ಕುಣಿಗಲ್ :
ಮದ್ಯ ಸೇವಿಸಿ ಚುನಾವಣಾ ಕರ್ತವ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಕರ್ನಾಟಕ ರಾಷ್ಟ್ರ ಸಮಿತಿ ಯುವ ಘಟಕದ ಅಧ್ಯಕ್ಷ ರಘು ಜಾಣಗೆರೆ ಮೇಲೆ ಹಲ್ಲೆ ಮಾಡಿದ ಪೊಲೀಸರ ವಿರುದ್ದ ಪೊಲೀಸ್ ಠಾಣೆಯ ಮುಂದೆ ಪ್ರತಿಭಟಿಸಲು ಮುಂದಾದಾಗ ರವಿಕೃಷ್ಣಾ ರೆಡ್ಡಿ ಬೆಂಬಲಿಗರ ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಜಟಾಪಟಿ ನಡೆಯಿತು.
ಪಟ್ಟಣದ ಪೊಲೀಸ್ ಠಾಣೆಯ ಮುಂದೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಪ್ರತಿಭಟಿಸಲು ಮುಂದಾಗುತ್ತಿದ್ದಂತೆ ಸುತ್ತುವರೆದ ಪೊಲೀಸರು ಇಲ್ಲಿ ಪ್ರತಿಭಟನೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಂದಿದ್ದ ಶಾಮಿಯಾನ,ಟಾರ್‍ಪಲ್ ಮತ್ತು ಕುರ್ಚಿಗಳನ್ನು ವಶಕ್ಕೆ ಪಡೆದರು.
ಮಂಗಳವಾರ ಗ್ರಾಮ ಪಂಚಾಯ್ತಿ ಚುನಾವಣೆ ಮುಗಿದ ನಂತರ ಪಟ್ಟಣದ ಮಹಾತ್ಮಗಾಂಧಿ ಸರ್ಕಾರಿ ಕಾಲೇಜಿನಲ್ಲಿ ಮತಪಟ್ಟಿಗೆ ಸಂಗ್ರಹಿಸಿಡಲಾಗುತ್ತಿತ್ತು. ಅದೇ ಸಮಯದಲ್ಲಿ ಗಸ್ತಿಗೆ ಇದ್ದ ನಾಲ್ಕು ಜನ ಪೊಲೀಸ್‍ರು (ವಾಹನ ಸಂಖ್ಯೆ ಕೆ.ಎ. 10 ಜಿ. 0628) ಇವರನ್ನು ರಘು ಜಾಣಗೆರೆ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿರುವ ಬಗ್ಗೆ ಕೇಳಿ ತಮ್ಮ ಮೊಬೈಲ್‍ನಲ್ಲಿ ವಿಡಿಯೋ ಮಾಡಿ ಲೈವ್ ಬಿಟ್ಟಿದ್ದಾರೆ. ಆಗ ಕೆಲವರು ಹಾರಿಕೆ ಉತ್ತರ ನೀಡಿದರೆ ಮತ್ತೆ ಕೆಲವರು ಓಡಿ ಹೋಗಿದ್ದಾರೆ. ಇಂತಹ ಸನ್ನಿವೇಶದಿಂದ ಕುಪಿತಗೊಂಡ ಕುಣಿಗಲ್ ಪೊಲೀಸರು ರಘು ಮತ್ತು ಅವರ ಸ್ನೇಹಿತರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅವಾಚ್ಯ ಶಬ್ದದಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಬುಧವಾರ ಅವರ ಪಕ್ಷದ ನಾಯಕ ರವಿಕೃಷ್ಣಾ ರೆಡ್ಡಿಯವರ ಸಮ್ಮುಖದಲ್ಲಿ ಪ್ರತಿಭಟಿಸಲು ಮುಂದಾದರು.
ಸಾರ್ವಜನಿಕ ಸ್ಥಳದಲ್ಲಿ ನಾವು ನ್ಯಾಯ ಕೇಳಲು ಪ್ರತಿಭಟನೆ ಮಾಡುತ್ತೇವೆಯೇ ಹೊರತು, ಯಾರಿಗೂ ತೊಂದರೆ ಕೊಡುವುದಿಲ್ಲ ಎಂದು ರವಿಕೃಷ್ಣಾರೆಡ್ಡಿ ಹೇಳಿದರು. ಇದಕ್ಕೆ ಒಪ್ಪದ ಪಿ.ಎಸ್.ಐ. ಚುನಾವಣಾ ನೀತಿಸಂಹಿತೆ ಇರುವುದರಿಂದ ಇಲ್ಲಿ ಅವಕಾಶ ನೀಡಲಾಗದು ಎಂದಾಗ ನಗರ ಪ್ರದೇಶದಲ್ಲಿ ಚುನಾವಣ ನೀತಿ ಸಂಹಿತೆ ಇಲ್ಲ ಏನು ನೀವು ಹೀಗೇಕೆ ಮಾಡುತ್ತೀರಿ, ನಮಗೆ ಪ್ರತಿಭಟಿಸಲು ಅವಕಾಶ ನೀಡಿ ನಿಮ್ಮ ಮೇಲಾಧಿಕಾರಿಗಳು ಬಂದು ನ್ಯಾಯ ನೀಡಲಿ ಎಂದರು.
ಅದೇ ಸಮಯಕ್ಕೆ ಸಿ.ಪಿ.ಐ. ಗುರುಪ್ರಸಾದ್ ಆಗಮಿಸಿ, ಇಲ್ಲಿ ಪ್ರತಿಭಟಿಸಲು ಅವಕಾಶ ಇಲ್ಲ ನಿಮಗೆ ಏನು ಅನ್ಯಾಯವಾಗಿದೆ ಅದಕ್ಕೆ ದೂರು ಕೊಡಿ ಮುಂದೆ ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ವೇಳೆ ಪೊಲೀಸರು ಮತ್ತು ರವಿಕೃಷ್ಣಾರೆಡ್ಡಿ ಬೆಂಬಲಿಗರು ನಡುವೆ ಮಾತಿನ ಚಕಮಕಿ ನಡೆದು, ಏರು ಧ್ವನಿಯಲ್ಲಿ ಕೂಗಾಟ ಪ್ರಾರಂಭವಾಗುತ್ತಿದ್ದಂತೆ ಇವರನ್ನು ಠಾಣೆಗೆ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡಲು ಬಿಡಬೇಡಿ ಎಂದು ಸಿಪಿಐ ಸೂಚಿಸುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಸುತ್ತುವರೆದು ಠಾಣೆಯ ಒಳಭಾಗಕ್ಕೆ ಕರೆದೊಯ್ದರು.
ಡಿವೈಎಸ್‍ಪಿ ಜಗದೀಶ್ ಆಗಮಿಸಿ, ರವಿಕೃಷ್ಣಾ ರೆಡ್ಡಿ ಮತ್ತು ಅವರ ಕೆಲವು ಬೆಂಬಲಿಗರನ್ನು ಬೇರ್ಪಡಿಸಿ, ತಮ್ಮ ಕಚೇರಿಯಲ್ಲಿ ಪರಸ್ಪರ ಮಾತುಕತೆಯೊಂದಿಗೆ ಸಮಸ್ಯೆಯನ್ನು ಇತ್ಯರ್ಥ ಪಡಿಸಿ ಕೂಡಲೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಕುಡಿದು ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಮೂರು ಜನ ಪೊಲೀಸ್ ಸಿಬ್ಬಂದಿಯನ್ನು ಅಮಾನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅದೇಶಿಸಿದ್ದಾರೆ ಎಂದು ಹೇಳಿದರು.
ಈ ಘಟನೆಗೆ ಮೂಲ ಕಾರಣರಾದ ಮದ್ಯ ಸೇವಿಸಿ ಕರ್ತವ್ಯ ನಿರ್ವಹಿಸುತ್ತಿದ್ದ ಚಿಕ್ಕನಾಯಕನಹಳ್ಳಿಯಿಂದ ಬಂದಿದ್ದ ಎ.ಎಸ್.ಐ. ಶ್ರೀನಿವಾಸ್, ತುರುವೇಕೆರೆ ಠಾಣೆಯ ಸಂತೋಷ್ ಮತ್ತು ಪರಮೇಶ್ ಎಂಬುವವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತ್ತುಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಕರ್ನಾಟಕ ರಾಷ್ಟ್ರ ಸಮಿತಿಯ ಉಪಾಧ್ಯಕ್ಷ ನಿಂಗೇಗೌಡ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ್, ಗಜೇಂದ್ರಕುಮಾರ್, ರಘುಪತಿಭಟ್, ದೀಪಕ್‍ಸೇನ್, ರಾಜ್ಯ ಮಾಹಿತಿ ಹಕ್ಕು ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ