ಮೈಸೂರು:
ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಪಡೆದಿದ್ದೇ ಆದರೆ, ಎನ್’ಡಿಎ ನಾಯಕರಿಗೆ ಹಾರ ಹಾಕಿ ಸನ್ಮಾನಿಸುತ್ತೇವೆಂದು ಕಾಂಗ್ರೆಸ್ ಮಂಗಳವಾರ ಹೇಳಿದೆ.ಮಂಡ್ಯದಲ್ಲಿ ಬೃಹತ್ ಸಮಾವೇಶ ನಡೆಸಿದ ಕಾಂಗ್ರೆಸ್ ಮುಖಂಡರು ಜೆಡಿಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು, ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಅನುಕೂಲವಾಗುವ ಮತ್ತು ಜನರ ಕುಡಿಯುವ ನೀರಿನ ಅಗತ್ಯತೆಗಳನ್ನು ಪೂರೈಸುವ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡುತ್ತಿಲ್ಲ. ಯೋಜನೆಗೆ ಒಪ್ಪಿಗೆ ಸಿಕ್ಕಿದ್ದರೆ ಜೆಡಿಎಸ್ ಮತ್ತು ಬಿಜೆಪಿ ನಾಯಕರಿಗೆ ಮಾಲಾರ್ಪಣೆ ಮಾಡುತ್ತಿದ್ದೆವು. ಕುಮಾರಸ್ವಾಮಿಯವರಿಗೆ ಅಧಿಕಾರದ ದಾಹ ಹೆಚ್ಚಿದೆ. ಹೀಗಾಗಿ ಅಧಿಕಾರದ ದುರಾಸೆಯಿಂದ ಚುನಾಯಿತ ಸರ್ಕಾರವನ್ನು ಕೆಡವಲು ಯತ್ನಿಸುತ್ತಿದ್ದಾರೆಂದು ಕಿಡಿಕಾರಿದರು.
ಎನ್‌ಡಿಆರ್‌ಎಫ್ ನಿಧಿ ನಿರಾಕರಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ವಿರುದ್ಧ ಹೋರಾಡಿದ ದೇಶದ ಏಕೈಕ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ. 36 ಲಕ್ಷ ರೈತರ 3600 ಕೋಟಿ ರೂ.ಗಳನ್ನು ಪಡೆಯಲು ನಾವು ಹೋರಾಟ ಮಾಡಿದ್ದೆವು. ನಮ್ಮ ಈ ಹೋರಾಟ ಕೇಂದ್ರ ಸರ್ಕಾರವನ್ನು ಬೆಚ್ಚಿಬೀಳಿಸಿದೆ, ಇದೀಗ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿದೆ.
ಆದರೆ, ರಾಜ್ಯಪಾಲರು ಸಂವಿಧಾನಕ್ಕಿಂತ ಮಿಗಿಲಾದವರಲ್ಲ, ಮುಖ್ಯಮಂತ್ರಿಗಳಿಗೆ ಕೆಲವೇ ಗಂಟೆಗಳಲ್ಲಿ ನೋಟಿಸ್ ನೀಡಿದ ರಾಜ್ಯಪಾರಲು ಮೂವರು ಮಾಜಿ ಸಚಿವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗಲಿಲ್ಲ. ರಾಜ್ಯದ ಕೇಂದ್ರ ಸಚಿವರು ಸರ್ಕಾರವನ್ನು ಕಿತ್ತೊಗೆಯುವ ಬದಲು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.