ಬೆಂಗಳೂರು :
ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ಸಿದ್ಧನಿದ್ದೇನೆ ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ರೆಡಿ ಇದ್ದೇನೆ. ಎರಡುವರೆ ವರ್ಷದ ಬಳಿಕ ಸಂಪುಟ ಪುನರ್ ರಚನೆ ಆಗುತ್ತೆ. ಸರ್ಕಾರ ಬಂದಾಗಲೇ ಈ ನಿರ್ಧಾರ ಆಗಿತ್ತು ಎಂದು ಹೇಳಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ನವೆಂಬರ್‌ನಲ್ಲಿ ಭಾರಿ ಬದಲಾವಣೆ ಆಗಲಿದೆ ಎಂಬ ಊಹಾಪೋಹಗಳ ನಡುವೆ ಕೃಷ್ಣ ಬೈರೇಗೌಡರ ಈ ಹೇಳಿಕೆ ಬಂದಿದೆ. ಸಚಿವರಾಗಲು ಅರ್ಹತೆ ಇರುವವರಿಗೆ ಅವಕಾಶ ಸಿಗಬೇಕು. ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ. ಸಂಪುಟ ಪುನಾರಚನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ ಎಂದವರು ಹೇಳಿದ್ದಾರೆ. ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನವನ್ನು ನೀಡಿದೆ.
ಅರ್ಹತೆ ಮೀರಿ ನನಗೆ ಪಕ್ಷ ಅವಕಾಶ ಕೊಟ್ಟಿದೆ. ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ತಯಾರಿದ್ದೇನೆ. ಸಚಿವ ಸ್ಥಾನದಿಂದ ನಾನು ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಅವಕಾಶದ ವಿಷಯದಲ್ಲಿ ನನಗೆ ಹೊಟ್ಟೆ ತುಂಬಿದೆ. ಆದರೆ ಕೆಲಸದಲ್ಲಿ ತೃಪ್ತಿ ಇಲ್ಲ. ಪಕ್ಷ ನನ್ನನ್ನು ಗುರುತಿಸಿ ಕೆಲಸ ಮಾಡಲು ಸಾಕಷ್ಟು ಅವಕಾಶ ನೀಡಿದೆ. ಅಗತ್ಯ ಬಿದ್ದರೆ ಸಚಿವ ಸ್ಥಾನದ ತ್ಯಾಗಕ್ಕೂ ಸಿದ್ಧನಿದ್ದೇನೆ ಎಂದರು.
ಈ ಬಾರಿ 26 ಲಕ್ಷ ಭಕ್ತರು ಹಾಸನಾಂಬ ದೇವಿ ದರ್ಶನ ಪಡೆದಿದ್ದಾರೆ. ಹಾಸನಾಂಬ ದೇವಿ ಅಂದರೆ ಹಸನ್ಮುಖಿ, ಪ್ರಸನ್ನತೆಯ ಸಂಕೇತ. ದೇವಿಯ ದರ್ಶನ ಪಡೆದ ಭಕ್ತರು ಸಂತೋಷದಿಂದ ಹೋಗಿದ್ದಾರೆ. ದರ್ಶನ ಪಡೆದ 26 ಲಕ್ಷ ಭಕ್ತರ ಪೈಕಿ ಶೇ 60ರಷ್ಟು ಮಹಿಳೆಯರು. ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆಯಿಂದಾಗಿಯೂ ಹೆಚ್ಚಿನ ಭಕ್ತರು ಬರಲು ಸಾಧ್ಯವಾಗಿದೆ. ದೇವರು ಯಾರ ಮನೆಯ ಸ್ವತ್ತು ಕೂಡ ಅಲ್ಲ. ಸಾಮಾನ್ಯರೆಲ್ಲರಿಗೂ ದರ್ಶನ ಸಿಗುವಂತೆ ಮಾಡಿದ್ದೇವೆ ಎಂದು ಕೃಷ್ಣಭೈರೇಗೌಡ ಹೇಳಿದರು.








