ಬೆಂಗಳೂರು:
ಸೋರುತ್ತಿದ್ದ ಮಳೆ ನೀರಿನಿಂದ ರಕ್ಷಣೆ ಪಡೆಯಲು ವಾಯುವ್ಯ ಕರ್ನಾಟಕ ಸಾರಿಗೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಚಾಲಕರೊಬ್ಬರು ಛತ್ರಿ ಹಿಡಿದುಕೊಂಡೇ ಬಸ್ ಚಾಲನೆ ಮಾಡಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೆಎಸ್ಆರ್‌ಟಿಸಿ ಬಸ್ ನಿಗಮ ಇದೀಗ ಎಚ್ಚೆತ್ತುಕೊಂಡಿದೆ. ಬಸ್‌ಗಳನ್ನು ಮುಂಗಾರಿಗೆ ಸಿದ್ಧವಾಗಿಡಲು ಮತ್ತು ಯಾವುದೇ ಬಸ್‌ನಲ್ಲಿ ಸೋರಿಕೆಯಾಗದಂತೆ ನೋಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೆಎಸ್‌ಆರ್‌ಟಿಸಿ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚನೆ ನೀಡಿದೆ.
ನಿಗಮಕ್ಕೆ ಸೇರಿದ ಬಸ್‌ಗಳಲ್ಲಿ ಯಾವುದೇ ರೀತಿಯ ಸೋರಿಕೆಯಾಗದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮತ್ತು ಸಂಬಂಧಪಟ್ಟ ಬಸ್ ಚಾಲಕರು ಮತ್ತು ಕಂಡಕ್ಟರ್‌ಗಳು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನಿಗಮ ತಿಳಿಸಿದೆ.
ಮೇ 23ರಂದು ಬೆಟಗೇರಿ ಧಾರವಾಡ ಮಾರ್ಗವಾಗಿ ಸಂಚರಿಸುವ ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿ ಬಸ್ ಚಾಲಕ ಹನುಮಂತಪ್ಪ ಎಂಬುವವರು ಮಳೆಯ ನಡುವೆ ಕೊಡೆ ಹಿಡಿದುಕೊಂಡು ಬಸ್ ಓಡಿಸುತ್ತಿದ್ದರು. ಈ ವಿಡಿಯೋ ವೈರಲ್ ಆದ ನಂತರ, ಬಸ್ ಛಾವಣಿಯಿಂದ ಯಾವುದೇ ಸೋರಿಕೆಯಾಗಿಲ್ಲ. ಬಸ್ಸಿನಲ್ಲಿ ಪ್ರಯಾಣಿಕರಿಲ್ಲದ ಕಾರಣ ಬಸ್ ಕಂಡಕ್ಟರ್ ಅನಿತಾ ಮತ್ತು ಚಾಲಕ ತಮಾಷೆಯ ವಿಡಿಯೋವನ್ನು ಚಿತ್ರೀಕರಿಸಿದ್ದರು ಎಂದು ಸ್ಪಷ್ಟಪಡಿಸಲಾಗಿತ್ತು.
ಈ ವಿಡಿಯೋ ರಾಜ್ಯದ ಪ್ರತಿಪಕ್ಷಗಳಿಗೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ದೂಷಿಸಲು ಅಸ್ತ್ರ ಸಿಕ್ಕಂತಾಗಿತ್ತು. ಸಾರ್ವಜನಿಕರು ನಿಗಮದ ಕಾರ್ಯವೈಖರಿಯನ್ನು ಟೀಕಿಸಿದ್ದರು ಮತ್ತು ಶಕ್ತಿ ಯೋಜನೆ ಪ್ರಾರಂಭಿಸಿದ ನಂತರ ಬಸ್‌ನಲ್ಲಿನ ಸೋರಿಕೆಯನ್ನು ತಡೆಗಟ್ಟಲು ಸರ್ಕಾರದ ಬಳಿ ಹಣವಿಲ್ಲ ಎಂದು ದೂಷಿಸಿದ್ದರು.
ವಿಡಿಯೋ ಬಗ್ಗೆ ಉನ್ನತ ಅಧಿಕಾರಿಗಳು ಅಸಮಾಧಾನಗೊಂಡಿದ್ದು, ಬಸ್ ಸೋರಿಕೆಗೆ ಸಂಬಂಧಿಸಿದ ಯಾವುದೇ ದೂರುಗಳು ದಾಖಲಾಗುವುದನ್ನು ತಾವು ಬಯಸುವುದಿಲ್ಲ ಎಂದಿರುವುದಾಗಿ ಕೆಎಸ್‌ಆರ್‌ಟಿಸಿಯ ಮೂಲಗಳು ತಿಳಿಸಿವೆ.
ಯಾವುದೇ ಸೋರಿಕೆಯಾಗದಂತೆ ಬಸ್‌ನ ಸಂಪೂರ್ಣ ತಪಾಸಣೆ ನಡೆಸುವಂತೆ ತಿಳಿಸಲಾಗಿದೆ. ಛಾವಣಿ, ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಮಳೆನೀರು ಬಸ್‌ನೊಳಗೆ ಬರದಂತೆ ನೋಡಿಕೊಳ್ಳಬೇಕು. ಇದಲ್ಲದೆ, ತುರ್ತು ಬಾಗಿಲುಗಳನ್ನು ಪರೀಕ್ಷಿಸಬೇಕು. ಸೋರಿಕೆಗೆ ಸಂಬಂಧಪಟ್ಟ ಯಾವುದೇ ದೂರುಗಳಿದ್ದಲ್ಲಿ, ವಿಭಾಗೀಯ ನಿಯಂತ್ರಕರು ಮತ್ತು ಬಸ್ ಚಾಲಕ ಮತ್ತು ಕಂಡಕ್ಟರ್ ನೇರ ಹೊಣೆಗಾರರಾಗುತ್ತಾರೆ ಎಂದು ವಿಭಾಗ ನಿಯಂತ್ರಕರಿಗೆ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.