ರಾಜ್ಯಸಭೆ ಚುನಾವಣೆ : ಶಾಸಕರಿಗೆ ಕುಮಾರ ಸ್ವಾಮಿ ಧಮ್ಕಿ ಹಾಕುತ್ತಿದ್ದಾರೆ :ಡಿಕೆಶಿ

ಬೆಂಗಳೂರು: 

    ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

   ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕುಮಾರಸ್ವಾಮಿ ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮಕಿ ಹಾಕುತ್ತಿದ್ದಾರೆ, ಎಲ್ಲವೂ ನಮಗೆ ತಿಳಿಯುತ್ತಿದೆ. ಕುಮಾರಸ್ವಾಮಿ ಯಾರಿಗೆ, ಯಾವೆಲ್ಲಾ ಆಫರ್ ಕೊಟ್ಟಿದ್ದಾರೆ ಎಂದು ಶಾಸಕರು ನಮಗೆ ಮಾಹಿತಿ ನೀಡಿದ್ದಾರೆ. ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ. ಈಗ ಇದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.

    ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್‌ ಐದನೇ ಅಭ್ಯರ್ಥಿಯಾಗಿ ಉದ್ಯಮಿ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದೆ. ಅವರು ಗೆಲ್ಲಬೇಕು ಎಂದರೆ ಸುಮಾರು ಆರೇಳು ಹೆಚ್ಚುವರಿ ಮತಗಳ‌ ಅಗತ್ಯವಿದೆ. ಇದನ್ನು ಪಡೆಯಲು ಕಾಂಗ್ರೆಸ್‌ ಶಾಸಕರಿಗೆ ಗಾಳ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

    ವಿರೋಧ ಪಕ್ಷಗಳು ಅಡ್ಡಮತದಾನದ ಪ್ರಯತ್ನ ಮಾಡುತ್ತಿದ್ದಾರಾ ಎಂದು ಕೇಳಿದಾಗ, ಸುಮ್ಮನೇ ಐದನೇ ಅಭ್ಯರ್ಥಿ ಕಣಕ್ಕಿಳಿಸುತ್ತಾರಾ? ಒಂದು ಪ್ರಯತ್ನ ಮಾಡೋಣ ಎಂದು ಹಾಕಿದ್ದಾರೆ. ಮತದಾನದ ದಿನ ಎಲ್ಲವೂ ಗೊತ್ತಾಗಲಿದೆ ಎಂದರು.

    ವಿರೋಧ ಪಕ್ಷಗಳ ತಂತ್ರಕ್ಕೆ ಪ್ರತಿತಂತ್ರ ರೂಪಿಸುತ್ತೀರಾ ಎಂದು ಕೇಳಿದಾಗ, ನಮಗೆ ಅದರ ಅಗತ್ಯವಿಲ್ಲ. ಜನ ನಮಗೆ 136 ಸೀಟುಗಳನ್ನು ನೀಡಿದ್ದಾರೆ. 2 ಕ್ಷೇತ್ರದ ಪಕ್ಷೇತರರು ನಮ್ಮ ಜತೆಗಿದ್ದಾರೆ. ನಮ್ಮ ಜತೆ ಇರುವ ಬೇರೆಯವರ ಬಗ್ಗೆ ಈಗ ಮಾತನಾಡುವುದಿಲ್ಲ. ಮತದಾನದ ನಂತರ ಮಾತನಾಡುತ್ತೇವೆ ಎಂದು ತಿಳಿಸಿದರು.

    ಇನ್ನೂ ರಾಜ್ಯದ ಎಲ್ಲ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಇದ್ದ ಘೋಷ ವಾಕ್ಯವನ್ನು ಬದಲಾಯಿಸಿರುವ ಸಂಬಂಧ ಪ್ರತಿಕ್ರಿಯಿಸಿದ ಅವರು, ನನಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನಾವು ಕುವೆಂಪು ಅವರ ಆಚಾರ, ವಿಚಾರ ಪ್ರಚಾರ ಮಾಡುತ್ತಿದ್ದೇವೆ. ಕುವೆಂಪು ಅವರ “ಭಾರತ ಜನನಿಯ ತನುಜಾತೆ…”, “ಸರ್ವಜನಾಂಗದ ಶಾಂತಿಯ ತೋಟ…” ಸಂದೇಶವನ್ನು ಪ್ರತಿನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಜ್ಯದ ಜನರಿಗೆ ಹೇಳುತ್ತಾ ಬಂದಿದ್ದೇವೆ.

    ಕುವೆಂಪು ಅವರ ತತ್ವ ಸಿದ್ಧಾಂತಗಳನ್ನು ನಾವು ಪಾಲಿಸಿ ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಎಲ್ಲದರಲ್ಲೂ ತಪ್ಪು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ಅವರು ಜನರ ಬದುಕಿನ ಬಗ್ಗೆ ಯೋಚಿಸುವುದಿಲ್ಲ, ಭಾವನೆ ಬಗ್ಗೆ ಮಾತ್ರ ಆಲೋಚಿಸಿ ಸಮಾಜ ಕೆಡಿಸುವ ಕೆಲಸ ಮಾಡುತ್ತಾರೆ” ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap