ಶಿವಮೊಗ್ಗ:
ಹಿರಿಯರಿಗೆ ಗೌರವ ನೀಡದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಇಲ್ಲದಾಗಿದ್ದು, ಮತ್ತೊಮ್ಮೆ ಅವರು ಪ್ರಾಥಮಿಕ ಶಿಕ್ಷಣ ಓದುವ ಅಗತ್ಯವಿದೆ ಎಂದು ಬಿಜೆಪಿ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಮಂಗಳವಾರ ಲೇವಡಿ ಮಾಡಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಧು ಬಂಗಾರಪ್ಪ ರಾಜಕೀಯದಲ್ಲಿ ದ್ವೇಷ ಮತ್ತು ಅಹಂಕಾರವನ್ನು ತಂದಿದ್ದಾರೆ. ಹೀಗಾಗಿ ಅಹಂಕಾರಕ್ಕೆ ಮದ್ದರೆಯಲು ಕಮಲದ ಗುರುತಿಗೆ ಮತ ನೀಡಿ ಎಂದು ಕರೆ ನೀಡಿದರು.
ಮಧು ಸಚಿವರಾಗಿ ಕಳೆದ ಒಂದು ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಒಂದು ಪೈಸೆಯೂ ಮಂಜೂರು ಮಾಡಿಲ್ಲ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಅವಧಿಯಲ್ಲಿ ಸೊರಬ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ನಮ್ಮ ಕ್ಷೇತ್ರ ಅನ್ನುತ್ತಿದ್ದಂತೆಯೇ ಯೋಜನೆಗೆ ಸಹಿ ಹಾಕಿ ಕಳುಹಿಸುತ್ತಿದ್ದರು. ಇವರು ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು, ಒಂದು ಪೈಸೆ ಕೂಡಾ ತಂದಿಲ್ಲ. ಅವರು ತಂದಿದ್ದು ಬರಗಾಲ ಎಂದು ಟಾಂಗ್ ನೀಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಏರುಪೇರುಗಳಿಂದ ಮತ್ತು ಅವರ ಗ್ಯಾರಂಟಿಯ ಭರವಸೆಯಿಂದ ನಾವು ಸೋಲಬೇಕಾಯಿತು. ಪ್ರಧಾನಿ ಮೋದಿಯವರು ದೇಶದ ಜನತೆಗೆ ವಿಶ್ವಾಸ ನೀಡಿದ್ದಾರೆ. ಹಾಗಾಗಿ, ಇದರಿಂದ ಎಲ್ಲರೂ ಕಮಲದ ಚಿಹ್ನೆಗೆ ಮತ ನೀಡುವ ಮೂಲಕ ಬಿ.ವೈ.ರಾಘವೇಂದ್ರರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಗೀತಾ ಶಿವರಾಜ್ ಕುಮಾರ್ ಕುರಿತು ಮಾತನಾಡಿ, ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಕನ್ನಡ ಚಿತ್ರರಂಗ ಬೆಂಬಲಿಸಿದೆ ಎಂದಾದರೆ, ನಾನೂ ಒಬ್ಬ ನಿರ್ಮಾಪಕ. ನನ್ನಂತೆಯೇ ಮುನಿರತ್ನ, ರಾಕ್ಲೈನ್ ವೆಂಕಟೇಶ್ ಸೇರಿ ಹಲವರಿದ್ದಾರೆ. ನಾವು ಯಾರೂ ಬೆಂಬಲ ನೀಡಿಲ್ಲ. ಗೀತಾ ಅವರು ಇಂತಹ ಇನ್ನೂ ಐದು ಚುನಾವಣೆ ನಡೆಸಿದರೂ ಸಹ ಗೆಲ್ಲುವುದಿಲ್ಲ. ಅವರು ಗ್ರಾಮ ಪಂಚಾಯತಿ ಚುನಾವಣೆಯಿಂದ ಬರಬೇಕಿದೆ ಎಂದು ಹೇಳಿದರು.
ಕಾಂಗ್ರೆಸ್ ಈಗ ರಾಷ್ಟ್ರೀಯ ಪಕ್ಷವಾಗಿ ಉಳಿದಿಲ್ಲ. ಅದೊಂದು ರೀತಿ ಪ್ರಾದೇಶಿಕ ಪಕ್ಷವಾಗಿದೆ. ಲೋಕಸಭಾ ಚುನಾವಣೆಯ ನಂತರ ರಾಜಕೀಯ ಅಲ್ಲೋಲ ಕಲ್ಲೋಲ ಆಗುವುದರಲ್ಲಿ ಅನುಮಾನವಿಲ್ಲ. ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ಶಿವಮೊಗ್ಗವೂ ಇರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.