ಮಂಡ್ಯ : ಕೆ ಆರ್‌ ಎಸ್‌ ನೀರಿನ ಮಟ್ಟ ಏರಿಕೆ ….!

ಮಂಡ್ಯ:

    ಭರಣಿ ಮಳೆ ಬಳಿಕ ರಾಜ್ಯದಲ್ಲಿ ಕೃತ್ತಿಕಾ ಮಳೆಯ ಅಬ್ಬರ ಜೋರಾಗಿದ್ದು, ಕೆರೆ, ಕಟ್ಟೆ, ಹಳ್ಳ, ನದಿಗಳು ನಿಧಾನವಾಗಿ ಮರುಜೀವ ಪಡೆದುಕೊಳ್ಳುತ್ತಿವೆ. ಹಲವು ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಮ ಮಳೆಯಾಗುತ್ತಿರುವ ಕಾರಣ ಕಾವೇರಿ ನದಿ ಮೈದುಂಬಿಕೊಳ್ಳುತ್ತಿದ್ದು, ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದೆ.

    ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಹಲವು ಕಡೆ ನೀರಿಲ್ಲದೆ ಬತ್ತಿ ಹೋಗಿದ್ದ ಜೀವನದಿ ಕಾವೇರ ಮರುಜೀವ ಪಡೆದುಕೊಂಡಿದ್ದು, ನಿಧಾನವಾಗಿ ಹರಿಯಲು ಆರಂಭಿಸಿದೆ.

   ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ರಾಜ್ಯದ ಜಲಾಶಯಗಳ ಒಳಹರಿವು, ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕೃಷ್ಣರಾಜಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿರುವ ಮಾಹಿತಿಯನ್ನು ನೀಡಿದೆ.

     ಇಂದು (ಮೇ 14) ಜಲಾಶಯದ ಒಳಹರಿವು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. 802 ಕ್ಯೂಸೆಕ್ ಒಳಹರಿವು ದಾಖಲಾಗಿದ್ದು, ಕಳೆದ ಹಲವು ತಿಂಗಳಿನಲ್ಲಿ ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. 491 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, 50 ಕ್ಯೂಸೆಕ್ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ.

    ಇಂದು ಜಲಾಶಯದ ನೀರಿನ ಸಂಗ್ರಹ ಮಟ್ಟ 79.65 ಅಡಿ ಇದ್ದು, 10.633 ಟಿಎಂಸಿ ಅಡಿ ನೀರು ಇದೆ. ಕೆಆರ್ ಎಸ್ ಗರಿಷ್ಠ ಸಂಗ್ರಹ ಪ್ರಮಾಣ 49.452 ಟಿಎಂಸಿ ಆಗಿದೆ. ಸದ್ಯ ಒಟ್ಟು ಜಲಾಶಯ ಸಾಮರ್ಥ್ಯದ 21.50% ಮಾತ್ರ ಸಂಗ್ರಹವಾಗಿದೆ. ಕಳೆದ ಬಾರಿ ಮಳೆ ಕೈಕೊಟ್ಟ ಪರಿಣಾಮ ಮತ್ತು ತಮಿಳುನಾಡಿಗೆ ನೀರು ಹರಿಸಿದ ಪರಿಣಾಮ ಜಲಾಶಯ ನೀರಿನ ಸಂಗ್ರಹ ದಾಖಲೆ ಮಟ್ಟದಲ್ಲಿ ಕುಸಿತ ಕಂಡಿದೆ.

    ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ವರದಿಯಲ್ಲಿ ತಿಳಿಸಿದೆ.

    ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಮಂಡ್ಯ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು ಕಾವೇರಿ ನದಿ ಹರಿವು ಮತ್ತಷ್ಟು ಹೆಚ್ಚಾಗಲಿದೆ. ಈ ಬಾರಿ ಉತ್ತಮ ಮಳೆಯಾಗಿ ಜಲಾಶಯ ತುಂಬಿದರೆ ಸಾಕಪ್ಪ ಎನ್ನುವಂತಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap