ಬೆಂಗಳೂರು:
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 2025-28ರ ಸಾಲಿನ ಆಡಳಿತ ಮಂಡಳಿಯ ಚುನಾವಣೆಯ ದಿನಾಂಕ ಘೋಷಣೆ ಆಗಿದ್ದು, ನವೆಂಬರ್ 30ರಂದು ನಿಗದಿಯಾಗಿರುವ ಚುನಾವಣೆಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ನವೆಂಬರ್ 12ರ ಬುಧವಾರ ಮಧ್ಯಾಹ್ನ 12 ಗಂಟೆಗೆ ಆರಂಭವಾಗಲಿದೆ. ಬಿಸಿಸಿಐಯಲ್ಲಿ ಪ್ರಸ್ತುತ ಖಜಾಂಚಿಯಾಗಿರುವ ರಘುರಾಮ್ ಭಟ್ ನೇತೃತ್ವದ ಆಡಳಿತ ಮಂಡಳಿಯ ಅಧಿಕಾರಾವಧಿ ಸೆ.30 ರಂದು ಕೊನೆಗೊಂಡಿದೆ. ಆದರೆ, ಚುನಾವಣೆಗೆ ನಿರ್ದಿಷ್ಟ ದಿನಾಂಕವನ್ನು ಇನ್ನೂ ಘೋಷಿಸಿರಲಿಲ್ಲ. ಇದೀಗ ಕೊನೆಗೂ ದಿನಾಂಕ ಘೋಷಣೆಯಾಗಿದೆ.
ನಾಮಪತ್ರ ಸಲ್ಲಿಕೆಗೆ ನವೆಂಬರ್ 15 ಅಂತಿಮ ದಿನವಾಗಿದ್ದು, ಅಭ್ಯರ್ಥಿಗಳು ಮಧ್ಯಾಹ್ನ 12ರಿಂದ ಸಂಜೆ 5 ಗಂಟೆಯವರೆಗೆ ಉಮೇದುವಾರಿಕೆ ಸಲ್ಲಿಸಬಹುದಾಗಿದೆ. ಸ್ವೀಕೃತ ನಾಮಪತ್ರಗಳ ಪರಿಶೀಲನೆ ನವೆಂಬರ್ 17ರ ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಲಿದ್ದು, ಸಂಜೆ 5 ಗಂಟೆಗೆ ಮಾನ್ಯತೆ ಹೊಂದಿರುವ ನಾಮಪತ್ರಗಳ ಪಟ್ಟಿ ಪ್ರಕಟವಾಗಲಿದೆ.
ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ನವೆಂಬರ್ 18 ಅಂತಿಮ ದಿನವಾಗಿದೆ. 19ರ ಸಂಜೆ 5 ಗಂಟೆಗೆ ಚುನಾವಣೆಯ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ನವೆಂಬರ್ 30ರಂದು ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಮತದಾನ ಪ್ರಕ್ರಿಯೆ ಬಳಿಕ ಅದೇ ದಿನ ಫಲಿತಾಂಶ ಪ್ರಕಟವಾಗಲಿದೆ.
ಟೀಮ್ ಇಂಡಿಯಾದ ಮಾಜಿ ವೇಗಿ ಹಾಗೂ ಕೆಎಸ್‌ಸಿಎ ಮಾಜಿ ಉಪಾಧ್ಯಕ್ಷ ವೆಂಕಟೇಶ್ ಪ್ರಸಾದ್ ಮತ್ತು ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಬಣ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. 12 ವರ್ಷ ಬಳಿಕ ವೆಂಕಟೇಶ್ ಮತ್ತೆ ಕೆಎಸ್‌ಸಿಎಗೆ ಆಗಮಿಸುವ ನಿರೀಕ್ಷೆಯಲ್ಲಿದ್ದಾರೆ. ವೆಂಕಟೇಶ್ ಈ ಹಿಂದೆ 2010ರಿಂದ 2013ರ ವರೆಗೆ ಕೆಎಸ್‌ಸಿಎ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಆಗ ಅನಿಲ್ ಕುಂಬ್ಳೆ ಅಧ್ಯಕ್ಷರಾಗಿದ್ದರು. ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. ಭಾರತದ ಪರ 33 ಟೆಸ್ಟ್, 161 ಏಕದಿನ ಪಂದ್ಯಗಳನ್ನಾಡಿರುವ ವೆಂಕಟೇಶ್ ಕ್ರಮವಾಗಿ 96 ಮತ್ತು196 ವಿಕೆಟ್ ಕಿತ್ತಿದ್ದಾರೆ.
ವಿನಯ್ ಮೃತ್ಯುಂಜಯ 2019ರಿಂದ 2022ರ ವರೆಗೆ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಬಿಸಿಸಿಐ ಆರ್ಥಿಕ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಕ್ರೀಡಾಂಗಣದ ಸಬ್ ಏರ್ ಸಿಸ್ಟಮ್ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳ ಹಿಂದೆ ವಿನಯ್ ಕೊಡುಗೆಯಿದೆ. ಹೀಗಾಗಿ ವಿನಯ್ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಮತ್ತೊಮ್ಮೆ ಉನ್ನತ ಮಟ್ಟಕ್ಕೇರಿಸುವ ವಿಶ್ವಾಸ ಹೊಂದಿದ್ದಾರೆ. ಸದ್ಯ ಕಾಲ್ತುಳಿತದಿಂದಾಗಿ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹಲವು ಮಹತ್ವದ ಟೂರ್ನಿ, ಸರಣಿ ಸ್ಥಳಾಂತರಗೊಂಡಿವೆ.
ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ನೈತಿಕ ಹೊಣೆ ಹೊತ್ತು ಎ.ಶಂಕರ್ ಮತ್ತು ಇ.ಎಸ್. ಜೈರಾಮ್ ರಾಜೀನಾಮೆ ನೀಡಿದ ನಂತರ ಕೆಎಸ್‌ಸಿಎಗೆ ಚುನಾಯಿತ ಕಾರ್ಯದರ್ಶಿ ಮತ್ತು ಖಜಾಂಚಿ ಇಲ್ಲದಂತಾಗಿದೆ








