ದಲಿತರ ಅನುದಾನ ಗ್ಯಾರೆಂಟಿಗಳಿಗೆ ಬಳಸಿದ್ದಾರೆ : ಕುಮಾರಸ್ವಾಮಿ

ನೆಲಮಂಗಲ 

     ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರ ಸಮಾಗಮದಿಂದಾಗಿ ಲೋಕಸಭೆ ಚುನಾವಣೆಯಲ್ಲಿ ತ್ರಿಬಲ್‌ ಎಂಜಿನ್‌ನ ಗೆಲುವಿನ ಗಾಳಿ ಬೀಸುತ್ತಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಹೇಳಿದರು.

    ನೆಲಮಂಗಲ ಮತ್ತು ದೊಡ್ಡಬಳ್ಳಾಪುರದಲ್ಲಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಡಾ.ಕೆ.ಸುಧಾಕರ್‌ ಪ್ರಚಾರ ನಡೆಸಿದರು. ನಂತರ ಮಾತನಾಡಿದ ಡಾ.ಕೆ.ಸುಧಾಕರ್‌, ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ಇರುವವರೆಗೂ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನದಲ್ಲೇ ಉಳಿಯಲಿದೆ. ಬಿಜೆಪಿ ಯಾವಾಗಲೂ ಆಡಳಿತದ ಸ್ಥಾನದಲ್ಲಿದ್ದು ಜನ ಕಲ್ಯಾಣ ಕಾರ್ಯಗಳನ್ನು ಮಾಡಲಿದೆ.

    ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ನೀರಾವರಿಗೆ ಕೊಟ್ಟಷ್ಟು ಕೊಡುಗೆಗಳನ್ನು ಯಾರೂ ಕೊಟ್ಟಿಲ್ಲ. ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಹಿಳೆಯರ ಬಗ್ಗೆ ಕೆಟ್ಟದಾಗಿ ಹೇಳಿದ್ದಾರೆಂದು ಅಪಪ್ರಚಾರ ಮಾಡಲಾಗುತ್ತಿದೆ. ಅದರೆ ಮಹಿಳೆಯರಿಗಾಗಿಯೇ ಕುಮಾರಸ್ವಾಮಿ ಸಾರಾಯಿ ನಿಷೇಧ ಮಾಡಿದ್ದರು. ರೈತರ ಸಾಲ ಮನ್ನಾ ಮಾಡಿದ್ದರು. ಕಾಂಗ್ರೆಸ್‌ಗೆ ಹೇಳಲು ಸಾಧನೆಗಳ ಸರಕು ಇಲ್ಲದೆ ಈ ರೀತಿಯ ತಂತ್ರ ಹೆಣೆಯುತ್ತಿದೆ ಎಂದರು.

    ಕಾಂಗ್ರೆಸ್‌ ಇಂಡಿ ಕೂಟ ಮಾಡಿಕೊಂಡು ಮಂಡಿಯಲ್ಲಿ ಭಾರತವನ್ನೇ ಮಾರಾಟ ಮಾಡಲು ಮುಂದಾಗಿದೆ. 40 ಸ್ಥಾನಕ್ಕಿಂತ ಹೆಚ್ಚು ಬರಲ್ಲ ಎನ್ನುವುದು ಗೊತ್ತಿರುವುದರಿಂದ ಹಾಗೂ ಮುಂದಿನ 50 ವರ್ಷ ಅಧಿಕಾರ ಸಿಗದಿರುವುದು ಖಚಿತವಾಗಿರುವುದರಿಂದ ಗ್ಯಾರಂಟಿ ಕಾರ್ಡುಗಳನ್ನು ನೀಡುತ್ತಿದ್ದಾರೆ. 2,000 ರೂ. ಕೊಡುತ್ತಿರುವುದರಿಂದಲೇ ರಾಜ್ಯದ ಸ್ಥಿತಿ ಅಧೋಗತಿಗೆ ಸಾಗಿದೆ. ದೇಶದ ಬೊಕ್ಕಸದಿಂದ ಇದೇ ರೀತಿ ಹಣ ನೀಡಿದರೆ ಇಡೀ ದೇಶ ಹಾಳಾಗಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶವನ್ನು ಪಾಕಿಸ್ತಾನಕ್ಕಿಂತ ಹಿಂದಕ್ಕೆ ಕೊಂಡೊಯ್ಯಲಿದೆ ಎಂದರು.

    ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ಮೊತ್ತವನ್ನು ಗ್ಯಾರಂಟಿಗೆ ಬಳಸಲಾಗಿದೆ. ಮಲ್ಲಿಕಾರ್ಜುನ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡದೆ ದೆಹಲಿಗೆ ಕಳುಹಿಸಲಾಗಿದೆ. ದಲಿತರ ಬಗ್ಗೆ ಕಾಂಗ್ರೆಸ್‌ಗೆ ಗೌರವ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕಿತ್ತು. ಡಾ.ಬಿ.ಆರ್‌.ಅಂಬೇಡ್ಕರ್‌ರ ಹೆಸರು ಹೇಳಲು ಕಾಂಗ್ರೆಸ್‌ ಯೋಗ್ಯತೆ ಮತ್ತು ನೈತಿಕತೆ ಇಲ್ಲ. ಬಾಬಾ ಸಾಹೇಬರನ್ನು ಎರಡು ಬಾರಿ ಸೋಲಿಸಿದ್ದೇ ಕಾಂಗ್ರೆಸ್‌ ಎಂದರು.

    ಕಾಂಗ್ರೆಸ್‌ನ ಅಭ್ಯರ್ಥಿ ಕ್ಯಾಶ್‌ ಪಾರ್ಟಿ. ಅವರ ಖಾತೆಯಲ್ಲಿನ ಹಣ ನೋಡಿ ಟಿಕೆಟ್‌ ನೀಡಿದ್ದಾರೆ. ನಾನು ಆರೋಗ್ಯ ಸಚಿವನಾಗಿ, ಶಾಸಕನಾಗಿ ಕೆಲಸ ಮಾಡಿದ್ದನ್ನು ನೋಡಿ ಟಿಕೆಟ್‌ ನೀಡಿದ್ದಾರೆ. ಹಣದಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ, ಆದರೆ ಜನರ ಪ್ರೀತಿಯಿಂದ ಮಾತ್ರ ಅದು ಸಾಧ್ಯವಾಗುತ್ತದೆ ಎಂಬುದನ್ನು ಅಭ್ಯರ್ಥಿಯ ತಂದೆ ತಿಳಿಯಬೇಕು. ಇಂತಹ ಅಹಂಕಾರದ ಮಾತನ್ನಾಡಬಾರದು. ಕಾಂಗ್ರೆಸ್‌ ಸರ್ಕಾರ ಆಳಲು ಬಂದು ರಾಜ್ಯವನ್ನು ಹಾಳು ಮಾಡಿದೆ. ಕಾಂಗ್ರೆಸ್‌ ಅಭ್ಯರ್ಥಿ ಹೆಸರಿನಲ್ಲಿ ರಾಮ ಇದೆ, ಅವರಿಗೆ ಟಿಕೆಟ್ ಕೊಡಿಸಿದ್ವರಾ ಹೆಸರಿನಲ್ಲೂ ರಾಮ ಇದೆ, ಆದರೆ ಅವರು ರಾಮ ಮಂದಿರಕ್ಕೆ ಹೋಗುವುದಿಲ್ಲ ಅವರ ಹೃದಯದಲ್ಲಿ ರಾಮನ ಬಗ್ಗೆ ಭಕ್ತಿ ಇಲ್ಲ. ಇಂಥವರಿಗೆ ಹಿಂದೂಗಳು ಮತ ನೀಡಬೇಕಾ ಎಂದು ಪ್ರಶ್ನೆ ಮಾಡಿದರು.

    ಪ್ರಧಾನಿ ಮೋದಿ ರಾಮ ಮಂದಿರದಲ್ಲಿ ಬಾಲರಾಮನನ್ನು ಪ್ರತಿಷ್ಠಾಪಿಸಿದ್ದಾರೆ. ಜೊತೆಗೆ ರಾಮರಾಜ್ಯವನ್ನು ಸ್ಥಾಪಿಸಿದ್ದಾರೆ. ಆದರೆ ಕಾಂಗ್ರೆಸ್‌ ಜನರ ಭವಿಷ್ಯದ ಜೊತೆ ಜೂಜಾಡಲು ಬಂದಿದೆ. ರೈತರು, ಮಹಿಳೆಯರು, ಯುವಕರು ಹಾಗೂ ಬಡವರ ಪಾಲಿಗೆ ಕಾಂಗ್ರೆಸ್ ಸರ್ಕಾರ ಶಾಪವಾಗಿದ್ದು, ರಾಜ್ಯದ ಜನತೆಯ ಹಿತರಕ್ಷಣೆಗಾಗಿ ಬಿಜೆಪಿಯು ಜೆಡಿಎಸ್ ಜೊತೆ ಕೈ ಜೋಡಿಸಿದೆ. ಈ ಲೋಕಸಭಾ ಚುನಾವಣೆ ಒಂದು ಧರ್ಮ ಯುದ್ಧವಾಗಿದ್ದು, ಧರ್ಮದ ಪರ, ಸಾಮಾನ್ಯ ಜನರ ಪರವಾಗಿರುವ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಹೊಣೆ ನಮ್ಮ ಮೇಲಿದೆ ಎಂದರು.

    ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಹಿಂದೆ ಇಂದಿರಾಗಾಂಧಿ ಬಡತನ ನಿರ್ಮೂಲನೆ ಮಾಡುವ ಯೋಜನೆ ಜಾರಿ ಮಾಡಿದ್ದರೂ ಬಡತನ ನಿವಾರಿಸಿಲ್ಲ. ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಯೋಜನೆಗಳನ್ನು ಸಮರ್ಪಕವಾಗಿ ಜಾರಿ ಮಾಡಿಲ್ಲ. ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಗ್ಯಾರಂಟಿಗಳನ್ನು ತೋರಿಸಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಮಹಿಳೆಯರಿಗೆ ಹಣ ನೀಡಿ, ಪುರುಷರಿಂದ ಹಣ ಪಡೆಯಲಾಗುತ್ತಿದೆ. ಇದು ಪಿಕ್‌ ಪಾಕೆಟ್‌ ಸರ್ಕಾರ ಎಂದು ಟೀಕಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap