ಪಟ್ಟಣದ ಅಭಿವೃದ್ಧಿಗೆ ಪ್ರಥಮ ಸಭೆಯಲ್ಲಿ ಸದಸ್ಯರ ವಿಶ್ವಾಸ

 ಕುಣಿಗಲ್  : 

      ಎರಡು ವರ್ಷಗಳ ನಂತರ ಇದೇ ಪ್ರಥಮ ಬಾರಿಗೆ ಪುರಸಭೆಯ ಸಾಮಾನ್ಯ ಸಭೆ ನಡೆಯಿತು. ಸಮರ್ಪಕ ಶುದ್ದಕುಡಿಯುವ ನೀರು ಹಾಗೂ ಪಟ್ಟಣದ ಸಮಗ್ರ ಅಭಿವೃದ್ದಿಯ ಬಗ್ಗೆ ಕ್ರಮ ಕೈಗೊಳ್ಳುವ ವಿಶ್ವಾಸವನ್ನು ಸದಸ್ಯರು ವ್ಯಕ್ತಪಡಿಸಿದರು.

      ಬುಧವಾರ ಪುರಸಭಾ ಅಧ್ಯಕ್ಷ ಎಸ್.ಕೆ ನಾಗೇಂದ್ರ ಅಧ್ಯಕ್ಷತೆಯಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮೊದಲ ಸಾಮಾನ್ಯ ಸಭೆ ನಡೆಯಿತು.

     ಮೊದಲಿಗೆ ಆಶ್ರಯ ಯೋಜನೆಗಳಾದ ಅಂಬೇಡ್ಕರ್ ಹಾಗೂ ವಾಜಪೇಯಿ ವಸತಿ ಯೋಜನೆಯ ಫಲಾನುಭವಿಗಳಿಗೆ ಕಳೆದ ನಾಲ್ಕು ವರ್ಷಗಳಿಂದ ಮನೆ ನಿರ್ಮಿಸಿದ 180 ಫಲಾನುಭವಿಗಳಿಗೆ ಬರಬೇಕಾದ ಎರಡು ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಿಸುವಂತೆ ಪುರಸಭಾ ಸದಸ್ಯ ರಂಗಸ್ವಾಮಿ ಒತ್ತಾಯಿಸಿದರು.

      2016ರಿಂದ 20ರವರೆಗೆ ಪಟ್ಟಣದ ಜನರಿಗೆ ವಸತಿ ಮನೆ ನಿರ್ಮಿಸಿಕೊಳ್ಳಲು ಸುಮಾರು 180 ಫಲಾನುಭವಿಗಳು ಆಶ್ರಯ ಅಂಬೇಡ್ಕರ್ ಹಾಗೂ ವಾಜಪೇಯಿ ಯೋಜನೆ ಅಡಿಯಲ್ಲಿ ಅಧಂಬರ್ಧ ಮನೆ ನಿರ್ಮಿಸಿಕೊಂಡಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮದ 2 ಕೋಟಿಗೂ ಹೆಚ್ಚು ಹಣ ಬರಬೇಕಾಗಿದ್ದು ತಾಂತ್ರಿಕ ಅಡಚಣೆಯಿಂದ ನಿಂತಿರುವುದನ್ನು ಕೂಡಲೇ ಸರಿಪಡಿಸಿ ಫಲಾನುಭವಿಗಳಿಗೆ ದೊರಕಿಸಿಕೊಡುವಂತೆ ಒತ್ತಾಯಿಸಿದರು.

      ಪುರಸಭೆ ಚುನಾಯಿತ ಪ್ರತಿನಿಧಿಗಳು ಅಧಿಕಾರ ಸ್ವೀಕರಿಸುವ ಮುನ್ನ ಆಡಳಿತಾಧಿಕಾರಿಗಳು ಆಡಳಿತ ನಡೆಸಿದ ಅವಧಿಯ ಹಲವಾರು ಹಣಕಾಸು ವ್ಯವಹಾರಗಳನ್ನು ಅಂಗೀಕರಿಸಲು ಇಂದಿನ ಜನಪ್ರತಿನಿಧಿಗಳ ಪುರಸಭೆಯು ಜವಾಬ್ದಾರಿ ಆಗುವುದಿಲ್ಲ. ಅದಕ್ಕೆ ಒಪ್ಪಿಗೆಯನ್ನು ಸೂಚಿಸುವುದು ಇಲ್ಲ ಈ ಬಗ್ಗೆ ಸಾರ್ವಜನಿಕರು ಎಸಿಬಿಗೆ ದೂರು ಸಲ್ಲಿಸುವ ಸಾಧ್ಯತೆಯಿದೆ ಎಂದು ರಂಗಸ್ವಾಮಿ, ಶ್ರೀನಿವಾಸ್, ಕೃಷ್ಣ ವಾಸು ಸೇರಿದಂತೆ ಅನೇಕ ಸದಸ್ಯರು ಒಪ್ಪಿಗೆ ನೀಡಲು ನಿರಾಕರಿಸಿದರು.

      ಹಿರಿಯ ಸದಸ್ಯ ಅರುಣ್ ಕುಮಾರ್ ಮಾತನಾಡಿ, ಕಳೆದ ಒಂದು ವರ್ಷ 18 ತಿಂಗಳು ಕಳೆದ ನಂತರ ಅಧಿಕಾರ ಚುನಾಯಿತ ಪ್ರತಿನಿಧಿಗಳಿಗೆ ಸಿಕ್ಕಿರುವುದರಿಂದ ಪಟ್ಟಣದ ರಸ್ತೆ ಬೀದಿ ದೀಪ ಹಾಗೂ ಏಳು ವಾರ್ಡಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕಾಗಿದೆ ಎಂದರು.

      ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಮಾತನಾಡಿ, ಸದಸ್ಯರು ಶಾಸಕರ ಸಂಸದರ ಎಲ್ಲರ ಸಹಕಾರದಿಂದ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಲ್ಲರೂ ಸಹಕರಿಸಬೇಕೆಂದು ಕೋರಿದರು. ಶಾಸಕ ರಂಗನಾಥ್ ಮಾತನಾಡಿ, ಒಗ್ಗಟ್ಟಿನಿಂದ ಪಟ್ಟಣದ ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಬೇಕೆಂದರು. ಜಿಲ್ಲಾ ಗ್ರಂಥಾಲಯಕ್ಕೆ ಸದಸ್ಯರನ್ನಾಗಿ ಶ್ರೀನಿವಾಸ್ ಅವರನ್ನು ಆಯ್ಕೆ ಮಾಡಿ ಕಳಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಪುರಸಭಾ ಮಾಜಿ ಅಧ್ಯಕ್ಷರಾದ ರಾಮಚಂದ್ರಪ್ಪ, ಬಿ.ಎಂ.ನಾಗರಾಜ್ ಉಪಾಧ್ಯಕ್ಷರಾದ ಬಿ.ಟಿ. ನಾಗರತ್ನಮ್ಮ, ಮಾಜಿ ಸದಸ್ಯ ವರದರಾಜ್ ನಿಧನರಾಗಿದ್ದ ಹಿನ್ನೆಲೆಯಲ್ಲಿ ಸಭೆ ಪ್ರಾರಂಭವಾಗುವ ಮುನ್ನ ಎರಡು ನಿಮಿಷ ಮೌನ ಆಚರಣೆಯೊಂದಿಗೆ ಸಂತಾಪಸಲ್ಲಿಸಿದರು.

      ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿಸಮಿತಿ ಅಧ್ಯಕ್ಷ ಸಮಿವುಲ್ಲಾ, ಸದಸ್ಯರುಗಳು, ಮುಖ್ಯ ಅಧಿಕಾರಿ ರವಿಕುಮಾರ್, ಪರಿಸರ ಇಂಜಿನಿಯರ್ ಚಂದ್ರಶೇಖರ್ ಆರೋಗ್ಯ ನಿರೀಕ್ಷಕರಾದ ಮಮತಾ, ಕಂದಾಯ ನಿರೀಕ್ಷಕರಾದ ಜಗರೆಡ್ಡಿ, ಸುಮಾ ಮ್ಯಾನೇಜರ್ ಜಯಪ್ಪ, ರೂಪ ಮತ್ತಿತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link