ಟ್ರೆಂಡ್‌ ಆಗುತ್ತಿರುವ ಕೊಟ್ಟಿಯೂರಿನ ಬಗ್ಗೆ ನಿಮಗೆಷ್ಟು ಗೊತ್ತಾ…?

ಕೆರಳ :

   ಕಾಂತಾರ ಸಿನೆಮಾದ ದೃಶ್ಯದಂತೆ, ಇನ್ಯಾವುದೋ ಮಲೆಯಾಳಂ ಸಿನಿಮಾದ ವಿಶುವಲ್‌ಗಳಂತೆ, ಗಂಧರ್ವ ಲೋಕದಂತೆ ಕಾಣಿಸೋ ಈ ನೋಟಗಳೆಲ್ಲ ಎಲ್ಲಿಯದು ಅಂತ ಅಚ್ಚರಿಪಟ್ಟಿರಾ? ನಿಸರ್ಗ ಸೌಂದರ್ಯ ಹಾಗೂ ಭಕ್ತಿ ಸೌಂದರ್ಯಗಳು ಸೇರಿರುವ ಈ ಪ್ರದೇಶ ಇರೋದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರು ಎಂಬಲ್ಲಿ.

   ನೀರಿನ ನಡುವೆ ಇರುವ ಇಲ್ಲಿನ ಅಪರೂಪದ ದೇವಸ್ಥಾನದಲ್ಲಿ ಇದೀಗ ನೀರಿಗಿಂತಲೂ ಹೆಚ್ಚು ಜನರ ಪ್ರವಾಹ. ಪ್ರಕೃತಿಯ ನಡುವೆ ಇರುವ ದೇವರನ್ನು, ವರ್ಷದಲ್ಲಿ ಒಂದೇ ಒಂದು ಬಾರಿ ಮಾತ್ರ ದರ್ಶನ ಕೊಡುವ ದೇವರನ್ನು ನೋಡೋಕೆ ಇಲ್ಲಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಬರ್ತಾ ಇದಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಇಲ್ಲಿಗೆ ಭೇಟಿ ಕೊಟ್ಟ ನಂತರವಂತೂ ಕರ್ನಾಟಕದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನ ಇಲ್ಲಿಗೆ ಹೋಗ್ತಾ ಇದಾರೆ. ಹಾಗಾದ್ರೆ ಏನು ಇಲ್ಲಿನ ವಿಶೇಷ ಅಂತೀರಾ? 

   ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಭೇಟಿ ಕೊಟ್ಟದ್ದೇ ಕೊಟ್ಟದ್ದು, ಕರ್ನಾಟಕದಲ್ಲೂ ಕೊಟ್ಟಿಯೂರು ಶಿವ ದೇವಾಲಯ ಫೇಮಸ್‌ ಆಗಿಬಿಟ್ಟಿದೆ. ನೀವೂ ಈ ದೇವಾಲಯಕ್ಕೆ ಭೇಟಿ ನೀಡಬೇಕು ಎಂಬ ಆಸೆ ಇದ್ರೆ ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದೆ. ಯಾಕಂದರೆ ಈ ದೇವಾಲಯಕ್ಕೆ ಜನಗಳಿಗೆ ದರ್ಶನಕ್ಕೆ ಪ್ರವೇಶ ಸಿಗೋದು ವರ್ಷದಲ್ಲಿ 28 ದಿನಗಳ ಕಾಲ ಮಾತ್ರ. ಈ ವರ್ಷ ಜೂನ್‌ 8ರಂದು ಬಾಗಿಲು ತೆರೆದಿರೋ ದೇವಸ್ಥಾನದ ಬಾಗಿಲನ್ನು ಜುಲೈ 4ರಂದು ಮುಚ್ಚಲಾಗುತ್ತದೆ. ಅದಕ್ಕೆ ಮೊದಲೇ ಈ ನಿಸರ್ಗ ರಮಣೀಯ ತಾಣಕ್ಕೆ ನೀವು ಭೇಟಿ ಕೊಡಬಹುದು.

   ಇನ್ನು ಕೇರಳದ ಈ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರದ ಬಗ್ಗೆ ಜನತೆಗೆ ಇರೋ ಮಾಹಿತಿ ಅತ್ಯಲ್ಪ. ಇದನ್ನು ‘ದಕ್ಷಿಣದ ಕಾಶಿ’ ಎಂದೂ ಸಹ ಕರೆಯುತ್ತಾರೆ. ಈ ದೇವಾಲಯ ಇರುವ ಸ್ಥಳ ಮಹಾಶಿವ ತಪಸ್ಸು ಮಾಡಿದ ಸ್ಥಳ ಎಂದು ನಂಬಲಾಗಿದೆ. ಇಲ್ಲಿ ಒಂದು ತಿಂಗಳ ಕಾಲ ಮೇ ಅಥವಾ ಜೂನ್‌ನಲ್ಲಿ ವಾರ್ಷಿಕ ಉತ್ಸವ ನಡೆಯುತ್ತದೆ. ಜೋರಾಗಿ ಸುರಿಯುವ ಮಳೆಯ ನಡುವೆಯೇ ಈ ಉತ್ಸವ ನಡೆಯುತ್ತದೆ. ಇದನ್ನು ವೈಶಾಖೋತ್ಸವ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ವೈಶಾಖ ಮಾಸದಲ್ಲಿ ಈ ದೇವಸ್ಥಾನ 28 ದಿನಗಳ ಕಾಲ ಭಕ್ತರಿಗೆ ಮುಕ್ತವಾಗಿರುತ್ತದೆ.

   ವರ್ಷದ ಉಳಿದ ದಿನಗಳಲ್ಲಿ ಇಲ್ಲಿಗೆ ಪ್ರವೇಶವಿಲ್ಲ. ಆ ಸಂದರ್ಭ ಇಲ್ಲಿ ಕಾಡು ಬೆಳೆಯುತ್ತದೆ. ಜಾತ್ರೆಯ ಸಮಯದಲ್ಲಿ ಈ ಕಾಡನ್ನು ಕಡಿದು ತೆಂಗಿನ ಗರಿಗಳ ತಾತ್ಕಾಲಿಕ ದೇವಸ್ಥಾನ ನಿರ್ಮಿಸುತ್ತಾರೆ. ಈ ದೇವಸ್ಥಾನದ ಒಳಗಡೆ ದೀಪ ಹಚ್ಚುತ್ತಾರೆ. ಅಲ್ಲೊಂದು ಉದ್ಭವ ಶಿವಲಿಂಗ ಇದ್ದು ಅದರ ದರ್ಶನವನ್ನು ಜನ ಪಡೆಯುತ್ತಾರೆ. ವೈಶಾಖ ಮಹೋತ್ಸವದ ದಿನ ಶಿವಲಿಂಗಕ್ಕೆ ತುಪ್ಪದಿಂದ ಅಭಿಷೇಕ ಮಾಡಲಾಗುತ್ತದೆ. ಈ ಧಾರ್ಮಿಕ ಆಚರಣೆಯನ್ನು ನೆಯ್ಯಟ್ಟಂ ಎಂದು ಕರೆಯಲಾಗುತ್ತದೆ. ತದನಂತರ ದೇವರಿಗೆ ತೆಂಗಿನ ನೀರಿನಿಂದ ಅಭಿಷೇಕ ಮಾಡುವುದರೊಂದಿಗೆ ಸಂಪನ್ನಗೊಳ್ಳುತ್ತದೆ. ಈ ಆಚರಣೆಯನ್ನು ಎಲೆನೀರತ್ತಂ ಎಂದು ಕರೆಯಲಾಗುತ್ತದೆ. 

   ಇಲ್ಲಿ ದೇವಾಲಯ ಅಂದರೆ ದೊಡ್ಡ ದೊಡ್ಡ ಕಟ್ಟಡಗಳು ಇರೋಲ್ಲ. ಚಾವಣಿಗೆ ಒಣಹುಲ್ಲು ಹೊದಿಸಿದ ಗುಡಿಸಲುಗಳು ಮಾತ್ರ ಇವೆ. ಈ ಗುಡಿಸಲಿನ ಒಳಗೇ ಶಿವಲಿಂಗವಿದೆ. ಈ ಆಲಯದಲ್ಲಿ ನೆಲೆಸಿರುವ ಲಿಂಗವು ಯಾರೂ ಸ್ಥಾಪಿಸಿದ್ದಲ್ಲ, ಬದಲಾಗಿ ಸ್ವಯಂಭೂ ಎನ್ನಲಾಗುತ್ತದೆ. ದೇಶದ ನಾನಾ ಭಾಗಗಳ ಶಿವಭಕ್ತರು ಈ ದೇವಾಲಯಕ್ಕೆ ಬಂದು ದರ್ಶನ ಪಡೆದು ಪುನೀತರಾಗುತ್ತಾರೆ. ಈ ದೇವಾಲಯ ದಟ್ಟವಾದ ಅರಣ್ಯ, ನಿರ್ಮಲವಾಗಿ ಹರಿಯುವ ನದಿ, ಎತ್ತರದ ಬೆಟ್ಟಗಳಿಂದ ಸುತ್ತುವರೆದಿದೆ.

   ಈ ಸುಂದರವಾದ ವಾತಾವರಣ ಭಕ್ತಿ, ಆಧ್ಯಾತ್ಮದ ಪರಿಸರಕ್ಕೆ ಮತ್ತಷ್ಟು ಉತ್ತೇಜನಕಾರಿಯಾಗಿದೆ. ದೇವಾಲಯದ ಇನ್ನೊಂದು ವಿಶೇಷ ಅಂದರೆ ನೀರಿನ ನಡುವೆ ಇರೋದು. ಬೆಟ್ಟಗುಡ್ಡಗಳ ಮಧ್ಯೆ ಇರುವ ಈ ದೇವಾಲಯದ ಸುತ್ತ ಬೆಟ್ಟದ ಮೇಲಿನಿಂದ ಹರಿದು ಬರುವ ಅಪಾರ ಪ್ರಮಾಣದ ನೀರು ಹರಿಯುತ್ತದೆ. ಭಕ್ತರು ಕೂಡ ಆ ತಣ್ಣಗಿನ ನೀರಲ್ಲಿ ಹೆಜ್ಜೆ ಹಾಕಿ ಒಳಗೆ ಹೋಗಿ ಶಿವನ ದರ್ಶನ ಪಡೆದು ಪುನೀತರಾಗುತ್ತಾರೆ. ಮುಖ್ಯ ರಸ್ತೆಯಿಂದ ಅರ್ಧ ಕಿಲೋಮೀಟರ್​ನಷ್ಟು ಈ ದೇವಸ್ಥಾನಕ್ಕೆ ನಡೆಯಬೇಕು. ಈ ಹಾದಿಯಲ್ಲಿ ಎರಡು ನದಿಗಳನ್ನು ದಾಟಬೇಕು. ಬಾವಲಿ ನದಿಯಲ್ಲಿ ಮೂರು ಬಾರಿ ಮುಳುಗೆದ್ದು ಭಕ್ತರು ದೇವಸ್ಥಾನದತ್ತ ಹೆಜ್ಜೆ ಇಡುತ್ತಾರೆ. 

   ಇಲ್ಲಿ ಶಿವನ ಜೊತೆಗೆ ಆತನ ಪತ್ನಿಯಾದ ಸತಿದೇವಿ ಅಥವಾ ದಾಕ್ಷಾಯಣಿ ದೇವಿ ಮತ್ತು ಬ್ರಹ್ಮ ಹಾಗೂ ವಿಷ್ಣುವನ್ನೂ ಇಲ್ಲಿ ಆರಾಧಿಸಲಾಗುತ್ತದೆ. ಪುರಾಣ ಕತೆಗಳಲ್ಲಿ ಬರುವಂತೆ ದಕ್ಷಯಾಗ ನಡೆದಿದ್ದು ಇಲ್ಲೇ. ಇದೇ ಸ್ಥಳದಲ್ಲಿ ಸತೀದೇವಿ ತನ್ನನ್ನು ತಾನು ಯಜ್ಞಕುಂಡಕ್ಕೆ ಅರ್ಪಣೆ ಮಾಡಿಕೊಂಡಳು. ಆ ಯಜ್ಞ ನಡೆದ ಸ್ಥಳವೇ ಇದು. ಈ ಯಾಗದ ಬಳಿಕ ಶಿವ ತನ್ನ ಪತ್ನಿಗೆ ಆದ ಸಂಕಷ್ಟ ಮತ್ತು ಅದರಿಂದ ತನಗಾದ ನೋವು ಜಗತ್ತಿನಲ್ಲಿ ಇನ್ನಾರಿಗೂ ಬರಬಾರದು, ಹಾಗಾಗಿ ಯಾವೆಲ್ಲಾ ದಂಪತಿಗೆ ಇಂತಹ ಕಷ್ಟ ಬಂದಿದೆಯೋ ಅವರು ಇಲ್ಲಿ ಬಂದು ದರ್ಶನ ಮಾಡಿದ್ರೆ ಅವರ ಕಷ್ಟ ನೀಗಿಸುತ್ತೇನೆ ಎಂದು ಆಶೀರ್ವಾದ ಮಾಡಿದ್ದನಂತೆ. ಹಾಗೆ ಹರಕೆ ಹೊತ್ತವರು ಈ ದೇವಸ್ಥಾನದಲ್ಲಿ ಬೆಳ್ಳಿಕೊಡೆ ಮತ್ತು ಸ್ವರ್ಣ ಕೊಡೆ ಸಮರ್ಪಣೆ ಮಾಡ್ತಾರೆ. 

    ಇಲ್ಲಿಗೆ ಹೋಗೋದಕ್ಕೆ ನೀವು ಇಷ್ಟಪಟ್ಟರೆ ಪ್ರಯಾಣದ ಮಾಹಿತಿ ಇಲ್ಲಿದೆ. ಕೇರಳದ ಕಣ್ಣೂರು ಜಿಲ್ಲೆಯಲ್ಲಿರೋ ಈ ದೇವಸ್ಥಾನಕ್ಕೆ ಬೆಂಗಳೂರಿನಿಂದ ಸುಮಾರು 278 ಕಿ.ಮೀ ದೂರ ಇದೆ. ವಿಮಾನದ ಮೂಲಕ ನೀವು ಹೋಗಲು ಬಯಸಿದರೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರಿನಿಂದ ತೆರಳಬಹುದು. ಕಣ್ಣೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿ ಈ ಪವಿತ್ರವಾದ ದೇವಾಲಯವಿದೆ. ಅಲ್ಲಿಗೆ ನೀವು ಟ್ಯಾಕ್ಸಿಯ ಮೂಲಕ ಭೇಟಿ ನೀಡಬಹುದು. ರೈಲು ಮಾರ್ಗವಾಗಿ ನೀವು ಹೋಗಲು ಬಯಸಿದರೆ ಕಣ್ಣೂರು ರೈಲು ನಿಲ್ದಾಣವೇ ಸಮೀಪದ ರೈಲ್ವೆ ನಿಲ್ದಾಣವಾಗಿದೆ. ಈ ನಿಲ್ದಾಣದಿಂದ ಸುಮಾರು 60 ಕಿ.ಮೀ ದೂರದಲ್ಲಿ ದೇವಾಲಯವಿದೆ. ಬಸ್ಸು ಅಥವಾ ಟ್ಯಾಕ್ಸಿಯ ಮೂಲಕ ಅಲ್ಲಿಗೆ ತಲುಪಬಹುದು. 

   ಕೊಟ್ಟಿಯೂರು ಕ್ಷೇತ್ರದಲ್ಲಿ ದೇವರ ದರ್ಶನಕ್ಕೂ ಮುನ್ನ ಸಮೀಪವೇ ಹರಿಯುವ ಬಾವಲಿ ನದಿಯಲ್ಲಿ ಮಿಂದೇಳಬೇಕೆಂಬ ಕ್ರಮವಿದೆ. ಹೀಗೆ ಭಕ್ತರು ನದಿಯಲ್ಲಿ ಮಿಂದು ಅಲ್ಲೇ ಸಿಗುವ ಯಾವುದೇ ಕಲ್ಲುಗಳನ್ನು ಆರಿಸಿ ಒಂದಕ್ಕೊಂದು ತಿಕ್ಕುವ ದೃಶ್ಯ ಅಲ್ಲಿ ಕಾಣಬಹುದು. ಅರೇ! ಇದೇನಿದು ಕಲ್ಲಿಗೆ ಕಲ್ಲನ್ನು ಉಜ್ಜಿ ಬೆಂಕಿ ಸೃಷ್ಟಿಸುತ್ತಿದ್ದಾರೋ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಇದೇ ಈ ಪುಣ್ಯಕ್ಷೇತ್ರದ ವಿಶೇಷತೆ. ಯಾವುದೇ ಎರಡು ಕಲ್ಲುಗಳನ್ನು ಆರಿಸಿ ಅವುಗಳನ್ನು ಒಂದಕ್ಕೊಂದು ಉಜ್ಜಿದರೆ ಗಂಧ ಪ್ರಸಾದ ಸೃಷ್ಟಿಯಾಗುತ್ತದೆ. ಅವುಗಳನ್ನು ಭಕ್ತರು ಭಕ್ತಿಯಿಂದ ಹಣೆಗೆ ಹಚ್ಚಿಕೊಳ್ಳುತ್ತಾರೆ. ಹ್ಞಾ… ಆದರೆ ಆ ಕಲ್ಲುಗಳನ್ನು ಮನೆಗೆ ತಂದು ಉಜ್ಜಿದರೆ ಗಂಧ ಸೃಷ್ಟಿಯಾಗುತ್ತದೆ ಎಂದು ಊಹಿಸಿದರೆ ತಪ್ಪಾದಿತ್ತು. ಅದು ಸಾಧ್ಯವೇ ಇಲ್ಲವಂತೆ! 

    ಕೊಟ್ಟಿಯೂರು ಕ್ಷೇತ್ರದ ಮತ್ತೊಂದು ವಿಶೇಷತೆ ಎಂದರೆ ಓಡಪೂವು. ಕೊಟ್ಟಿಯೂರ್ ಉತ್ಸವಕ್ಕೆ ಭೇಟಿ ನೀಡಿದಾಗ, ಅಂಗಡಿಗಳಲ್ಲಿ ಮತ್ತು ರಸ್ತೆಬದಿಗಳಲ್ಲಿ ಈ ಬಿಳಿ ಹೂವುಗಳು ನೇತು ಹಾಕಿರುವುದನ್ನು ಕಾಣಬಹುದಾಗಿದೆ. ಆ ಹೂವಿನ ಹೆಸರು ಓಡಪೂವು. ಉಗ್ರ ಸ್ವರೂಪಿ ವೀರಭದ್ರ ದಕ್ಷನ ತಲೆ ಕಡಿದು ಆತನ ಗಡ್ಡವನ್ನು ಕಿತ್ತು ಎಸೆಯುತ್ತಾನೆ. ಅವನು ಎಸೆದ ಗಡ್ಡವು ಈ ಓಡಪೂವಾಗಿ ಬದಲಾಯಿತು ಎಂಬ ಪ್ರತೀತಿ ಇದೆ. ಇತರ ಕೆಲವು ನಂಬಿಕೆಗಳ ಪ್ರಕಾರ, ದಕ್ಷ ಯಜ್ಞವನ್ನು ಮುನ್ನಡೆಸಿದ ಭೃಗು ಮಹರ್ಷಿ ಮತ್ತು ಅವನೊಂದಿಗಿದ್ದ ಇತರ ಋಷಿಗಳ ಗಡ್ಡವನ್ನು ವೀರಭದ್ರ ಮತ್ತು ಇತರ ರಾಕ್ಷಸರು ಕಿತ್ತುಹಾಕಿ ಎಸೆಯುತ್ತಾರೆ. ಈ ಗಡ್ಡಗಳೇ ಓಡಪೂವುಗಳಾಗಿ ಬದಲಾದವು ಎನ್ನಲಾಗಿದೆ. 

    ಓಡಪೂವುಗಳನ್ನು ಬಿದಿರಿನಿಂದ ತಯಾರಿಸಲಾಗುತ್ತದೆ. ಈ ರೀತಿ ಸಂಗ್ರಹಿಸಿದ ಜೊಂಡುಗಳನ್ನು ನಿರ್ದಿಷ್ಟ ಗಾತ್ರಕ್ಕೆ ಕತ್ತರಿಸಿ ನೀರಿನಲ್ಲಿ ಇಡಲಾಗುತ್ತದೆ. ನಂತರ, ಅವುಗಳನ್ನು ಪುಡಿಮಾಡಿ, ಪುಡಿಮಾಡಿ, ಮೊಳೆಗಳಿರುವ ಬಾಚಣಿಗೆಯಿಂದ ಬಾಚಲಾಗುತ್ತದೆ. ಹೂವಿನ ಆಕಾರ ನೀಡಿ ಮತ್ತೆ ನೀರಿನಲ್ಲಿ ಇಡಲಾಗುತ್ತದೆ. ಇದನ್ನು ಮಾಡದಿದ್ದರೆ ಓಡಪೂವು ಹಳದಿ ಬಣ್ಣಕ್ಕೆ ತಿರುಗುತ್ತದೆ. ನಂತರ, ಅದನ್ನು ನೀರಿನಿಂದ ಹೊರತೆಗೆದು, ಸ್ವಚ್ಛಗೊಳಿಸಿ ಹೂವಿನ ರೂಪಕ್ಕೆ ತರಲಾಗುತ್ತದೆ. ವಿಚಿತ್ರ ಎಂದರೆ ಈ ಕ್ಷೇತ್ರವಲ್ಲದೇ ಬೇರೆಲ್ಲಿಯೂ ನೀವು ಈ ಓಡಪೂವನ್ನು ತಯಾರಿಸಲು ಜಪ್ಪಯ್ಯ ಎಂದರು ಸಾಧ್ಯವಿಲ್ಲಂತೆ!

   ಕೊಟ್ಟಿಯೂರಿನಿಂದ ಪಡೆದ ಓಡಪೂವನ್ನು ಮನೆಗಳಲ್ಲಿ ಮತ್ತು ವಾಹನಗಳಲ್ಲಿ ನೇತುಹಾಕುವ ಸಂಪ್ರದಾಯವಿದೆ. ಹಾಗೆ ಮಾಡುವುದರಿಂದ ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ತಾನು ಅನುಭವಿಸಿದ ನೋವು ತನ್ನ ಭಕ್ತರಿಗೆ ಬಾರದಿರಲಿ ಎಂದು ಪರಶಿವನೇ ರಕ್ಷಣೆಯಾಗಿ ನೀಡುವ ಪ್ರಸಾದವಂತೆ ಈ ಓಡಪೂವು!

Recent Articles

spot_img

Related Stories

Share via
Copy link