ಕೊರಟಗೆರೆ : 16 ಲಕ್ಷ ಹಣ ದೋಚಿದ್ದ ಅಂತರ್ ರಾಜ್ಯ ಕಳ್ಳರು ಅಂದರ್!!

 ಕೊರಟಗೆರೆ :

      25 ಲಕ್ಷಕ್ಕೆ 10 ನಿಮಿಷದಲ್ಲಿ 35 ಲಕ್ಷ ರೂ, 30 ಲಕ್ಷಕ್ಕೆ 20 ನಿಮಿಷದಲ್ಲಿ 50 ಲಕ್ಷ ರೂ. ಕೊಡುವ ಆಮಿಷವೊಡ್ಡಿ ಕೇಬಲ್ ಕಾರ್ಮಿಕನನ್ನು ಯಾಮಾರಿಸಿ, ಅವನಿಂದ 16 ಲಕ್ಷದ 40 ಸಾವಿರ ನಗದು ಹಣವನ್ನು ಪಡೆದು ಪರಾರಿಯಾಗಿದ್ದ ಮೂವರು ಅಂತರ ಜಿಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ನಾಗರಾಜು ಮತ್ತು ಎಎಸೈ ಯೋಗೀಶ್ ನೇತೃತ್ವದ ಪೊಲೀಸರ ತಂಡ ಯಶಸ್ವಿ ಆಗಿರುವ ಘಟನೆ ಮಂಗಳವಾರ ನಡೆದಿದೆ.

     ತುಮಕೂರು ನಗರ ಬ್ರಹ್ಮಸಂದ್ರ ಸಮೀಪದ ದೊಡ್ಡಪೇಟೆ ವಾಸಿಯಾದ ಕೇಬಲ್ ಕಾರ್ಮಿಕ ಅಶೋಕಕುಮಾರ್ ಎಂಬಾತ ಕೊರಟಗೆರೆ ಪೊಲೀಸ್‍ಠಾಣೆಯಲ್ಲಿ ನೀಡಿದ ದೂರಿನ ಅನ್ವಯ ತುಮಕೂರು ಎಸ್ಪಿ ರಾಹುಲ್‍ಕುಮಾರ್ ಮತ್ತು ಮಧುಗಿರಿ ಡಿವೈಎಸ್ಪಿ ರಾಮಕೃಷ್ಣ ಮಾರ್ಗದರ್ಶನದಲ್ಲಿ ಮೂವರು ಅಂತರ ಜಿಲ್ಲಾ ಖತರ್ನಾಕ್ ಕಳ್ಳರನ್ನು ಕೊರಟಗೆರೆ ಪೊಲೀಸರ ತಂಡ ಬಂಧಿಸಿ ಅವರಿಂದ 11 ಲಕ್ಷದ 76 ಸಾವಿರ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.

     ಹಾವೇರಿ ಜಿಲ್ಲೆ ಚಿಕ್ಕಕುರವತ್ತಿ ಗ್ರಾಮದ ನವೀನ್‍ಕುಮಾರ್(40), ತುಮಕೂರು ನಗರದ ಯಲ್ಲಾಪುರದ ವಾಸಿ ಗಂಗಾಧರ(43), ಪಾವಗಡ ತಾಲ್ಲೂಕು ಅಚ್ಚಮ್ಮನಹಳ್ಳಿ ಗ್ರಾಮದ ರಾಮಕೃಷ್ಣ(56) ಬಂಧಿತ ಆರೋಪಿಗಳಾಗಿದ್ದಾರೆ. ಉಳಿದಂತೆ ತುರುವೇಕೆರೆ ತಾಲ್ಲೂಕು ಸಂಪಿಗೆ ಹೊಸಹಳ್ಳಿ ನಿವಾಸಿ ಮುತ್ತುರಾಜು ಮತ್ತು ದೊಡ್ಡಬಳ್ಳಾಪುರ ನಿವಾಸಿ ಗೋಪಿ ಬಂಧನಕ್ಕೆ ಕೊರಟಗೆರೆ ಪೊಲೀಸರ ತಂಡ ಈಗಾಗಲೆ ಹೆಚ್ಚಿನ ತನಿಖೆ ಪ್ರಾರಂಭಿಸಿದ್ದಾರೆ.

  ದುಪ್ಪಟ್ಟು ಹಣವೆಂದು ಬಿಳಿ ಕಾಗದ ಕೊಟ್ಟರು..!

     ದುಪ್ಪಟ್ಟು ಹಣ ಮಾಡುವ ದುರಾಸೆಯಿಂದ ಅಪರಿಚಿತ ದೂರವಾಣಿ ಕರೆಗೆ ಯಾಮಾರಿದ ಕೇಬಲ್ ಕಾರ್ಮಿಕ, ಕೊರಟಗೆರೆ ತಾಲ್ಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯದ ಪಾರ್ಕಿಂಗ್ ಬಳಿ ದ್ವಿ ಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಗಳಿಗೆ ತಮ್ಮ ಬಳಿಯಿದ್ದ ಹಣದ ಬ್ಯಾಗನ್ನು ನೀಡಿದ್ದಾರೆ. ಬ್ಯಾಗಿನಲ್ಲಿದ್ದ ಹಣವನ್ನು ಎಣಿಸುವಾಗ ಅಷ್ಟೆ ಹಣವಿರುವ ಮತ್ತೊಂದು ಬ್ಯಾಗನ್ನು ನೀಡಿ ಅರ್ಧಗಂಟೆ ಬಿಟ್ಟು ಮತ್ತೆ ಶಿರಾ ನಗರಕ್ಕೆ ಬರುವಂತೆ ತಿಳಿಸಿ ಸ್ಥಳದಿಂದ ಪರಾರಿ ಆಗಿದ್ದಾರೆ.

     ತಾವು ನೀಡಿದ ಹಣದ ಬ್ಯಾಗನ್ನು ಪರಿಶೀಲನೆ ನಡೆಸದೆ ಹಣದ ಆಸೆಗಾಗಿ ಮತ್ತೆ ಶಿರಾಗೆ ಬಂದ ದಂಪತಿ ಅರ್ಧಗಂಟೆ ಕಾದು ದೂರವಾಣಿ ಕರೆ ಮಾಡಿದರೆ ಅಪರಿಚಿತ ವ್ಯಕ್ತಿಗಳ ಮೊಬೈಲ್‍ಗಳು ಸ್ವಿಚ್ ಆಫ್ ಆಗಿವೆ. ಬ್ಯಾಗಿನಲ್ಲಿದ್ದ ಹಣವನ್ನು ನೋಡಿದರೆ ಹಣದ ಬದಲಾಗಿ ಕಂತೆ ರೂಪದ ವೈಟ್‍ಪೇಪರ್ ಕಂಡಿವೆ. ಮೋಸ ಹೋದ ಅರಿವಾದ ಮೇಲೆ ತಕ್ಷಣ ಕೊರಟಗೆರೆ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಕಾರ್ಮಿಕನ ದೂರಿನ ಅನ್ವಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ಇನ್ನುಳಿದ ಆರೋಪಿಗಳ ಸೆರೆಗಾಗಿ ಬಲೆ ಬಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ, ಪಿಎಸೈ ನಾಗರಾಜು, ಎಎಸೈ ಯೊಗೀಶ್, ಸಿಬ್ಬಂದಿ ವೆಂಕಟೇಶ್, ಗಂಗಾಧರಪ್ಪ, ರಾಮಣ್ಣ, ಚೆನ್ನಮಲ್ಲಿಕಾರ್ಜುನ, ರಮೇಶಬಾಬು, ನಸ್ರುಲ್ಲಖಾನ್ ಮತ್ತು ಸಿಬ್ಬಂದಿ ವರ್ಗವನ್ನು ತುಮಕೂರು ಎಸ್ಪಿ ರಾಹುಲ್‍ಕುಮಾರ್ ಅಭಿನಂದಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link