ನವೆಂಬರ್ 1 ರಿಂದ 29 ರ ವರೆಗೆ ಕೆ.ಎಸ್.ಪಿ.ಎಲ್ ಕ್ರೀಡಾ ಕೂಟ

ಬೆಂಗಳೂರು:

    ಸಮುದಾಯವನ್ನೊಳಗೊಂಡ ಕ್ರಿಕೆಟ್ ಪ್ರೇರಿತ ಕ್ರೀಡಾ ಚಟುವಟಿಕೆ ಉತ್ತೇಜಿಸುವ ನಿಟ್ಟಿನಲ್ಲಿ ತೊಡಗಿಕೊಂಡಿರುವ ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ (ಕೆ.ಎಸ್.ಪಿ.ಎಲ್) ರಾಜ್ಯದಲ್ಲಿ ಇದೀಗ ಎರಡನೇ ಆವೃತ್ತಿಯ ಕ್ರೀಡಾ ಕೂಟಕ್ಕೆ ಸಜ್ಜಾಗಿದೆ. ನವೆಂಬರ್ 1 ರಿಂದ 29 ರ ವರೆಗೆ ಇಡೀ ತಿಂಗಳು ಕ್ರೀಡೆಯಲ್ಲಿ ಕನ್ನಡದ ಕಂಪನ್ನು ಪಸರಿಸಲು ಸಿದ್ಧತೆಗಳು ನಡೆಯುತ್ತಿವೆ.

    ನಗರದ ಎಪಿಎಸ್ ಕ್ರೀಡಾಂಗಣದಲ್ಲಿ ಪಂದ್ಯಗಳು ಆಯೋಜನೆಗೊಂಡಿದ್ದು, ಸ್ಥಳೀಯ ಕ್ರೀಡಾ ಪ್ರತಿಭೆಗಳಿಗೆ ಈ ಕ್ರೀಡಾ ಕೂಟ ಉಜ್ವಲ ಅವಕಾಶ ಕಲ್ಪಿಸುತ್ತಿದ್ದು, ಐಕಾನ್ ಆಟಗಾರನ್ನು ಅಕ್ಟೋಬರ್ ನಲ್ಲಿ ಹರಾಜು ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. 

    ಕೊಡಿಗೆಹಳ್ಳಿ ಗೇಟ್ ನ ಹಯಾತ್ ಹೋಟೆಲ್ ನಲ್ಲಿ ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ (ಕೆ.ಎಸ್.ಪಿ.ಎಲ್) ಜರ್ಸಿಯನ್ನು ವಿಧಾನಪರಿಷತ್ ಶಾಸಕರಾದ ಟಿ.ಎ. ಶರವಣ, ಐಎಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಅನಿಲ್ ಕುಮಾರ್, ಕನ್ನಡದ ಸೆಲೆಬ್ರೆಟಿಗಳಾದ ಶಶಿಕುಮಾರ್, ಮಾನ್ವಿತಾ, ರೇಷ್ಮಾ ನಾಣಯ್ಯ, ಪ್ರೀತಿ ಗೌಡ, ಪ್ರಥ್ವಿ ಅಂಬರ್, ಸಾತ್ವಿಕ, ಬೃಂದಾ ಆಚಾರ್, ಕೆ.ಎಸ್.ಪಿ.ಎಲ್ ಅಧ್ಯಕ್ಷ ಗಂಗಾಧರ ರಾಜು, ಪ್ರಧಾನ ಕಾರ್ಯದರ್ಶಿ ರಘು ಅವರು ಜರ್ಸಿ ಬಿಡುಗಡೆ ಮಾಡಿದರು.

    ಕೆ.ಎಸ್.ಪಿ.ಎಲ್‌ ನಲ್ಲಿ ಈ ಬಾರಿ ರಾಜ್ಯದ ಎಲ್ಲಾ ಜಿಲ್ಲೆಗಳ ಒಟ್ಟು 32 ಹಣಾಹಣಿಗೆ ಸಜ್ಜಾಗಿದ್ದು, ಪ್ರತಿಯೊಂದು ತಂಡಕ್ಕೂ ಕರ್ನಾಟಕ ಆಳಿದ ರಾಜಮನೆತನದ ಹೆಸರುಗಳನ್ನು ಇಡಲಾಗಿದೆ. ಕದಂಬರ ಗುಂಪು, ಚಾಲುಕ್ಯರ ಗುಂಪು, ಗಂಗರ ಗುಂಪು, ರಾಷ್ಟ್ರಕೂಟರ ಗುಂಪು, ಹೊಯ್ಸಳರ ಗುಂಪು, ವಿಜಯನಗರ ಸಾಮ್ರಾಜ್ಯದ ಗುಂಪು, ಮೈಸೂರು ಅರಸ ಗುಂಪು ಎಂದು ತಂಡಗಳನ್ನು ಹೆಸರಿಸಲಾಗಿದೆ.ನಟ ಶಶಿಕುಮಾರ್ ಮಾತನಾಡಿ, ಯುವ ಜನಾಂಗಕ್ಕೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಒಲವಿದ್ದು, ಗಲ್ಲಿ ಗಲ್ಲಿಗಳಲ್ಲಿ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವುದು ವಿಶೇಷ ಎಂದರು.

   ಕೆ.ಎಸ್.ಪಿ.ಎಲ್ ಅಧ್ಯಕ್ಷ ಗಂಗಾಧರ ರಾಜು ಮಾತನಾಡಿ, ಶೀಘ್ರದಲ್ಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಗಿದೆ. ವೇಳಾಪಟ್ಟಿಯನ್ನು ಇಷ್ಟರಲ್ಲೇ ಬಿಡುಗಡೆ ಮಾಡುತ್ತೇವೆ. ಕ್ರೀಡೆಯಲ್ಲಿ ಏಕತೆ, ಶಕ್ತಿ ಮತ್ತು ಸ್ಪರ್ಧಾತ್ಮಕ ಮನೋಭಾವನೆ ಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಕರ್ನಾಟಕ ಸಾಫ್ಟ್ಬಾಲ್ ಪ್ರೀಮಿಯರ್ ಲೀಗ್ ತೊಡಗಿ ಕೊಂಡಿದೆ ಎಂದರು.

   ಕೆ.ಎಸ್.ಪಿ.ಎಲ್ ಪ್ರಧಾನ ಕಾರ್ಯದರ್ಶಿ ರಘು ಮಾತನಾಡಿ, ಒಟ್ಟು 32 ತಂಡಗಳಿಗೆ 32 ಮಂದಿ ಸೆಲೆಬ್ರೆಟಿ ರಾಯಭಾರಿಗಳನ್ನು ನೇಮಿಸಿದ್ದು, ಕ್ರಿಕೆಟ್‌ ಅಭಿಮಾನಿಗಳು, ಉದ್ಯಮಿಗಳು, ಕ್ರೀಡಾ ಪ್ರೇಮಿಗಳ ತಂಡ ಕ್ರಿಕೆಟ್‌ ಹಬ್ಬವನ್ನು ಮತ್ತಷ್ಟು ರೋಚಕಗೊಳಿಸಲಿದೆ. ಕೆ.ಎಸ್.ಪಿ.ಎಲ್‌ ಕೇವಲ ಕ್ರೀಡಾ ಸಂಭ್ರಮವಲ್ಲದೆ, ಪ್ರತಿಭೆ, ಮನರಂಜನೆ ಮತ್ತು ಸಮುದಾಯದ ಒಗ್ಗಟ್ಟನ್ನು ಉತ್ತೇಜಿಸುವ ವೇದಿಕೆಯಾಗಲಿದೆ ಎಂದರು.

Recent Articles

spot_img

Related Stories

Share via
Copy link