ಕೊರಟಗೆರೆ :
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಭೀಕರತೆಯ ಜೊತೆಗೆ ಭಾರಿ ಆತಂಕ ಸೃಷ್ಟಿಸಿರುವ ಬ್ಲ್ಯಾಕ್ ಫಂಗಸ್ ಈಗ ಕೊರಟಗೆರೆ ತಾಲ್ಲೂಕಿಗೂ ವಕ್ಕರಿಸಿ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.
ತಾಲ್ಲೂಕಿನಲ್ಲಿ ಕೋವಿಡ್ -19 ಭೀಕರತೆಯಿಂದ ಸಾವು-ನೋವುಗಳಾಗಿ ಸಾರ್ವಜನಿಕರು ಆತಂಕದಿಂದ ಹೊರಬಂದ ಕೆಲವೆ ದಿನಗಳಲ್ಲೆ ಈಗ ಬ್ಲ್ಯಾಕ್ ಫಂಗಸ್ ಕೊರಟಗೆರೆ ತಾಲ್ಲೂಕಿನ ತುಂಬಾಡಿ ಗ್ರಾಮದ ಪ್ರಭಾವಿ ರಾಜಕೀಯ ನಾಯಕರೊಬ್ಬರಿಗೆ ಕಾಣಿಸಿಕೊಂಡಿರುವುದು ನಾಗರಿಕರ ನಿದ್ದೆ ಕೆಡಿಸಿದೆ.
ತಾಲೂಕಿನಲ್ಲಿ ಕೋವಿಡ್ ಎರಡನೆ ಅಲೆ ಸಾರ್ವಜನಿಕರನ್ನು ತೀವ್ರವಾಗಿ ಬಾಧಿಸಿತ್ತು. 4500 ಕ್ಕೂ ಹೆಚ್ಚು ಕೊರೋನಾ ಸೋಂಕಿತರು ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರೆ, ಸರ್ಕಾರಿ ಆಸ್ಪತ್ರೆ ಲೆಕ್ಕದಲ್ಲಿ 56 ಜನ ಮೃತಪಟ್ಟಿದ್ದರೆ, ವಾಸ್ತವವಾಗಿ 150ಕ್ಕೂ ಹೆಚ್ಚು ಜನ ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕದಲ್ಲಿ ಇರುವಾಗ ಈಗ ಬ್ಲ್ಯಾಕ್ ಫಂಗಸ್ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವುದು ನಾಗರಿಕರಲ್ಲಿ ಇನ್ನಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಬ್ಲಾಕ್ ಫಂಗಸ್ ರೋಗಲಕ್ಷಣಗಳು ಸಾಮಾನ್ಯವಾಗಿ ಮೂಗು ಕಟ್ಟುವಿಕೆ, ಮೂಗು ಮತ್ತು ಕಣ್ಣುಗಳ ಸುತ್ತ ನೋವು ಮತ್ತು ಕೆಂಪಗಾಗುವುದು. ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ರಕ್ತ ವಾಂತಿ, ಮಾನಸಿಕವಾಗಿ ಅನಾರೋಗ್ಯಕರ ಮತ್ತು ಗೊಂದಲಮಯ ಪರಿಸ್ಥಿತಿಗಳು ಇದರಲ್ಲಿ ಸೇರಿವೆ. ಇದು ಸಕ್ಕರೆ ಕಾಯಿಲೆ ಹೊಂದಿರುವ ಕರೋನಾ ವೈರಸ್ನ ಹೆಚ್ಚಿನ ರೋಗಿಗಳ ಮೇಲೆ ದಾಳಿ ನಡೆಸುತ್ತಿದೆ. ಇದು ಗಂಭೀರ ಕಾಯಿಲೆಯಾಗಿದ್ದು, ರೋಗಿಗಳನ್ನು ನೇರವಾಗಿ ಐಸಿಯುಗೆ ಸೇರಿಸುವಷ್ಟು ಭೀಕರತೆಗೆ ತಲುಪುತ್ತಿರುವುದು ಜನರಲ್ಲಿ ಮತ್ತ್ತಷ್ಟು ಭಯ ಸೃಷ್ಟಿಸಿದೆ.
ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರ ಅತ್ಯಂತ ಅಪರೂಪದ ಸೋಂಕು. ಇದು ಸಾಮಾನ್ಯವಾಗಿ ಮಣ್ಣು, ಸಸ್ಯಗಳು, ಗೊಬ್ಬರ, ಕೊಳೆತ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಬೆಳೆಯುವ ಲೋಳೆಯ ಶಿಲೀಂಧ್ರದಿಂದ ಉಂಟಾಗಲಿದೆ. ಬ್ಲ್ಯಾಕ್ ಫಂಗಸ್ ಕೋವಿಡ್ ನಂತರದ ರೋಗ ಆಗಿರುವುದರಿಂದ ಇದಕ್ಕೂ ಉಚಿತ ಚಿಕಿತ್ಸೆ ನೀಡಲಾಗುವುದು, ಬ್ಲ್ಯಾಕ್ ಫಂಗಸ್ಗೆ ಆಂಫೆÇಟೆರಿಸಿನ್ ಔಷಧಿ ನೀಡುತ್ತಿದ್ದು, ಒಬ್ಬ ರೋಗಿಗೆ 40-60 ವಯಲ್ಗಳು ಬೇಕಾಗುತ್ತದೆ ಎನ್ನಲಾಗಿದೆ. ಬ್ಲ್ಯಾಕ್ ಫಂಗಸ್ ಕೋವಿಡ್ ನಂತರದ ರೋಗ ಆಗಿರುವುದರಿಂದ ಇದಕ್ಕೂ ಸರ್ಕಾರದ ವತಿಯಿಂದ ಉಚಿತ ಚಿಕಿತ್ಸೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಬ್ಲ್ಯಾಕ್ ಫಂಗಸ್ ಮುಖ್ಯವಾಗಿ ಮೂಗು, ಬಾಯಿ, ಕಣ್ಣಿಗೆ ಸಂಬಂಧಿಸಿದ ಸೋಂಕು. ಶಿಲೀಂಧ್ರ ಸೋಂಕು ಉಂಟಾದ ತಕ್ಷಣ ಮೂಗಿನಲ್ಲಿ ಲಕ್ಷಣಗಳು ಕಂಡು ಬರುತ್ತವೆ. ಇದು ಅನಿಯಂತ್ರಿತ ಮಧುಮೇಹ, ದೀರ್ಘಕಾಲ ವೆಂಟಿಲೇಟರ್ನಲ್ಲಿದ್ದವರು, ಸ್ಟಿರಾಯ್ಡ್ ಹೆಚ್ಚಾಗಿ ಬಳಸಿದವರು, ರೋಗನಿರೋಧಕ ಶಕ್ತಿ ಇಲ್ಲದವರಲ್ಲಿ ಕಂಡು ಬರುತ್ತದೆ. ಕ್ಯಾನ್ಸರ್, ಎಚ್ಐವಿ, ಅಂಗಾಂಗ ಕಸಿಗೆ ಒಳಗಾದವರಲ್ಲಿ ಮಧುಮೇಹ ನಿಯಂತ್ರಣ ಕಳೆದುಕೊಂಡು ಸೋಂಕು ಉಂಟಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಒಟ್ಟಾರೆ ತಾಲ್ಲೂಕಿನಲ್ಲಿ ಸತತ ಕೊರೋನಾ ಸೋಂಕಿನ ಆತಂಕಕ್ಕೆ ಒಳಗಾಗಿದ್ದ ಜನತೆಗೆ ಈಗ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿರುವುದು ಮತ್ತಷ್ಟು ಆತಂಕ ಸೃಷ್ಟಿಯಾಗಲು ಕಾರಣವಾಗಿದೆ. ಈಗ ತಾಲ್ಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆ ಎಷ್ಟರಮಟ್ಟಿಗೆ ಮುಂಜಾಗ್ರತೆ ಕ್ರಮ ವಹಿಸಿ ರೋಗ ತಹಬಂದಿಗೆ ತರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ಸ್ವಲ್ಪ ಯಾಮಾರಿದರೂ ಬ್ಲ್ಯಾಕ್ ಫಂಗಸ್ನ ಹೊಡೆತ ತಾಲ್ಲೂಕಿನ ಜನತೆ ಮೇಲೆ ತೀವ್ರ ಪರಿಣಾಮ ಬೀರಲಿದ್ದು, ಇದರ ಬಗ್ಗೆ ಜನತೆ ಎಚ್ಚರಿಕೆ ವಹಿಸಬೇಕಾಗಿದೆ.
ರಂಗದಾಮಯ್ಯ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
