ಬಸ್ ಹತ್ತುವ ಮುಂಚೆ ಊಟ ಮಾಡಿ ಹತ್ತಿ, ಇಲ್ಲದಿದ್ದರೆ ಆರೋಗ್ಯ ಗೋವಿಂದ!

  ತಿಪಟೂರು :

      ದೇಶ ಸುತ್ತಿ ನೋಡು, ಕೋಶ ಓದಿ ನೋಡುವ ಎನ್ನುವ ಗಾದೆ ಇದೆ. ಅದರಂತೆ ಇಂದು ಹಲವಾರು ಜನರಿಗೆ ಹೊಟ್ಟೆಪಾಡಿಗಾಗಿ, ಇನ್ನು ಕೆಲವರಿಗೆ ಪ್ರವಾಸಕ್ಕಾಗಿ, ವಿವಿಧ ಕಾರ್ಯಗಳಿಗಾಗಿ ಪ್ರಯಾಣ ಅನಿವಾರ್ಯ. ಆದರೆ ಇದನ್ನೇ ಕೆಲವು ಹೋಟೆಲ್‍ನವರು ಬಂಡವಾಳ ಮಾಡಿಕೊಂಡು ಪ್ರಯಾಣಿಕರ ಜೀವನದ ಜೊತೆ ಆಟವಾಡುತ್ತಿದ್ದಾರೆ.

      ಇಂದಿನ ಜೀವನವೆಂದರೆ ಗಾಲಿ ಮೇಲೆ ಓಡಾಡುವುದು ಅನಿವಾರ್ಯ. ಆದರೆ ಇಂದು ಜೀವನದ ಜಂಜಾಟ ಹಾಗೂ ಗಡಿಬಿಡಿ ಜೀವನದಲ್ಲಿ ಮನೆಯ ಊಟ-ತಿಂಡಿಯನ್ನು ಆದಷ್ಟು ಕಡಿಮೆ ಮಾಡಿ ಹೇಗೂ ಬಸ್‍ನವರು ತಿಂಡಿಗಾಗಿ ನಿಲ್ಲಿಸುತ್ತಾರಲ್ಲ, ಅಲ್ಲಿಯೇ ತಿಂಡಿಯನ್ನು ತಿಂದರಾಯಿತು ಎಂದು ಹೊರಡುವ ಪ್ರಯಾಣಿಕರಿಗೆ ದುಬಾರಿ ಬೆಲೆಯನ್ನು ಕೊಟ್ಟರು ಸಹ ಉತ್ತಮವಾದ ಊಟ, ತಿಂಡಿ ಸಿಗುತ್ತಿಲ್ಲವೆಂಬುದು ಪ್ರಯಾಣಿಕರ ಕೊರಗಾಗಿದೆ. ಈ ಬಗ್ಗೆ ಹಲವಾರು ದೂರುಗಳು ಬಂದರು, ಕರ್ನಾಟಕ ರಾಜ್ಯರಸ್ತೆ ಸಾರಿಗೆ ಸಂಸ್ಥಯವರು ಯಾವುದೆ ಕ್ರಮ ಕೈಗೊಳ್ಳದೆ ತಮ್ಮ ಆದಾಯ ತಮಗೆ ಬಂದರಾಯಿತು ಎಂದು ಕಣ್ಮುಚ್ಚಿ ಕುಳಿತಿರುವುದಕ್ಕೆ ಬಸ್‍ನ ಪ್ರಯಾಣಿಕರು ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

      ತಿಂಡಿ-ಊಟ ಮಾಡಲು ಬಸ್ ಇಳಿಯುವ ಪ್ರಯಾಣಿಕರಿಗೆ ಬಸ್ ಹೊರಡುವ ಭಯ, ಲಗೇಜಿನ ಬಗ್ಗೆ ಆತಂಕ, ಇದರ ಮಧ್ಯೆ ದುಪ್ಪಟ್ಟು ಹಣ ನೀಡಿ ತೆಗೆದುಕೊಂಡ ತಿಂಡಿಯಲ್ಲಿ ಏನೂ ಸತ್ವವಿಲ್ಲದಿರುವುದರ ಜೊತೆಗೆ ಸ್ವಚ್ಛತೆಯನ್ನು ಕೇಳುವ ಹಾಗೆಯೆ ಇಲ್ಲ. ಇದೆಲ್ಲದರ ನಡುವೆ ಇನ್ನೇನು ಆಹಾರವನ್ನು ಬಾಯಿಗೆ ಹಾಕಬೇಕೆನ್ನುವ ಹೊತ್ತಿಗೆ ಸರಿಯಾಗಿ ಬಸ್ ನಿರ್ವಾಹಕ ಬೇಗೆ ಬೇಗ ಹೊರಡಿ ಎಂದು ಸೀಟಿಯನ್ನು ಊದಿಯೇ ಬಿಡುತ್ತಾನೆ. ಹೇಗೋ ಅರ್ಧ ತಿಂಡಿ ತಿಂದು ನೀರು ಕುಡಿಯೋಣವೆನ್ನುವಷ್ಟರಲ್ಲಿ ಅಲ್ಲಿನ ಲೋಟ ನೋಡಿ ವಾಂತಿಯನ್ನು ಸುಧಾರಿಸಿಕೊಂಡು ಹೋಟೆಲ್‍ನಲ್ಲಿ ಅರ್ಧಲೀಟರ್ ನೀರು ಕೊಡಿ ಎಂದರೆ ಅರ್ಧಲೀಟರ್ ಇಲ್ಲ ಬೇಕಾದರೆ ಒಂದು ಲೀಟರ್ ತೆಗೆದುಕೊಳ್ಳಿ ಎಂದು ಗ್ರಾಹಕರನ್ನು ದೋಚುತ್ತಿದ್ದಾರೆ. ಇದರ ಬಗ್ಗೆ ದಿನನಿತ್ಯ ಹೋಟೆಲ್‍ಗಳಲ್ಲಿ ಒಂದಿಲ್ಲೊಂದು ಜಗಳ ನಡೆಯುತ್ತಲೇ ಇರುತ್ತದೆ.
ಒಂದು ಬಸ್‍ಗೆ 50 ರೂ. ಅಂತೆ : ಬಸ್‍ಗಳ ನಿರ್ವಾಹಕರು ಮತ್ತು ಚಾಲಕರು ಹೇಳುವಂತೆ ನಮಗೆ ಇಂತಹ ಹೋಟೆಲ್‍ಗಳಲ್ಲಿಯೇ ನಿಲ್ಲಿಸಬೇಕೆಂದು ಘಟಕದಲ್ಲಿ ತಿಳಿಸಿರುತ್ತಾರೆ, ಅದಕ್ಕೆ ಹೋಟೆಲ್ ಮಾಲೀಕರು ಸಂಸ್ಥೆಯ ಜೊತೆಗೆ ಒಪ್ಪಂದ ಮಾಡಿಕೊಂಡಿರುತ್ತಾರೆ. ಅದರಂತೆ ನಾವು ನಿಲ್ಲಿಸುತ್ತೇವೆ, ಅವರು ಒಂದು ಬಸ್‍ಗೆ 50 ರೂ. ನಂತೆ ಸಂಸ್ಥೆಗೆ ಕಟ್ಟುತ್ತಾರೆ ಎಂದು ತಿಳಿಸುತ್ತಾರೆ.

 ಸಾರಿಗೆ ನಿಯಮದ ಪ್ರಕಾರ ಸಲಹಾ ಪೆಟ್ಟಿಗೆ ಇರಬೇಕು :

      ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಒಪ್ಪಂದ ಮಾಡಿಕೊಂಡ ಹೋಟೆಲ್‍ಗಳಲ್ಲಿ ಘಟಕದ ವ್ಯವಸ್ಥಾಪಕರು ತಿಳಿಸುವಂತೆ ಆಹಾರದ ಗುಣಮಟ್ಟದ ಬಗ್ಗೆ ತಿಳಿಸಲು ಮತ್ತು ಏನಾದರೂ ಆಹಾರದ ಬಗ್ಗೆ ದೂರು ನೀಡಲು ಮತ್ತು ಏನಾದರೂ ಸಲಹೆಯನ್ನು ನೀಡಲು ಒಂದು ಸಲಹಾ ಪೆಟ್ಟಿಗೆ ಇರಲೆಬೇಕು. ಇದನ್ನು ಸಾರಿಗೆ ಅಧಿಕಾರಿಗಳು ಆಗಿಂದಾಗ್ಗೆ ಪರೀಕ್ಷಿಸಬೇಕು. ಆದರೆ ಇಲ್ಲಿಗೆ ಸಾರಿಗೆ ಅಧಿಕಾರಿಗಳು ಬರುವುದೇ ಇಲ್ಲವನ್ನಿಸುತ್ತದೆ. ಏಕೆಂದರೆ ಯಾವುದೇ ಹೋಟೆಲ್‍ಗಳಲ್ಲಿಯೂ ಸಲಹಾ ಪೆಟ್ಟಿಗೆಯೇ ಇರುವುದಿಲ್ಲ. ಇದು ನಮ್ಮ ಸಂಸ್ಥೆಗೆ ದುಡ್ಡು ಬಂದರೆ ಸಾಕು, ನಮಗೂ ಗ್ರಾಹಕರಿಗೂ ಸಂಬಂಧವೆ ಇಲ್ಲವೆನ್ನುವಂತೆ ಅಧಿಕಾರಿಗಳು ವರ್ತಿಸುವುದಕ್ಕೆ ಸಾಕ್ಷಿಯಾಗಿದೆ.

ಆಹಾರ ಪರೀಕ್ಷಕರು ಎಲ್ಲಿದ್ದಾರೆ? :

      ಇನ್ನು ಇಷ್ಟೆಲ್ಲಾ ಅಧ್ವಾನಗಳು ಹೋಟೆಲ್‍ಗಳಲ್ಲಿ ನಡೆಯುತಿದ್ದರೂ ಆಹಾರ ಪರೀಕ್ಷಿಸುವ ಆರೋಗ್ಯಾಧಿಕಾರಿಗಳು ಎಲ್ಲಿದ್ದಾರೆ ಎಂಬ ಪ್ರಶ್ನೆಯು ಎಲ್ಲರಲ್ಲಿ ಮೂಡುವುದು ಸಹಜ. ಇನ್ನು ಬಹುತೇಕ ಹೋಟೆಲ್‍ಗಳಲ್ಲಿ ಪರವಾನಗಿಯನ್ನು ಪಡೆಯದೇ ಆಹಾರವನ್ನು ತಯಾರಿಸುವ ಸೂಚನೆಯನ್ನು ಪಾಲಿಸದೇ ತಮಗೆ ಇಷ್ಟಬಂದ ಕೃತಕ ಬಣ್ಣಗಳನ್ನು ಬಳಸುವುದರ ಜೊತೆಗೆ ನಿಷೇಧಿತ ಟೇಸ್ಟಿಂಗ್ ಪೌಡರ್ (ಅಜಿನ್ಮೋಟೊ) ವನ್ನು ಬಳಸಿ ಫಾಸ್ಟ್‍ಫುಡ್‍ಗೆ ಬಳಸುವುದಲ್ಲದೇ ಕಳಪೆ ದರ್ಜೆಯ ಸಾಸ್‍ಗಳನ್ನು ಬಳಸುತ್ತಿದ್ದರೂ, ಆಹಾರ ಪರೀಕ್ಷಕರು ಯಾವುದೇ ಹೋಟೆಲ್‍ಗಳಿಗೆ ದಾಳಿಮಾಡಿ ಗುಣಮಟ್ಟ ಪರೀಕ್ಷಿಸಿದ ಉದಾಹರಣೆಗಳನ್ನು ಹುಡುಕಬೇಕಷ್ಟೆ.

ಕೆಲವು ಹೋಟೆಲ್‍ಗಳಲ್ಲಿ ದರಪಟ್ಟಿಯೇ ಇಲ್ಲ :

     ಕೆಲವು ಹೋಟೆಲ್‍ನವರು ಒಂದು ಹೆಜ್ಜೆ ಮುಂದೆ ಹೋಗಿ ಕುಳಿತುಕೊಳ್ಳಿ ಕೊಡುತ್ತೇವೆ ಎಂದು ಹೇಳಿ ನಾವು ಕೇಳಿದ ಫ್ರೈಡ್‍ರೈಸ್, ಚಿತ್ರಾನ್ನ, ರೈಸ್‍ಬಾತ್ ಎಂದು ಹೇಳಿ ಒಂದೇ ಆಹಾರವನ್ನು ನೀಡಿ ಎಲ್ಲದಕ್ಕೂ ಬೇರೆಬೇರೆ ದರ ವಿಧಿಸುತ್ತಾರೆ. ಆದರೆ ನಾವು ಹೊರಡುವ ಸಮಯಕ್ಕೆ ಸರಿಯಾಗಿ ದುಬಾರಿ ಬೆಲೆಯನ್ನು ಕೇಳುತ್ತಾರೆ. ಇತ್ತ ತಿಂದಿರುವ ತಪ್ಪಿಗೆ ಕೊಟ್ಟು ಹೊರಡುವ ದಾರಿ ಬಿಟ್ಟು ಬೇರೆ ದಾರಿಯೇ ಇಲ್ಲ.

      ಇಷ್ಟೆಲ್ಲ ಅಡೆತಡೆಗಳ ನಡುವೆ ಆಹಾರವನ್ನು ಸೇವಿಸುವ ಪ್ರಯಾಣಿಕರಿಗೆ ಮುಂದಿನ ನಿಲ್ದಾಣವನ್ನು ತಲುಪುವ ಹೊತ್ತಿಗೆ ಹೊಟ್ಟೆನೋವು, ವಾಂತಿ-ಭೇದಿ ಮುಂತಾದ ಸಮಸ್ಯೆಗಳು ಕಾಡುತ್ತವೆ. ಇನ್ನೇನು ಬೇಸಿಗೆ ಕಾಲ ಪ್ರಾರಂಭವಾಗುತ್ತಿದ್ದು,ಆದಷ್ಟು ಬೇಗ ಇದಕ್ಕೆ ಆಹಾರ ನಿರೀಕ್ಷಕರು ಸೇರಿದಂತೆ ಸಾರಿಗೆ ಇಲಾಖೆಯವರು ಗಮನ ಹರಿಸದಿದ್ದರೆ ಪ್ರಯಾಣಿಕರು ಆರೋಗ್ಯ ಕಳೆದುಕೊಳ್ಳುವುದರಲ್ಲಿ ಸಂಶಯವೆ ಇಲ್ಲ.
ನಮ್ಮ ಬಸ್‍ಗಳನ್ನು ಎಲ್ಲಿಯೂ ನಿಲ್ಲಿಸುವುದಿಲ್ಲ. ಕೆಲವು ಬಸ್‍ಗಳನ್ನು ಸ್ಥಳೀಯ ಹೋಟೆಲ್‍ಗಳಲ್ಲಿ ನಿಲ್ಲಿಸಲಾಗುತ್ತದೆ. ಅಲ್ಲಿ ನಾವು ಹೋದಾಗ ಊಟ-ತಿಂಡಿ ಚೆನ್ನಾಗಿ ಇರುತ್ತದೆ, ಬೇರೆ ಹೋಟೆಲ್‍ಗಳಲ್ಲಿ ನಮಗೆ ಅನ್ವಿಯಿಸುವುದಿಲ್ಲವೆಂದು ತಿಪಟೂರು ಘಟಕದ ವ್ಯವಸ್ಥಾಪಕರು ಬೇಜವಾಬ್ದಾರಿ ಉತ್ತರವನ್ನು ಕೊಡುತ್ತಾರೆ.

      ಅನಿವಾರ್ಯ ಕಾರಣಗಳಿಂದ ನಾವು ಹೊರಗಡೆ ತಿಂಡಿ ತಿಂದರಾಯಿತು, ತಡವಾಗುತ್ತದೆ ಎಂದು ತಿಂಡಿ ತಿನ್ನಲು ಬಂದರೆ ಇಲ್ಲಿನ ದುಬಾರಿ ಬೆಲೆಯ ಜೊತಗೆ ಕಳಪೆ ಆಹಾರ ಕೊಡುತ್ತಾರೆ, ನಮಗೆ ವಿಧಿ ಇಲ್ಲದೆ ತಿನ್ನಬೇಕಾಗುತ್ತದೆ.

– ಪ್ರದೀಪ್, ಪ್ರಯಾಣಿಕ

     ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗುತ್ತಿದ್ದೇನೆ. ಅನಿವಾರ್ಯವಾಗಿ ಹೊಟ್ಟೆ ಹಸಿವಿನಿಂದ ಇಲ್ಲಿ ಊಟ ಮಾಡಲು ಹೋದರೆ ಊಟಕ್ಕೆ 100 ರೂ. ಎನ್ನುತ್ತಾರೆ. ನನ್ನ ಹತ್ತಿರ ಅಷ್ಟು ಹಣವಿಲ್ಲ. ಅದಕ್ಕೆ ಒಂದು ಮೊಸರನ್ನಕ್ಕೆ 60 ರೂಪಾಯಿಯೆ? ಹೀಗಾದರೆ ನಾವು ಬದುಕುವುದು ಹೇಗೆ ಎಂದ ಪ್ರಯಾಣಿಕರೊಬ್ಬರು, ಇಂತಹ ಆಹಾರವನ್ನು ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳುವುದಕ್ಕಿಂತ ನೀರು ಕುಡಿದು ಹೊಟ್ಟೆ ತುಂಬಿಸಿಕೊಳ್ಳುವುದು ಒಳ್ಳೆಯದು ಎಂದು ನೊಂದು ನುಡಿಯುತ್ತಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap