ದಾವಣಗೆರೆ :
ನಾಳೆಯಿಂದ (ಸೆ.22 ರಿಂದ) ಸೆ.24ರವರೆಗೆ ಜರುಗಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ವಸತಿ ಪದವಿ ಪೂರ್ವ ಕಾಲೇಜುಗಳ ಮೆಟ್ರಿಕ್ ಪೂರ್ವ ಬಾಲಕ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕರು, ಶಿಕ್ಷಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕರ ಹುದ್ದೆಗಳ ಪರೀಕ್ಷೆಗಳು ಸುಗಮವಾಗಿ ನಡೆಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ತಿಳಿಸಿದರು.
ಜಿಲ್ಲಾಡಳಿತ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಪರೀಕ್ಷಾ ನಿಯೋಜಿತ ಅಧಿಕಾರಿಗಳ ಸಭೆಯಲ್ಲಿ ಮಾತಾನಾಡಿದ ಅವರು, ಸೆ.22 ರಂದು 1 ಕೇಂದ್ರದಲ್ಲಿ ಪರೀಕ್ಷೆ ನಡೆಯಲ್ಲಿದ್ದು, 235 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸೆ.23 ರಂದು 24 ಕೇಂದ್ರಗಳಲ್ಲಿ 9072 ಅಭ್ಯರ್ಥಿಗಳು ಪರೀಕ್ಷೆ ಬರೆಯುವರು. ಸೆ.24 ರಂದು 1 ಪರೀಕ್ಷಾ ಕೇಂದ್ರದಲ್ಲಿ 365 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದು, ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳು ಜಾಗರೂಕತೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಿದರು.
ಪರೀಕ್ಷೆಗಳು 2 ಅವಧಿಯಲ್ಲಿ ನಡೆಯಲಿದ್ದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ರವರೆಗೆ ಹಾಗೂ ಮಧ್ಯಾಹ್ನ 2 ರಿಂದ 4ರವರೆಗೆ ನಡೆಯುತ್ತವೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರ ಹಾಗೂ ಮೂಲ ಅಥವಾ ಜೆರಾಕ್ಸ್ ಗುರುತಿನ ಚೀಟಿ ಹಾಜರುಪಡಿಸಿ ಅಭ್ಯರ್ಥಿಗಳಿಗೆ ಪರೀಕ್ಷಾ ಉಪಕೇಂದ್ರದಲ್ಲಿ ಪ್ರವೇಶಸಲು ಮೇಲ್ವಿಚಾರಕರು ಸೂಚಿಸಬೇಕು ಎಂದರು.
ಪರೀಕ್ಷೆ ಕುರಿತು ಮಾಹಿತಿ ನೀಡಿದ ಡಿ.ಡಿ.ಪಿ.ಐ ಪರಮೇಶ್ವರಪ್ಪ, ಪ್ರತಿ 24 ಅಭ್ಯರ್ಥಿಗಳಿಗೆ ಒಂದರಂತೆ ಬ್ಲಾಕ್ ಮಾಡಿ ಪ್ರತ್ಯೇಕವಾಗಿ ಸಂವೀಕ್ಷಕರನ್ನು ನೇಮಿಸಬೇಕು. ಲಿಪಿಕಾರರನ್ನು ಕರೆತರುವಂತಹ ಅಂಧ/ದೃಷ್ಟಮಾಂದ್ಯ ಅಂಗವಿಕಲ ಅಭ್ಯರ್ಥಿಗಳಿಗೆ ಪ್ರತಿ 05 ಅಭ್ಯರ್ಥಿಗಳಿಗೆ ಒಂದು ಕೊಠಡಿಯಲ್ಲಿ ಆಸನ ವ್ಯವಸ್ಥೆ ಹಾಗೂ ಪ್ರತಿ ಅಭ್ಯರ್ಥಿಗೆ ಓರ್ವ ಸಂವೀಕ್ಷಕರನ್ನು ನೇಮಿಸಬೇಕು. ಅಭ್ಯರ್ಥಿಗಳು ಡೌನ್‍ಲೋಡ್ ಮಾಡಿಕೊಂಡ ಪ್ರವೇಶ ಪತ್ರವನ್ನು ಮತ್ತು ಅವರ ಭಾವಚಿತ್ರವಿರುವ ಗುರುತಿನ ಚೀಟಿ (ಚುನಾವಣಾ ಐಡಿ/ಆಧಾರ್ ಕಾರ್ಡ್/ ಡ್ರೈವಿಂಗ್ ಲೈಸೆನ್ಸ್/ ಪಾನ್ ಕಾರ್ಡ್/ಪಾಸ್‍ಪೋರ್ಟ್/ಪಾನ್ ಕಾರ್ಡ್/ಸರ್ಕಾರಿ ನೌಕರರ ಐ.ಡಿ)ಯನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು.
ಹಾಜರು ಪಡಿಸದಿದ್ದಲ್ಲಿ ಪರೀಕ್ಷಾ ಉಪಕೇಂದ್ರಕ್ಕೆ ಪ್ರವೇಶವನ್ನು ನೀಡಲಾಗುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಈ ಸೂಚನೆಗಳಂತೆ ಅವರ ಪ್ರವೇಶ ಪತ್ರ ಹಾಗೂ ಗುರುತಿನ ಚೀಟಿಗಳನ್ನು ಮುಖ್ಯ ದ್ವಾರದಲ್ಲಿ ಹಾಜರುಪಡಿಸಿದ ನಂತರವೇ ಅವರಿಗೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಸಲು ಅನುಮತಿ ನೀಡಲಾಗುವುದು. ಅಂಗವಿಕಲತೆಯ ಪ್ರಮಾಣ ಪತ್ರವನ್ನು ಹಾಗೂ ಲಿಪಿಕಾರರ ಭಾವಚಿತ್ರ ಮತ್ತು ಗುರುತಿನ ಚೀಟಿ ಹಾಗೂ ಇತರೆ ವಿವರಗಳೊಂದಿಗೆ ದೃಡಿಕರಣವನ್ನು ನಿಗದಿತ ನಮೂನೆಯಲ್ಲಿ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಓ.ಎಂ.ಆರ್ ಹಾಳೆಗಳಲ್ಲಿ ಅಭ್ಯರ್ಥಿಗಳ ನೋಂದಣಿ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆಯ ಶ್ರೇಣಿ ಮುದ್ರಿತವಾಗಿರುವುದರಿಂದ ಹಾಜರಿರುವ ಅಭ್ಯರ್ಥಿಗಳಿಗೆ ಅವರ ನೋಂದಣಿ ಸಂಖ್ಯೆಯುಳ್ಳ ಓ.ಎಂ.ಆರ್ ಹಾಳೆಗಳನ್ನೇ ವಿತರಿಸಬೇಕು. ದೋಷಪೂರಿತ ಓ.ಎಂ.ಆರ್ ಹಾಳೆಗಳು ದೊರಕಿದ್ದಲ್ಲಿ, ಅದೇ ಪ್ರೆಶ್ನೆ ಪತ್ರಿಕೆಯ ಶ್ರೇಣಿಯುಳ್ಳ ಹಾಗೂ ನೋಂದಣಿ ಸಂಖ್ಯೆ ರಹಿತ ಓ.ಎಂ.ಆರ್ ಹಾಳೆಯನ್ನು ನೀಡಬೇಕು. ನಂತರ ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್ ನ್ನು ಅಭ್ಯರ್ಥಿಗಳ ಮುಂದೆ ತೆರೆದು ಪರೀಕ್ಷೆ ಪ್ರಾರಂಭದ ಘಂಟೆ ಬಾರಿಸಿದ ಕೊಡಲೇ ಅಭ್ಯರ್ಥಿಗಳ ಓ.ಎಂ.ಆರ್ ಹಾಳೆಯಲ್ಲಿ ಮುದ್ರಿತವಾದ ಶ್ರೇಣಿಯುಳ್ಳ ಪ್ರಶ್ನೆ ಪತ್ರಿಕೆಯನ್ನೇ ಹಂಚಿಕೆ ಮಾಡುವಂತೆ ಹಾಗೂ ನಮೂನೆ ‘ಬಿ’ ರಲ್ಲಿ 04 ಅಭ್ಯರ್ಥಿಗಳಿಂದ ಸಹಿ ಪಡೆಯುವಂತೆ ಸೂಚಿಸಿದರು.
ಏನೇನು ನಿಷೇಧ: ಪರೀಕ್ಷಾ ಕೇಂದ್ರದ ಮುಖ್ಯ ದ್ವಾರದಲ್ಲಿಯೇ ಮೊಬೈಲ್ ಬ್ಲೂಟೂತ್ ಡಿವೈಸ್, ಪೇಜರ್, ವೈರ್‍ಲೆಸ್, ಕ್ಯಾಲ್ಕ್ಯೂಲೇಟರ್, ಡಿಜಿಟಲ್ ವಾಚ್ ಸೇರಿದಂತೆ ಎಲ್ಲ ರೀತಿಯ ವಾಚುಗಳು, ಇತರೆ ಮೊದಲಾದ ಎಲೆಕ್ಟ್ರಾನಿಕ್ ಉಪಕರಣಗಳು, ಸ್ಲೈಡ್ ರೂಲುಗಳು, ಮಾರ್ಕರ್‍ಗಳು, ಲಾಗ್ ಟೇಬಲ್‍ಗಳು, ವೈಟ್ ಪ್ಲೂಯಿಡ್‍ಗಳು, ಬ್ಲೇಡ್, ಎರೇಸರ್ ಇವುಗಳನ್ನು ಪರೀಕ್ಷಾ ಕೇಂದ್ರದ ಆವರಣದೊಳಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.
ಕೆಂದ್ರದ ಸುತ್ತ ನಿಷೇದಾಜ್ಞೆ: ಸಿಆರ್‍ಪಿಸಿ ಕಲಂ 144 ರನ್ವಯ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ಪರಿದಿ ವ್ಯಾಪ್ತಿ ಪ್ರದೇಶವನ್ನು ಸಾರ್ವಜನಿಕ ಪ್ರವೇಶಕ್ಕೆ ನಿಷೇಧಿತ ಪ್ರದೇಶವೆಂದು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಆದೇಶಿಸಿರುತ್ತಾರೆ.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರೇವಣ್ಣ, ಉದ್ಯೋಗಾಧಿಕಾರಿ ರುದ್ರಣ್ಣಗೌಡ, ಆಹಾರ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಆಯುಷ್ ಅಧಿಕಾರಿ ಡಾ.ಸಿದ್ದೇಶ್, ಖಜಾನಾಧಿಕಾರಿ ರಾಜಣ್ಣ, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ