹೋಗಿದ್ದಾರೆ. ಸುಮಾರು ಮದ್ಯಾಹ್ನ 3-30 ರ ಸಮಯದಲ್ಲಿ ಹಸು ನೆಲಕ್ಕೆ ಬಿದ್ದು ಒದ್ದಾಡುವುದನ್ನು ಕಂಡ ರೈತ ಶ್ರೀನಿವಾಸ್ ಕಿರುಚಿಕೊಂಡು, ಅಕ್ಕಪಕ್ಕದ ರೈತರನ್ನು ಕರೆದಿದ್ದಾರೆ. ಅಷ್ಟರಲ್ಲಿ ಹಸುವಿನ ನರಳಾಟ ಹೆಚ್ಚಾಗಿ ಸ್ಥಳದಲ್ಲೇ ಪ್ರಾಣ ಬಿಟ್ಟಿದೆ.
ಕೂಡಲೇ ಊರಿನೊಳಕ್ಕೆ ಓಡಿ ಹೋಗಿ ಪಶುವೈದ್ಯರಿಗೆ ಕರೆ ಮಾಡಿಸಿದಾಗ, ನಾವು ಹಬ್ಬದ ರಜೆಯಲ್ಲಿ ಊರಿನಲ್ಲಿದ್ದೇವೆ. ಇಂದು ನಾವು ಬರಲಾಗುವುದಿಲ್ಲ, ನಾಳೆ ಬೆಳಗ್ಗೆ ಬರುತ್ತೇವೆ ಎಂದರು ಎಂಬುದಾಗಿ ರೈತ ಶ್ರೀನಿವಾಸ್ ನೋವು ತೋಡಿಕೊಂಡರು. ನಂತರ ಮರಣೋತ್ತರ ಪರೀಕ್ಷೆ ಮಾಡಲು ಹೇಳಿದಾಗ ಈಗ ನಾವು ಅಲ್ಲಿಗೆ ಬರಲು ಆಗುವುದಿಲ್ಲ. ಬಂದರೂ ಸಂಜೆ ವೇಳೆಯಲ್ಲಿ ಪರೀಕ್ಷೆ ನಡೆಸಲು ಆಗುವುದಿಲ್ಲ. ಒಂದು ವೇಳೆ ಪರೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ನೀಡಿದರೂ ಸಹ ಪರಿಹಾರದ ಹಣ ಬರುತ್ತಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಇದರಿಂದ ರೈತನನ್ನು ದಿಕ್ಕು ಕಾಣದ ಪರಿಸ್ಥಿತಿಗೆ ದೂಡಿ, ಮಾನಸಿಕವಾಗಿ ರೈತನನ್ನು ಕುಗ್ಗಿಸಿದ ಪಶು ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ರೈತ ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪ.ಪಂ ಅಧ್ಯಕ್ಷೆಯ ಪತಿ ಕುದುರೆ ಸತ್ಯನಾರಾಯಣ ಪ.ಪಂ ವತಿಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಸಹಾಯಕ ನಿರ್ದೇಶಕರ ವರ್ಗಾವಣೆಗೆ ಒತ್ತಾಯ :
ರೈತರ ಅನುಕೂಲಕ್ಕೆಂದು ಸರ್ಕಾರ ಪಶು ಇಲಾಖೆಗೆ ಅನೇಕ ಯೋಜನೆಗಳು ಸೇರಿದಂತೆ ರೈತಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರ ಜೀವನ ಮೂರಾಬಟ್ಟೆಯಾಗಿದೆ. ತಾಲ್ಲೂಕಿನ ಪಶು ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ ಬಂದಾಗಿನಿಂದಲೂ ರೈತರಿಗೆ ಉಪಯುಕ್ತವಾಗುವಂತಹ ಯಾವುದೇ ಮಾಹಿತಿ ನೀಡುತ್ತಿಲ್ಲ. ಅಲ್ಲದೆ ಸರಕಾರದಿಂದ ಬರುವಂತಹ ಸೌಲತ್ತುಗಳನ್ನು ತಮಗೆ ಇಷ್ಟ ಬಂದ ಫಲಾನುಭವಿಗಳನ್ನು ಆಯ್ಕೆ ಮಾಡಿ ಕಲ್ಪಿಸುತ್ತಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳು ವಂಚಿತರಾಗುತ್ತಿದ್ದು, ಈ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಲವು ರೈತರು ಒತ್ತಾಯಿಸಿದರು.
ಸ್ಥಳಕ್ಕೆ ಬಾರದ ಪಶು ವೈದ್ಯರು-ಕಣ್ಣೀರಿಟ್ಟ ರೈತ :
ಇಂದು ಸರ್ಕಾರಿ ರಜೆ ಇದೆ, ಎಲ್ಲಾ ವೈದ್ಯರು ರಜದಲ್ಲಿದ್ದಾರೆ. ನಾಳೆ ಬೆಳಗ್ಗೆ ಬರುತ್ತೇವೆ, ಈಗ ಬರಲು ಆಗುವುದಿಲ್ಲ. ನೀವು ಪರಿಹಾರಕ್ಕೆ ಅರ್ಜಿ ನೀಡಿದ ಮಾತ್ರಕ್ಕೆ ಪರಿಹಾರ ಬರುವುದಿಲ್ಲ. ತಿಂಗಳೇ ಆಗಬಹುದು, ಇಲ್ಲವೇ ವರ್ಷವೇ ಆಗಬಹುದೆಂದು ತಾಲ್ಲೂಕು ಪಶು ಸಹಾಯಕ ನಿರ್ದೇಶಕ ಸಿದ್ದನಗೌಡ ತಿಳಿಸಿದರು. ನಮ್ಮಂತಹ ರೈತನಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಹಸುವಿನಿಂದಲೆ ನಮ್ಮ ಜೀವನ ನಡೆಯಬೇಕು. ಈಗ ಅಧಿಕಾರಿಗಳು ಯಾವ ಪರಿಹಾರದ ಭರವಸೆಯನ್ನೂ ನೀಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮಗೆ ಸರ್ಕಾರದಿಂದ ಸಿಗುವ ಪರಿಹಾರ ಧನವು ಸಿಗದಂತಾಗಿ, ನಮ್ಮ ಕುಟುಂಬಕ್ಕೆ ದಿಕ್ಕೆ ತೋಚದಂತಾಗಿದೆ. ಎಂದು ರೈತ ಕಣ್ಣೀರಿಟ್ಟರು.
ನಾನು ಸಂಬಂಧ ಪಟ್ಟ ಗ್ರಾಮ ಲೆಕ್ಕಿಗರ ಹಾಗೂ ರಾಜ್ಯಸ್ವ ನಿರೀಕ್ಷಕರಿಂದ ವರದಿ ತರಿಸಿ ಸರ್ಕಾರದಿಂದ ಸಿಗುವ ಪರಿಹಾರವನ್ನು ಕೊಡಿಸಲು ವರದಿ ಸಲ್ಲಿಸುತ್ತೇನೆ.
-ನಾಹೀದ ಜಮ್‍ಜಮ್, ತಾಲ್ಲೂಕು ದಂಡಾಧಿಕಾರಿಗಳು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ