ಬೆಂಗಳೂರು:
ಕೆಎಸ್‌ಆರ್‌ಟಿಸಿಯ ʼಅವತಾರ್ʼ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ನಲ್ಲಿ ದಾಖಲೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಕೆಎಸ್‌ಆರ್‌ಟಿಸಿಯ ʼಅವತಾರ್ʼ ಆನ್‌ಲೈನ್ ಟಿಕೆಟ್ ಬುಕ್ಕಿಂಗ್‌ನಲ್ಲಿ ಭಾನುವಾರ (ನವೆಂಬರ್ 3) ಒಂದೇ ದಿನ 85 ಸಾವಿರ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿರುವುದು ದಾಖಲೆಯಾಗಿದೆ. ಅಕ್ಟೋಬರ್ 30 ರಂದು 67 ಸಾವಿರ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ್ದರು. ಆನ್‌ಲೈನ್ ಟಿಕೆಟಿಂಗ್ ವ್ಯವಸ್ಥೆಯಲ್ಲಿ ನಾವು ಹೊಸ ದಾಖಲೆ ಬರೆದಿದ್ದೇವೆ. ನಮ್ಮ ವ್ಯವಸ್ಥೆ ಪ್ರಯಾಣಿಕ ಸ್ನೇಹಿಯಾಗಿದೆ.
ಹೊಸದಾದ, ಪರಿಸರ ಸ್ನೇಹಿ ವ್ಯವಸ್ಥೆಯನ್ನು ನಾವು ಶೀಘ್ರದಲ್ಲಿಯೇ ಪರಿಚಯಿಸಲಿದ್ದೇವೆ. ಕಾಗದ ಬಳಕೆ ಕಡಿಮೆ ಮಾಡಲು ಡಿಜಿಟಲ್ ಟಿಕೆಟಿಂಗ್ ವ್ಯವಸ್ಥೆಯೂ ಬರಲಿದೆ. ಎಲ್ಲರೂ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸುವಾಗ ನಮ್ಮ ಸಾರಿಗೆ ನೌಕರರು ಹಬ್ಬಕ್ಕೂ ರಜೆ ಮಾಡದೇ ಪ್ರಯಾಣಿಕರನ್ನು ತಮ್ಮ ಗಮ್ಯಕ್ಕೆ ತಲುಪಿಸುವ ಕೆಲಸ ಮಾಡಿದ್ದಾರೆ. ಚಾಲಕರು, ನಿರ್ವಾಹಕರು ಸೇರಿದಂತೆ ಇಡೀ ಸಾರಿಗೆ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆಯಿಂದಾಗಿ ಈ ಸಾಧನೆ ಸಾಧ್ಯವಾಗಿದೆ ಎಂದಿದ್ದಾರೆ.