ಜಗಳೂರು :
ಕಳೆದ ಕೆಲ ದಿನಗಳಿಂದ ದಾವಣಗೆರೆ ಜಗಳೂರು ಮಾರ್ಗದಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಸಾರಿಗೆ ಸೇವೆ ಆರಂಭಿಸಲಾಗಿದ್ದು, ದಿನಕ್ಕೆ ಸಾವಿರಾರು ಹಣ ಸರ್ಕಾರಕ್ಕೆ ಆದಾಯ ತರುತ್ತಿದೆ. ಇಷ್ಟಿದ್ದರೂ ಸಹ ಕೆಎಸ್ಆರ್ಟಿಸಿ ಬಸ್ಗಳ ಅಧಿಕಾರಿಗಳೊಂದಿಗೆ ಖಾಸಗಿ ಬಸ್ ಮಾಲೀಕರ ನಡುವೆ ಒಳ ಒಪ್ಪಂದವಾಗಿ ಬಸ್ ನಿಲ್ಲಿಸುತ್ತಾರೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದ್ದು ಬಸ್ ನಿಲ್ಲಿಸುವ ಸಂಚಾಗಿರಬಹುದೆಂದು ಎಸ್.ಫ್.ಐ.ಜಿಲ್ಲಾ ಅಧ್ಯಕ್ಷ ಮಹಾಲಿಂಗಪ್ಪ ಸಂಶಯ ವ್ಯಕ್ತಪಡಿಸಿದ್ದಾರೆ.
ಕೆಎಸ್ಆರ್ಟಿಸಿ ಬಸ್ಗಳ ಮೂಲಕ ಸಾರಿಗೆಯಲ್ಲಿ ಹೊಸ ಕ್ರಾಂತಿ : ಖಾಸಗಿ ಬಸ್ಗಳೇ ಅಧಿಕವಾಗಿದ್ದ ಜಗಳೂರು-ದಾವಣಗೆರೆ ಮಾರ್ಗದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ಟಿಸಿ ಬಸ್ಗಳನ್ನು 20-08-2018 ರಿಂದ ನಿಯೋಜನೆ ಮಾಡಲಾಗಿದ್ದು, ಆರಂಭದಲ್ಲಿ ಹೆಚ್ಚಿನ ಪ್ರಯಾಣಿಕರು ಈ ಕೆಂಪು ಬಣ್ಣದ ಬಸ್ಗಳಲ್ಲಿ ಪ್ರಯಾಣಿಸುವ ಮೂಲಕ ಸಾರಿಗೆಯಲ್ಲಿ ಹೊಸ ಕ್ರಾಂತಿಯೇ ಆಯಿತು ಎಂದರೆ ತಪ್ಪಾಗಲಾರದು.
ಏಕೆಂದರೆ ಪ್ರತಿದಿನ ಬಸ್ವೊಂದಕ್ಕೆ 10 ರಿಂದ 12 ಸಾವಿರ ರೂ. ಹಣ ಸಂಗ್ರಹವಾಗುತ್ತಿದ್ದು, ದಿನಕಳೆದಂತೆ ಈ ಬಸ್ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಕ್ಷೀಣಿಸುತ್ತಾ ಹೋಗುತ್ತಿದೆ. ಅದರಲ್ಲೂ ಕಳೆದ ಸೋಮವಾರದಿಂದ ದಿನವೊಂದಕ್ಕೆ ಬರೀ 3 ರಿಂದ 4 ಸಾವಿರ ರೂ. ಬಸ್ವೊಂದಕ್ಕೆ ಹಣ ಸಂಗ್ರಹವಾಗುತ್ತಿದೆ ಎಂದು ಹೇಳುತ್ತಿರುವುದು ಸಾರ್ವಜನಿಕರಲ್ಲಿ ಅಚ್ಚರಿಗೆ ಕಾರಣವಾಗಿದೆ.
ಕೆಎಸ್ಆರ್ಟಿಸಿ ಅಧಿಕಾರಿಗಳ ಮೇಲೆಯೇ ಶಂಕೆ : ಆರಂಭದಲ್ಲಿ ಕೆಎಸ್ಆರ್ಟಿಸಿ ಬಸ್ಗಳು ರಸ್ತೆಗಿಳಿದಾಗ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಲು ಮುಖ್ಯ ಕಾರಣ ಈ ಬಸ್ಗಳಲ್ಲಿ ಆಸನಗಳಿಗೆ ಸೀಮಿತವಾದ ಪ್ರಯಾಣಿಕರನ್ನು ಮಾತ್ರ ಹತ್ತಿಸಿಕೊಂಡು ಹೋಗುತ್ತಿದ್ದರಿಂದ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರತಿಯೊಬ್ಬ ಪ್ರಯಾಣಿಕರಿಗೂ ಆಸನಗಳು ದೊರಕುತ್ತಿದ್ದವು. ಅಲ್ಲದೆ ಸಕಾಲದಲ್ಲಿ ಬಸ್ಗಳ ವ್ಯವಸ್ಥೆ ಇದ್ದುದರಿಂದ ಪ್ರಯಾಣಿಕರು ಸಹ ಕೆಂಪುಬಣ್ಣದ ಬಸ್ಗಳನ್ನೇ ಅವಲಂಬಿಸಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಈ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಲು ಕಾರಣವೇನೆಂಬುದರ ಮರ್ಮ ತಿಳಿಯದಂತಾಗಿದೆ.
ಖಾಸಗಿ ಬಸ್ಗಳ ದರ್ಬಾರು : ಬಹಳಷ್ಟು ವರ್ಷಗಳಿಂದ ದಾವಣಗೆರೆ-ಜಗಳೂರು, ಚಳ್ಳಕೆರೆ-ಜಗಳೂರು, ದಾವಣಗೆರೆ-ಚಳ್ಳಕೆರೆ ಮಾರ್ಗವಾಗಿ ಖಾಸಗಿ ಬಸ್ಗಳಷ್ಟೇ ಚಲಿಸುತ್ತಿದ್ದು ಪ್ರಯಾಣಿಕರು ಬೇರೆ ದಾರಿ ಕಾಣದೆ ಅವುಗಳಲ್ಲೇ ಪ್ರಯಾಣ ಬೆಳೆಸುವಂತಾಗಿತ್ತು.
ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ಬಸ್ಗಳು: ಈ ಮಾರ್ಗವಾಗಿ ಬರೀ ಖಾಸಗಿ ಬಸ್ಗಳೇ ಪ್ರತಿದಿನ ಸಂಚರಿಸುತ್ತಿದ್ದರಿಂದ ತಮ್ಮ ಕೆಲಸ ಕಾರ್ಯಗಳ ನಿಮಿತ್ತ ವಿವಿಧ ಸ್ಥಳಗಳಿಗೆ ತೆರಳಬೇ ಕಾಗಿದ್ದ ಪ್ರಯಾಣಿಕರು ವಿಧಿಯಿಲ್ಲದೆ ಖಾಸಗಿ ಬಸ್ಗಳಲ್ಲಿ ಸಂಚರಿಸಬೇಕಾಗಿತ್ತು. ಅಲ್ಲದೆ, ಈ ಬಸ್ಗಳಲ್ಲಿ ಸಂಚರಿಸಲು ಪ್ರಯಾಣಿಕರು ಹರಸಾಹ ಸಪಡಬೇಕಾಗಿದ್ದು ಕಿಕ್ಕಿರಿದು ತುಂಬುತ್ತಿದ್ದ ಬಸ್ಗಳಲ್ಲಿ ಆಸನ ಸಿಗದೆ ನಿಂತುಕೊಂಡೇ ಪ್ರಯಾಣ ಬೆಳೆಸುವಂತಾಗಿದ್ದು, ಮಹಿಳೆಯರು, ವೃದ್ದರು ಹಾಗೂ ಮಕ್ಕಳು ತೊಂದರೆ ಅನುಭವಿಸುವಂತಾಗಿತ್ತು.
ಸದ್ದಿಲ್ಲದೆ ನಡೆದಿದೆ ಒಳಒಪ್ಪಂದ : ಆರಂಭದಲ್ಲಿ ನಿಖರವಾದ ಸಮಯಕ್ಕೆ ಬಂದು ಹೋಗುತ್ತಿದ್ದ ಕೆಂಪುಬಣ್ಣದ ಬಸ್ಗಳು ದಿನಕಳೆದಂತೆ ಹೊತ್ತಲ್ಲದ ಹೊತ್ತಲ್ಲಿ ಬರುತ್ತಿದ್ದು, ಪ್ರಯಾಣಿಕರು ಬೇರೆ ದಾರಿ ಕಾಣದೆ ಖಾಸಗಿ ಬಸ್ಗಳಲ್ಲೆ ಪ್ರಯಾಣಿಸುತ್ತಿರುವುದರಿಂದ ಕೆಎಸ್ಆರ್ಟಿಸಿ ಬಸ್ಗಳು ನಷ್ಟವನ್ನು ಅನುಭವಿಸುವಂತಾಗಿದ್ದು, ಈ ಎಲ್ಲಾ ಆವಾಂತರಗಳು ಸೃಷ್ಠಿಯಾಗುವಲ್ಲಿ ಖಾಸಗಿ ಬಸ್ಗಳ ಮಾಲೀಕರು ಹಾಗೂ ಕೆಎಸ್ಆರ್ಟಿಸಿ ಅಧಿಕಾರಿಗಳ ನಡುವೆ ಒಳಒಪ್ಪಂದ ನಡೆದಿದೆ ಎಂಬ ಬಿಸಿಬಿಸಿ ಚರ್ಚೆಗಳು ಆರಂಭವಾಗಿವೆ.
ಒಟ್ಟಿನಲ್ಲಿ ಏನೇ ಆಗಲಿ, ಸಾರ್ವಜನಿಕರ ಅನುಕೂಲಕ್ಕಾಗಿ ಉತ್ತಮವಾದ ಸಾರಿಗೆ ವ್ಯವಸ್ಥೆಯನ್ನು ನೀಡಬೇಕಾಗಿದ್ದ ಕೆಎಸ್ಆರ್ಟಿಸಿ ಇದೀಗ ಕಾಣದ ಕೈಗಳ ಕೈವಾಡದಿಂದಾಗಿ ನಷ್ಟವನ್ನು ಅನುಭವಿಸುವುದರ ಜೊತೆಗೆ ಪ್ರಯಾಣಿಕರಿಗೆ ಸಕಾಲದಲ್ಲಿ ಸುಖಕರ ವಾದ ಪ್ರಯಾಣ ಮಾಡಲು ಸಾಧ್ಯವಾಗದೇ ಇರುವುದು ಜನರ ಕೆಂಗಣ್ಣಿಗೆ ಗುರಿಯಾಗುವ ಮೊದಲೇ ಸಂಬಂಧಪಟ್ಟ ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ಜನತೆಗೆ ಅನುಕೂಲ ಕಲ್ಪಿಸಿಕೊಡುವರೇ ಕಾದು ನೋಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








