ಹೆದ್ದಾರಿ ಕಾಮಗಾರಿ ಚುರುಕುಗೊಳಿಸಲು ಸಂಸದರ ಸೂಚನೆ…!

ಉಡುಪಿ:

   ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ, ಮೇಲ್ಸೇತುವೆ, ಅಂಡರ್ಪಾಸ್ ಕಾಮಗಾರಿಗಳನ್ನು ತ್ವರಿತಗೊಳಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

   ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಮತ್ತು ಭೂ ಸ್ವಾಧೀನ ವಿಚಾರಗಳಿಗೆ ಸಂಬಂಧಿಸಿದಂತೆ ಚರ್ಚಿಸುವ ಸಲುವಾಗಿ ಬುಧವಾರ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಿ, ಭೂ ಮಾಲೀಕರಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಹಣ ವಿಳಂಬವಿಲ್ಲದೇ ಒದಗಿಸಿ, ಕಾಮಗಾರಿಗಳನ್ನು ಕೂಡಲೇ ಕೈಗೊಳ್ಳಬೇಕು. ನ್ಯಾಯಾಲಯದ ಪ್ರಕರಣಗಳನ್ನು ಶೀಘ್ರ ಇತ್ಯರ್ಥವಾಗುವ ರೀತಿಯಲ್ಲಿ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.

    ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆಯಲ್ಲಿ ಉಡುಪಿಯಿಂದ ಕುಂದಾಪುರ ಕಡೆ ಹೋಗುವ ರಸ್ತೆಯ ಬದಿಯ ತಡೆಗೋಡೆಯನ್ನು ನವೆಂಬರ್ ಒಳಗಾಗಿ ಪೂರ್ಣಗೊಳಿಸಬೇಕು. ಅದರ ಪಕ್ಕದಲ್ಲಿರುವ ಸರ್ವೀಸ್ ರಸ್ತೆ ಕಾಮಗಾರಿಗಳನ್ನು ಸಹ ನಿರ್ಮಾಣ ಮಾಡಲು ಕೂಡಲೇ ಯೋಜನಾ ವರದಿ ತಯಾರಿಸಿ, ಕಾಮಗಾರಿ ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದು ತಿಳಿಸಿದರು.

    ರಾಷ್ಟ್ರೀಯ ಹೆದ್ದಾರಿ 169 ‘ಎ’ಯಲ್ಲಿ ಪರ್ಕಳ ಸಮೀಪ ಹೆದ್ದಾರಿ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿ ನ್ಯಾಯಾಲಯದ ಆದೇಶವು ಸರ್ಕಾರದ ಪರವಾಗಿ ಬಂದಿದ್ದು, ಭೂ ಮಾಲೀಕರಿಗೆ ಕೂಡಲೇ ಪರಿಹಾರದ ಹಣ ನೀಡಬೇಕು, ಕಾಮಗಾರಿ ಪ್ರಾರಂಭಿಸಬೇಕು ಎಂದು ಸಂಸದ ಸೂಚಿಸಿದರು.

   ಕೋಟ ಶ್ರೀನಿವಾಸ ಪೂಜಾರಿ, ಸಂಸದಕಟಪಾಡಿ ಮತ್ತು ಅಂಬಲಪಾಡಿಯಲ್ಲಿ ಓವರ್ ಪಾಸ್ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಅಗತ್ಯವಿರುವ ಮುಂಜಾಗ್ರತಾ ಕಾರ್ಯಗಳನ್ನು ಕೈಗೊಳ್ಳುವುದರೊಂದಿಗೆ ಕಾಮಗಾರಿ ಪ್ರಾರಂಭಿಸಿ.

   ಪೆರ್ಡೂರಿನ ಅಂನಂತೇಶ್ವರ ದೇವಸ್ಥಾನ ಸಮೀಪದ 600 ಮೀ. ವ್ಯಾಪ್ತಿಯಲ್ಲಿ ಕಾಮಗಾರಿ ಸಂಬಂಧ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಅದನ್ನು ಬಿಟ್ಟು ಉಳಿದ ಕಡೆ ಕಾಮಗಾರಿ ಕೈಗೊಳ್ಳಬೇಕು. ದೇವಸ್ಥಾನ, ಕಲ್ಯಾಣಿಯ ಮೂಲ ಸ್ವರೂಪಕ್ಕೆ ಧಕ್ಕೆ ಆಗಬಾರದೆಂಬುದು ಭಕ್ತರ ಬೇಡಿಕೆ. ಅದನ್ನು ಮನಗಂಡು ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದರು.

   ಕರಾವಳಿ ಜಂಕ್ಷನ್ನಿಂದ ಮಲ್ಪೆ ಜಂಕ್ಷನ್ವರೆಗೆ ಹೆದ್ದಾರಿ ನಿರ್ಮಾಣಕ್ಕೆ ಅಗತ್ಯವಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪೂರ್ಣಗೊಳಿ ಸುವುದರೊಂದಿಗೆ ಭೂ ಮಾಲೀಕರಿಗೆ ಪರಿಹಾರದ ಹಣವನ್ನು ನವೆಂಬರ್ 10 ರೊಳಗೆ ನೀಡುವುದರ ಜೊತೆಗೆ ಕಾಮಗಾರಿಯ ವೇಗ ಹೆಚ್ಚಿಸಬೇಕು. ರಾ.ಹೆ 66ರ ಹೆಜಮಾಡಿ,ಸಾಸ್ತಾನದ ಟೋಲ್ಗೇಟ್ ಬಳಿ ರಾತ್ರಿ ವೇಳೆ ವಾಹನ ಚಾಲಕರಿಗೆ ಅನುಕೂಲವಾಗುವಂತೆ ಕ್ಯಾಂಟೀನ್ ಪ್ರಾರಂಭಿಸುವ ಕುರಿತು ಕೂಡಲೇ ಟೆಂಡರ್ ಕರೆಯಬೇಕು. ಟೋಲ್ನ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಸ್ಥಳೀಯ ಜನರ ವಾಹನಗಳಿಗೆ ರಿಯಾಯಿತಿ ನೀಡಬೇಕು ಎಂದು ಕೋಟ ಹೇಳಿದರು.

   ಸಾಣೂರು- ಬಿಕರ್ನಕಟ್ಟೆ ರಸ್ತೆ ಕಾಮಗಾರಿ ಮಳೆಯಿಂದಾಗಿ ನಿಧಾನವಾಗಿದ್ದು, ಮಳೆ ಕಡಿಮೆಯಾಗಿರುವುದರಿಂದ ಕಾಮಗಾರಿ ತ್ವರಿತಗೊಳಿಸಬೇಕು. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ವೀಸ್ ರಸ್ತೆ, ತಾತ್ಕಾಲಿಕ ಬಸ್ ನಿಲ್ದಾಣ ಸೇರಿದಂತೆ ಪೂರಕ ಕಾಮಗಾರಿಗಳನ್ನು ಕೈಗೊಳ್ಳಬೇಕು. ಹೆದ್ದಾರಿಯುದ್ದಕ್ಕೂ ಬೀದಿ ದೀಪಗಳ ನಿರ್ವಹಣೆ ವ್ಯವಸ್ಥಿತವಾಗಿ ನಿರ್ವಹಿಸಬೇಕು. ಸಾಸ್ತಾನದಿಂದ ಕುಂದಾಪುರದವರೆಗಿನ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಆಗಿಂದಾಗ್ಗೆ ಮಾಡಬೇಕು ಎಂದು ಸೂಚಿಸಿದರು.

   ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಡಿಎಫ್ಒ ಗಣಪತಿ, ಸಹಾಯಕ ಆಯುಕ್ತ ಮಹೇಶ್ಚಂದ್ರ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಗುತ್ತಿಗೆದಾರರು ಇದ್ದರು. 

   ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ವೇಗ ಮತ್ತಷ್ಟು ಹೆಚ್ಚಿಸಬೇಕು. ರೈಲ್ವೆ ಇಲಾಖೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಗುತ್ತಿಗೆದಾರರು ಸಮನ್ವಯದಿಂದ ಕೆಲಸ ನಿರ್ವಹಿಸಬೇಕು. ಪರಿಶೀಲನೆ ಅನುಮತಿ ರೈಲ್ವೆ ಹಳಿಗಳ ಮೇಲೆ ಗರ್ಡರ್ ಕೂರಿಸುವಿಕೆಗೆ ಸೇರಿದಂತೆ ಎಲ್ಲಾ ರೀತಿಯ ಪೂರ್ವ ತಯಾರಿಗಳನ್ನು ಕೈಗೊಂಡು ನವೆಂಬರ್ ತಿಂಗಳ ಅಂತ್ಯದೊಳಗಾಗಿ ಮುಗಿಸಲು ಮುಂದಾಗಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.

 

Recent Articles

spot_img

Related Stories

Share via
Copy link