ನವದೆಹಲಿ
ಹೇಗಾದರೂ ಮಾಡಿ ಒಮ್ಮೆಯಾದರೂ ನನ್ನನ್ನು ಜೈಲಿಗೆ ಕಳುಹಿಸಬೇಕು ಎಂದು ಸಂಚು ಹೂಡಿದ್ದಾರೆ ಎಂದು ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊನ್ನೆ ಅಧಿಕಾರಿ (ಚಂದ್ರಶೇಖರ್) ಹೇಳಿದ ಮಾತನ್ನು ಗಮನಿಸಿದ್ದೇನೆ. ಒಂದು ದಿನವಾದ್ರೂ ನನ್ನ ಒಳಗೆ ಕಳುಹಿಸಬೇಕೆಂದು ಮಾತನಾಡಿದ್ದಾರೆ ಎಂದರು.
ಚಾರ್ಜ್ಶೀಟ್ನಲ್ಲಿ ನನ್ನ ಹೆಸರು ಸೇರಿಸಲು ರಾಜ್ಯಪಾಲರ ಮೊರೆ ಹೋಗಿದ್ದಾರೆ. ನಾನಾದರೋ ಜಾಮೀನು ಪಡೆದು ಹೊರಗಿದ್ದೇನೆ. ಯಾರೋ ಒಬ್ಬ ಅಧಿಕಾರಿ ‘ಕ್ರಿಮಿನಲ್’ ಎಂಬ ಪದ ಬಳಕೆ ಮಾಡಿದ್ದಾರೆ. ನಾನು ಜಾಮೀನು ಪಡೆದಿದ್ದು ತಪ್ಪು ಮಾಡಿದ್ದೇನೆ ಎಂದಲ್ಲ. ನನ್ನ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಅದಕ್ಕಾಗಿ ಪಡೆದಿದ್ದೇನೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು.
ರಾಜಕೀಯ ಆರೋಪಗಳ ಮೂಲಕ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ. ರಾಜಕೀಯ ಪ್ರೇರಿತ ಕೇಸ್ನಲ್ಲಿ ನಿರಪರಾಧಿಗಳನ್ನು ಅಪರಾಧಿ ಮಾಡಲು ಸಾಧ್ಯವಿಲ್ಲ. ನನ್ನ ಅಧಿಕಾರ ದುರಪಯೋಗಪಡಿಸಿಕೊಂಡಿಲ್ಲ, ಅಧಿಕಾರಿಗಳನ್ನು ಬೆದರಿಸಿಲ್ಲ. ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದು ನನ್ನ ಕೇಸ್ಗೆ ಸಂಬಂಧಿಸಿದಂತೆ ಅಲ್ಲ. ರಾಜ್ಯಪಾಲರ ವಿಚಾರವಾಗಿ ಅಧಿಕಾರಿಯನ್ನು ನಾನು ಪ್ರಶ್ನೆ ಮಾಡಿದ್ದೇನೆ. ರಾಜ್ಯಪಾಲರ ಕಚೇರಿಗೆ ಪತ್ರ ಬರೆದು ಅವಮಾನ ಮಾಡಿದ್ದ ಅಧಿಕಾರಿಯನ್ನು ಪ್ರಶ್ನೆ ಮಾಡಿದ್ದೇನೆ. ನನ್ನ ಇತಿಮಿತಿಗಳು ಏನು ಅನ್ನುವುದು ನನಗೂ ಗೊತ್ತಿದೆ.
ಅಧಿಕಾರಿಯ ಉದ್ಧಟತನವನ್ನು ಪ್ರಶ್ನೆ ಮಾಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು. ಅಧಿಕಾರಿ ಯಾವ ಹಿನ್ನೆಲೆಯಿಂದ ಬಂದವರು? ಅಕ್ರಮ ಹಣ ಸಂಪಾದನೆ ಮಾಡುವವರಿಗೆ ರಕ್ಷಣೆ ಕೊಡಿ ಎಂದು ನಿಮ್ಮನ್ನು ಐಪಿಎಸ್ ಆಫೀಸರ್ ಮಾಡಿದ್ದಾರಾ? ನಾನು ಬೇಲ್ ತಗೊಂಡೆ, ತನಿಖೆಗೆ ಮಾಡಬೇಡಿ ಎಂದು ಹೇಳಿಲ್ಲ. ನೀವು ಏನ್ ಮಾಡಿದ್ದೀರಿ? ನಿಮ್ಮ ವಿರುದ್ಧವೇ ಕೇಸ್ ಇದೆ, ಆರೋಪಿ ನಂಬರ್ 2. ಹೈಕೋರ್ಟ್ನಲ್ಲಿ ಅಧಿಕಾರಿ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ. ನಾನು ಯಾರಿಗೂ ರಕ್ಷಣೆ ಕೊಡಲು ಇಲ್ಲ ಎಂದು ಕುಮಾರಸ್ವಾಮಿ ಗುಡುಗಿದರು.
ಆಫೀಸ್ ನಂಬರ್ ಹಾಕದೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಧಿಕೃತವಾಗಿ ಲೆಟರ್ ಕಳುಹಿಸಿಲ್ಲ. ನಾಡಿನ ಜನತೆಗೆ ಮಿಸ್ ಲೀಡ್ ಮಾಡಲು ಕಳುಹಿಸಿದ್ದಾರೆ. ಹಂದಿ-ಪಂದಿ ಕತೆ ಹೇಳಿದ್ದಾರೆ. ಗೃಹ ಸಚಿವರು ಮೇಧಾವಿ, ಡಾಕ್ಟರ್. ಸಿದ್ದರಾಮಯ್ಯ ನೀವು ಆರೋಪಿ ಅಲ್ಲವೇ? ಅದೇ ಅಧಿಕಾರಿ ನಿಮ್ಮನ್ನು ಕ್ರಿಮಿನಲ್ ಸಿಎಂ ಎಂದು ಕರೆದರೆ ಒಪ್ಪಿಕೊಳ್ಳುತ್ತೀರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.