ಮಾತು ಕೇಳದೆ ನದಿಗೆ ಇಳಿದರೆ ಲಾಠಿ ರುಚಿ ತೋರಿಸಿ : ಕೃಷ್ಣ ಭೈರೇಗೌಡ

ಬಾಗಲಕೋಟೆ:

   ರಾಜ್ಯದ ಜನರು ನಮ್ಮ ಬಗ್ಗೆ ತಪ್ಪು ತಿಳಿದುಕೊಂಡರೂ ಪರವಾಗಿಲ್ಲ. ಆದರೆ, ಅವರ ಜೀವ ಉಳಿಸುವುದು ಮುಖ್ಯ. ಹೀಗಾಗಿ, ಅಧಿಕಾರಿಗಳ ಮಾತು ಕೇಳದೆ ನದಿಗೆ ಇಳಿಯುವವರಿಗೆ ಲಾಠಿ ರುಚಿ ತೋರಿಸಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಸೂಚನೆ ನೀಡಿದ್ದಾರೆ.

   ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಘಟಪ್ರಭಾ ನದಿಯಿಂದ ಪ್ರವಾಹ ಉಂಟಾಗಿದ್ದು, ವಿವಿಧ ಗ್ರಾಮಗಳಿಗೆ ಕೃಷ್ಣ ಬೈರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

   ಈ ವೇಳೆ ಮಾತನಾಡಿದ ಅವರು, ಮೀನು ಹಿಡಿಯಲು, ಕೃಷಿ ಚಟುವಟಿಕೆ, ಸೆಲ್ಫಿಗಾಗಿ ಯಾರೂ ನದಿ ಅಥವಾ ಹೊಳೆಗೆ ಇಳಿಯಬಾರದು. ಒಂದು ವೇಳೆ ಒಳ್ಳೆ ಮಾತಿಗೆ ಗೌರವ ಕೊಡದೆ ನದಿಗೆ ಇಳಿದವರಿಗೆ ಲಾಠಿ ಏಟು ನಿಶ್ಚಿತ. ನಮ್ಮ ರಾಜ್ಯದಲ್ಲಿ ಪ್ರಾಣಹಾನಿಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದರು.

    ನಮ್ಮ ಪುಣ್ಯ ಎರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದೆ. 2019-20ರಲ್ಲಿ 272 ಮಂದಿ ಮಳೆಯ ಅಬ್ಬರದಿಂದ ಸಾವನ್ನಪ್ಪಿದ್ದರು. 2022 ರಲ್ಲಿ 249 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ವರ್ಷ 243 ಸಾವುಗಳು ಸಂಭವಿಸಿವೆ. ಈ ಬಾರಿ, ಮಳೆಗೆ ಹೆಚ್ಚಿನ ಪ್ರಾಣಹಾನಿಯಾಗದಂತೆ ತಡೆಯಬೇಕು. ಅದಕ್ಕಾಗಿ, ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕಾಳಜಿ ಕೇಂದ್ರಗಳಿಗೆ 10000 ಜನರ ಸ್ಥಳಾಂತರ

   ಇದೇ ವೇಳೆ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ 44,000 ಹೆಕ್ಟರ್ ಕೃಷಿ ಭೂಮಿಯಲ್ಲಿ ಬೆಳೆ ಹಾನಿಯಾಗಿದ್ದು, 10 ಸಾವಿರಕ್ಕೂ ಹೆಚ್ಚು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದೂ ಸಚಿವರು ಮಾಹಿತಿ ನೀಡಿದರು.ರಾಜ್ಯದಲ್ಲಿ ಮಳೆ ಹಾಗೂ ಅತಿವೃಷ್ಟಿಯಿಂದ ಆಗಿರುವ ಬೆಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಆದೇಶ ನೀಡಿರುವುದಾಗಿ ಹೇಳಿದರು.

   ರಾಜ್ಯದ ಕೆಲವು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಶೇಕಡ 28ರಷ್ಟು ಮಳೆ ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆಯಾದ ಪರಿಣಾಮ ಕೃಷ್ಣಾ, ಮಲಪ್ರಭಾ, ಘಟಪ್ರಭಾ ಜೊತೆಗೆ ಅನೇಕ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ನದಿ ದಡದ ಗ್ರಾಮಗಳ ಸಾವಿರಾರು ಜನ ಕಾಳಜಿ ಕೇಂದ್ರಗಳಲ್ಲಿದ್ದಾರೆ.

   ರಾಜ್ಯದಲ್ಲಿ 64 ಕಾಳಜಿ ಕೇಂದ್ರ ಆರಂಭಿಸಿದ್ದು, 10,000ಕ್ಕೂ ಅಧಿಕ ಸಂತ್ರಸ್ತರು ಆಶ್ರಯ ಪಡೆದುಕೊಂಡಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ 800ಕ್ಕೂ ಅಧಿಕ ಮನೆಗಳು ಸಂಪೂರ್ಣ ಹಾನಿಯಾಗಿದ್ದು, 4000 ಮನೆಗಳು ಭಾಗಶಃ ಹಾನಿಯಾಗಿವೆ. ಇದುವರೆಗೆ 43 ಜನ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

   ಮನೆ ಬಿದ್ದವರಿಗೆ ಪರಿಹಾರ ನೀಡಿ ಮನೆ ಕೊಡಲಾಗುತ್ತದೆ. ಸರಕಾರಿ ಜಾಗೆಯಲ್ಲಿನ ಮನೆ ಹಾಳಾದರೆ ಪರಿಹಾರಕ್ಕೆ ಅವಕಾಶವಿಲ್ಲ. ಆದರೆ ಒಂದು ಲಕ್ಷ ರೂ. ಪರಿಹಾರ ವಿತರಿಸುತ್ತೇವೆ, ಭಾಗಶಃ ಮನೆ ಹಾನಿಯಾದವರಿಗೆ ಸದ್ಯ 6,500 ರೂ. ಮಾತ್ರ ಪರಿಹಾರ ನೀಡಬಹುದು. ಅಂತಹವರಿಗೆ 50 ಸಾವಿರ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಸಿಎಂ ಕೂಡ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link