ಬೆಂಗಳೂರು
ಕರ್ನಾಟಕ ಲೋಕಸೇವಾ ಆಯೋಗದ ಅವ್ಯವಹಾರ, ಭ್ರಷ್ಟಾಚಾರ ಮತ್ತು ಒಂದರ ಮೇಲೊಂದು ಎಡವಟ್ಟುಗಳಿಂದ ಪ್ರಾಮಾಣಿಕ ಅಭ್ಯರ್ಥಿಗಳು ಬೇಸತ್ತು ಹೋಗಿದ್ದಾರೆ. ವ್ಯಾಪಕ ಆಕ್ರೋಶದ ಬಳಿಕ ಎಚ್ಚೆತ್ತಿರುವ ರಾಜ್ಯಸರ್ಕಾರ ಇದೀಗ ಕೆಪಿಎಸ್ಸಿಗೆ ಕಾಯಕಲ್ಪ ನೀಡಲು ಮುಂದಾಗಿದೆ. ವಿಧಾನಸೌಧದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕೆಪಿಎಸ್ಸಿ ಕಾಯ್ದೆ 1959’ಕ್ಕೆ (KPSC Act) ತಿದ್ದುಪಡಿ ತರಲು ತೀರ್ಮಾನಿಸಿದೆ. ಈ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡನೆಗೆ ನಿರ್ಧರಿಸಿದೆ.
ಈ ತಿದ್ದುಪಡಿ ಮಸೂದೆ ಪ್ರಕಾರ ನೇಮಕಾತಿ ಸಂದರ್ಶನ ಮಂಡಳಿಯಲ್ಲಿ ಆಯೋಗ ನಿಯೋಜಿಸಬಹುದಾದ ಒಬ್ಬ ಸದಸ್ಯ ಮಾತ್ರ ಇರಲಿದ್ದಾರೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ರಾಜ್ಯ ಗೆಜೆಟೆಡ್ ಪ್ರೊಬೇಷನರ್ಸ್ ನೇಮಕಾತಿ ನಿಯಮದಲ್ಲಿ ಇರುವಂತೆ ಸಂದರ್ಶನ ನಡೆಸಬೇಕು ಎಂದು ತಿದ್ದುಪಡಿ ಮಾಡಲಾಗುತ್ತದೆ. ಪ್ರಸ್ತುತ ನಿಯಮದಲ್ಲಿ ಆಯೋಗ ನಿಯೋಜಿಸಿದ ಇಬ್ಬರು ಅಥವಾ ಹೆಚ್ಚು ಸದಸ್ಯರು ಅಭ್ಯರ್ಥಿಗಳ ಸಂದರ್ಶನ ನಡೆಸಬಹುದಾಗಿದೆ.
ಈ ಸಂದರ್ಶನದ ಫಲಿತಾಂಶಗಳನ್ನು ಆಯೋಗದ ಮುಂದೆ ಮಂಡಿಸಿ, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂಬ ಅಂಶ ಇದೆ. ಇದು ಸ್ವಜನ ಪಕ್ಷಪಾತ, ಅಕ್ರಮಕ್ಕೆ ಎಡೆ ಮಾಡಿ ಕೊಟ್ಟಿದೆ ಎಂಬ ಆರೋಪವಿತ್ತು. ಅದನ್ನು ಬದಲಾಯಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ತಿದ್ದುಪಡಿಯಂತೆ ಆಯೋಗದ ಸಭೆಗೆ ಅಧ್ಯಕ್ಷರನ್ನು ಸೇರಿಸಿ ಒಟ್ಟು ಸದಸ್ಯರ ಪೈಕಿ ಶೇ 50ರಷ್ಟು ಕೋರಂ ಅಗತ್ಯ ಇದೆ ಎಂದು ಬದಲಾಯಿಸಲಾಗುವುದು. ಈ ಹಿಂದೆ ಅಧ್ಯಕ್ಷರು ಇಲ್ಲದಿದ್ದರೂ ಶೇ 50ರಷ್ಟು ಎಂದಿತ್ತು. ಆಯೋಗದ ಎಲ್ಲ ನಿರ್ಣಯಗಳು ಎಲ್ಲ ಸದಸ್ಯರಿಗೂ ಮುಕ್ತ ಆಗಿರಬೇಕು. ಒಂದು ವೇಳೆ ಆಯೋಗದ ನಿರ್ಣಯಗಳ ಸಂಬಂಧ ಸದಸ್ಯ ಭಿನ್ನಾಭಿಪ್ರಾಯ ಹೊಂದಿದ್ದರೆ, ಅದಕ್ಕೆ ಕಾರಣದೊಂದಿಗೆ ದಾಖಲಿಸಬೇಕು.
- ಪಶು ಆಹಾರ ನಿಯಂತ್ರಣಕ್ಕೆ ಕಾಯ್ದೆ ತಿದ್ದುಪಡಿಗೆ ಅಸ್ತು.
- ಪರವಾನಗಿ ಇಲ್ಲದೆ ಪಶು ಆಹಾರ ಉತ್ಪಾದಿಸಿ, ಮಾರುವಂತಿಲ್ಲ.
- ನಿಯಮ ಉಲ್ಲಂಘಿಸಿದ್ರೆ 3 ವರ್ಷ ಜೈಲುಶಿಕ್ಷೆ ಮತ್ತು 5ಲಕ್ಷ ರೂ. ದಂಡ.
- ಬೆಂಗಳೂರು ಅರಮನೆ ಮೈದಾನ ಟಿಡಿಆರ್ ಪ್ರಮಾಣ ಪತ್ರ ಠೇವಣಿ.
- ವೃತ್ತಿಪರ ತೆರಿಗೆ 300 ರೂ.ಗೆ ಏರಿಕೆ ಮಾಡಲು ಒಪ್ಪಿಗೆ. ಪ್ರಸ್ತುತ ವೇತನದಲ್ಲಿ 200 ರೂ. ಕಡಿತವಾಗುತ್ತಿದ್ದು, ಇನ್ಮುಂದೆ 300 ರೂ. ಕಡಿತವಾಗಲಿದೆ.
ರಾಜ್ಯದಲ್ಲಿ ಪಶು ಆಹಾರ ಉತ್ಪಾದನೆ, ಪೂರೈಕೆ ಮತ್ತು ಮಾರಾಟವನ್ನು ನಿಯಂತ್ರಿಸಲು ಕರ್ನಾಟಕ ಪಶು ಆಹಾರ ಮತ್ತು ಪೂರಕ ಮೇವು ವಿಧೇಯಕ, 2025ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಪರವಾನಗಿ ಇಲ್ಲದೆ ಪಶು ಆಹಾರ ಉತ್ಪಾದಿಸಿ, ಮಾರಾಟ ಮಾಡಿದ್ರೆ 3 ವರ್ಷ ಜೈಲು ಶಿಕ್ಷೆ ಮತ್ತು 5 ಲಕ್ಷ ರೂ. ವರೆಗೆ ದಂಡ ವಿಧಿಸಲು ಅವಕಾಶವಿರಲಿದೆ. ಬೆಂಗಳೂರು ಅರಮನೆ ಮೈದಾನ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಆದೇಶದಂತೆ ಟಿಡಿಆರ್ ಪ್ರಮಾಣ ಪತ್ರವನ್ನು ಠೇವಣಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿಗೆ ಕೂಡ ಸರ್ಕಾರ ಮುಂದಾಗಿದ್ದು, ಆದರೆ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿಲ್ಲ.
