ಕುಣಿಗಲ್ :

ತಾಲ್ಲೂಕಿನ ಕಾಡುಮತ್ತಿಕೆರೆ ಗ್ರಾಮ ಪಂಚಾಯಿತಿ ಸದಸ್ಯತ್ವ ಹರಾಜು ಹಿನ್ನೆಲೆಯಲ್ಲಿ ನಾಲ್ಕು ಮಂದಿಯನ್ನ ಗಡಿಪಾರ್ ಮಾಡಲಾಗುವುದು ಎಂದು ಡಿ.ವೈ.ಎಸ್ಪಿ. ಜಗದೀಶ್ ತಿಳಿಸಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣೆಯ ಪೂರ್ವಸಿದ್ದತೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಿತ್ನಮಂಗಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಾಡು ಮತ್ತಿಕೆರೆ ಗ್ರಾಮದಲ್ಲಿ ಬಿಸಿಎಂ ಎ ಸ್ಥಾನಕ್ಕೆ ಹಾಗೂ ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ಗ್ರಾಮದಲ್ಲಿ ಹರಾಜು ಪ್ರಕ್ರಿಯೆ ನಡೆದಿರುವುದು ರುಜುವಾತು ಆಗಿರುವುದರಿಂದ ನಾಲ್ಕು ಜನರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ಗಡಿಪಾರು ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕ್ಷೇತ್ರಾದ್ಯಂತ ಬಿಗಿಯಾದ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. 2 ಡಿ.ಆರ್ ಹಾಗೂ ಕೆಎಸ್‍ಆರ್‍ಪಿ ವ್ಯಾನ್, 450 ಪೊಲೀಸ್ ಸಿಬ್ಬಂದಿ, ಸಬ್ ಇನ್ಸ್ಪೆಕ್ಟರ್, ಸರ್ಕಲ್ ಇನ್ಸ್ಪೆಕ್ಟರ್, ಡಿಎಸ್ಪಿಗಳು ಮೊಬೈಲ್ ಸ್ಕ್ವಾಡ್‍ಗಳಾಗಿ ಸಂಚರಿಸುತ್ತಾ ಯಾವುದೇ ಅಹಿತರ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸ್ಟ್ರಾಂಗ್ ರೂಮ್ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ತಹಸಿಲ್ದಾರ್ ವಿಶ್ವನಾಥ್ ಮಾತನಾಡಿ, ತಾಲ್ಲೂಕಿನ 36 ಗ್ರಾಮ ಪಂಚಾಯಿತಿ ಚುನಾವಣೆ 22ರಂದು ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ, ಮತದಾರರು ಪಾರದರ್ಶಕವಾಗಿ ಯಾವುದೇ ಭಯ ಆತಂಕ ಪಡದೆ ಮುಕ್ತವಾಗಿ ಮತ ಚಲಾಯಿಸುವಂತೆ ತಿಳಿಸಿದರು.
36 ಗ್ರಾಮ ಪಂಚಾಯಿತಿಗೆ 496 ಸ್ಥಾನಗಳಿಗೆ ಒಟ್ಟು 1208 ಅಭ್ಯರ್ಥಿಗಳು ಕಣದಲ್ಲಿದ್ದು ಇದರಲ್ಲಿ 37 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಕ್ರಮವಾಗಿ ಪಂಚಾಯಿತಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ 7 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಡಿ.20ರ ಸಂಜೆ 5ರಿಂದ 22 ರವರಿಗೆ 48ಗಂಟೆಗಳ ಗ್ರಾಮ ಪಂಚಾಯಿತಿ ಚುನಾವಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು ಯಾವುದೇ ಸಮಸ್ಯೆಗಳಿಗೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ತಿಳಿಸಿದರು.
ಕಾರ್ಯನಿರ್ವಹಣಾಧಿಕಾರಿ ಜೋಸೆಫ್ ಮಾತನಾಡಿ, ಎಲ್ಲ ಪಂಚಾಯಿತಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಕುಡಿಯುವ ನೀರು ಶೌಚಾಲಯ ಕುರ್ಚಿ ಮೇಜು ವಿದ್ಯುತ್ ದೀಪ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








