ದಂಪತಿ ಮಧ್ಯೆ ಗಲಾಟೆ: ಕಾಲುವೆಗೆ ಹಾರಿದ್ದ ಪತ್ನಿಯನ್ನ ರಕ್ಷಿಸಲು ಹೋಗಿ ಕೊಚ್ಚಿಹೋದ ಪತಿ ಸಾವು

ಹಾಸನ‌

     ಕೌಟುಂಬಿಕ ಕಲಹ ಹಿನ್ನೆಲೆ ಕಾಲುವೆಗೆ ಹಾರಿ ದಂಪತಿ ಆತ್ಮಹತ್ಯೆ  ಮಾಡಿಕೊಂಡಿರುವಂತಹ ಘಟನೆ ಹಾಸನ‌  ಜಿಲ್ಲೆ‌ಯ ಚನ್ನರಾಯಪಟ್ಟಣ ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಎರಡು ವರ್ಷಗಳ ಹಿಂದಷ್ಟೇ  ಮದುವೆಯಾಗಿದ್ದ ಗೋಪಾಲ್ (27) ಮತ್ತು ದೀಪು (24) ಮೃತ ದಂಪತಿ. ಚನ್ನರಾಯಪಟ್ಟಣ ಟೌನ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

    ನಿನ್ನೆ ಇಬ್ಬರ ನಡುವೆ ಗಲಾಟೆ ಉಂಟಾಗಿದೆ. ಬಳಿಕ ಪತ್ನಿ ಹೇಮಾವತಿ ಕಾಲುವೆಗೆ ಹಾರಿದ್ದಾರೆ. ಪತ್ನಿಯನ್ನು ರಕ್ಷಿಸಲು ಪತಿ ಕೂಡ ಕಾಲುವೆಗೆ ಹಾರಿದ್ದಾರೆ. ದಂಪತಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರು. ದಂಪತಿ ಮನೆಗೆ ಬಾರದಿದ್ದರಿಂದ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದಾರೆ. ಇಂದು ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಲ್ಲಿ ಶೋಧಕಾರ್ಯ ನಡೆಸಿದ್ದು, ಈ ವೇಳೆ ಗೋಪಾಲ್ ಮೃತದೇಹ ಪತ್ತೆಯಾಗಿದೆ. ದೀಪು ಶವಕ್ಕಾಗಿ ಶೋಧ ಕಾರ್ಯ ಮುಂದುವರೆದಿದೆ. 

    ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಗ್ರಾಮದಲ್ಲಿ ನಡೆದಿದೆ. ಸುಮಿತಾ(48) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೃತ ಸುಮಿತಾ ಮಾನಸಿಕ ಖಿನ್ನತೆಯಿಂದ‌ ಬಳಲುತ್ತಿದ್ದರು. ಸದ್ಯ ಶ್ರೀಮಂಗಲ‌ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

    ಪತಿ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನವಂಬರ್ 22ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರೇಖಾ ಮಾಯಪ್ಪ ನಂದಿ(25) ಮೃತ ಪತ್ನಿ. ಬಿಬಿಎಂಪಿ ಮಾರ್ಷಲ್ ಆಗಿರುವ ಪತಿ ಮಾಯಪ್ಪ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ಮಾಯಪ್ಪ ಇತ್ತೀಚೆಗೆ ಕುಡಿದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಕುಟುಂಬಸ್ಥರಿಗೆ ಆತನೆ ಕೊಲೆ ಮಾಡಿ ನೇಣು ಹಾಕಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 

    ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಇತ್ತೀಚೆಗೆ ಕೋಲಾರದಲ್ಲಿ ನಡೆದಿತ್ತು. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲ ಬಳಿ ಘಟನೆ ನಡೆದಿತ್ತು. ಟೆಂಪೋ ಡ್ರೈವರ್ ಗಿರೀಶ್ (೩೫) ಆತ್ಮಹತ್ಯೆಗೆ ಶರಣಾಗಿದ್ದ ವ್ಯಕ್ತಿ. 

   ಇತ್ತೀಚೆಗೆ ಗಿರೀಶ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿತ್ತು. ಕಳೆದ ರಾತ್ರಿ ಬೇತಮಂಗಲ ಹೊರವಲಯದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಬೇತಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

Recent Articles

spot_img

Related Stories

Share via
Copy link