ವೆಸ್ಟ್ ಎಂಡ್ ನಲ್ಲಿ ಕುಳಿತು ಅಧಿಕಾರ ಕಳೆದುಕೊಂಡರು
ಕಲಬುರಗಿ
ಬಿಜೆಪಿ ಅಧಿಕಾರಕ್ಕೆ ಬರಬಾರದೆಂದು ಜೆಡಿಎಸ್ ಗೆ ಅಧಿಕಾರ ಕೊಟ್ಟೆವು. ಆದರೆ, ಕುಮಾರಸ್ವಾಮಿ ಶಾಸಕರನ್ನ, ಮಂತ್ರಿಗಳನ್ನು, ಜನರನ್ನ ಭೇಟಿ ಮಾಡದೆ ಬರೀ ವೆಸ್ಟ್ ಎಂಡ್‌ನಲ್ಲೇ ಕಾಲ ಕಳೆದು ಅಧಿಕಾರ ಕಳೆದುಕೊಂಡರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಅವರು, ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಧೀರನೂ ಅಲ್ಲ, ಶೂರನೂ ಅಲ್ಲ. ಅಲ್ಲಮಪ್ರಭುವಿನ ವಚನದ ಮೂಲಕ ಕುಮಾರಸ್ವಾಮಿಗೆ ತಿವಿದರು. ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು ಎಂದು ಹೆಚ್ಚು ಸ್ಥಾನಗಳನ್ನು ಪಡೆದಿದ್ದರೂ ಕುಮಾರಸ್ವಾಮಿಗೆ ಅಧಿಕಾರ ಕೊಟ್ಟಿದ್ದೆವು. ಆದರೆ ಕುಮಾರಸ್ವಾಮಿ ಬೇಗ ಅಧಿಕಾರ ಕಳೆದುಕೊಂಡರು ಎಂದು ಹೇಳಿದರು.
ಕುಮಾರಸ್ವಾಮಿ ಅವರು ಅಧಿಕಾರ ಕೊಟ್ಟಾಗ ಶಾಸಕರು, ಮಂತ್ರಿಗಳು ಹಾಗೂ ಜನರನ್ನು ಭೇಟಿ ಮಾಡದೇ ಹೋಟೆಲ್‌ನಲ್ಲಿ ಕುಳಿತುಕೊಂಡು ಕಾಲ ಕಳೆದರು. ನಂತರ ಸರ್ಕಾರವರನ್ನೇ ಅಧಿಕಾರದಿಂದ ಕಳೆದುಕೊಂಡರು. ಇದರ ಫಲವಾಗಿಯೇ ಮುಂದೆ ಬಿಜೆಪಿ ಅಧಿಕಾರಕ್ಕೆ ಬಂದಿತು. ನನಗೆ 45 ವರ್ಷದ ರಾಜಕೀಯ ಅನುಭವ ಇದೆ. ಆಪರೇಶನ್ ಕಮಲ ಎನ್ನುವಂತಹ ಪದ ನನ್ನ ಅನುಭವದಲ್ಲೇ ಕೇಳಿರಲಿಲ್ಲ. ಆಪರೇಶನ್ ಕಮಲ ಶುರುವಾಗಿದ್ದು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಜನಾರ್ಧನರೆಡ್ಡಿ ಬ್ರದರ್ಸ್‌ಗಳಿಂದ ಎಂದು ಬಿಜೆಪಿ ಮತ್ತು ಯಡಿಯೂರಪ್ಪ ವಿರುದ್ದವೂ ಕಿಡಿಕಾರಿದರು.
ನೆಟೆ ರೋಗದಿಂದ ತೊಗರಿ ಬೆಳೆ ಹಾನಿಯಾಗಿದ್ದು. ರೈತರು ಕಂಗಾಲಾಗಿದ್ದಾರೆ. ಒಮ್ಮೆಯಾದ್ರೂ ಕೃಷಿ ಸಚಿವ ಬಿ.ಸಿ ಪಾಟೀಲ್ ನಿಮ್ಮ ಕಷ್ಟ ಕೇಳಲು ಬಂದಿದ್ದಾರಾ? ಬಿ.ಸಿ ಪಾಟೀಲ್ ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ. ಈ ಬಗ್ಗೆ ನಾವು ಅಧಿವೇಶನದಲ್ಲಿ ಕೇಳಿದರೆ ಹುಷಾರಿಲ್ಲ ಅಂತಾರೆ. ಹುಷಾರಿಲ್ಲ ಅಂದ್ರೆ ಮಂತ್ರಿಯಾಗಿ ಯಾಕೆ ಇದ್ದಿಯಪ್ಪಾ.? ಮನೆಗೆ ಹೋಗಿ ಆರಾಮ್ ಆಗಿ ಇರಬೇಕು ಅಲ್ವಾ? ರೈತರ ಸಂಕಷ್ಟ ಕೇಳಲು ಆಗಲ್ಲ ಅಂದ ಮೇಲೆ ಈಗಲಾದರೂ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವಿರುದ್ಧ ಗುಡುಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
