ಬೆಂಗಳೂರು:
ಕೆಐಒಸಿಎಲ್ ನ ದೇವದಾರಿ ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ ಈ ಕುರಿತಾದ ಕಡತವನ್ನು ನಾನು ಆರ್ಥಿಕ ಇಲಾಖೆಗೆ ಕಳುಹಿಸಿದ್ದೇನೆ ಅಷ್ಟೇ ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಕೆಐಒಸಿಎಲ್ ಗೆ ಅರಣ್ಯ ಜಮೀನು ನೀಡಲಾಗಿತ್ತು.
ಯೋಜನೆ ಈವರೆಗೆ ಬಂದಿದೆ. ಕಂಪನಿಯ ಗಣಿಗಾರಿಕೆ ಆರಂಭಕ್ಕೆ 1738 ಕೋಟಿ ರೂ. ಬೇಕಿದೆ. ಅದಕ್ಕೆ ನಾನು ಸಹಿ ಹಾಕಿ ಆರ್ಥಿಕ ಇಲಾಖೆಗೆ ಕಳುಹಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಣಿಗಾರಿಕೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ಅರಣ್ಯ ಇಲಾಖೆಗೆ ಪರ್ಯಾಯ ಜಮೀನು ನೀಡಲಾಗಿದ್ದು, ರಾಜ್ಯ ಸರ್ಕಾರಕ್ಕೆ 518 ಕೋಟಿ ರೂಪಾಯಿ ಪಾವತಿಸಲಾಗಿದೆ. ಸಂಡೂರಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಕೂಡ ಆಗಿದೆ ಎಂದು ತಿಳಿಸಿದ್ದಾರೆ.
ಗಣಿಗಾರಿಕೆ ನಡೆಯುವ ದೇವದಾರಿ ಶ್ರೇಣಿಯಲ್ಲಿ ದಟ್ಟ ಅರಣ್ಯವಿಲ್ಲ. ಅಲ್ಲಿ ದೊಡ್ಡ ಗಾತ್ರದ ಮರಗಳು ಕೂಡ ಇಲ್ಲ. ಕುರುಚಲು ಗಿಡಗಳು ಇವೆ. ಸಾರ್ವಜನಿಕ ವಲಯದ ಕಂಪನಿ ಉಳಿಯಬೇಕು. ಉದ್ಯೋಗ ಸೃಷ್ಟಿಯಾಗಬೇಕು ಎಂಬ ಉದ್ದೇಶ ನನ್ನದಾಗಿದೆ ಎಂದು ತಿಳಿಸಿದ್ದಾರೆ.