ಕುಣಿಗಲ್ :
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆದು ಎಲ್ಲಾ 14 ನಿರ್ದೆಶಕ ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಭಂಗ ಅನುಭವಿಸಿವೆ.
ಒಟ್ಟು 14 ನಿರ್ದೇಶಕ ಸ್ಥಾನಗಳ ಪೈಕಿ 9 ಮಂದಿ ಜೆಡಿಎಸ್ ಅಭ್ಯರ್ಥಿಗಳು ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿಕೆ ಐದು ಸ್ಥಾನಗಳಿಗೆ ಸೋಮವಾರ ಚುನಾವಣೆ ನಡೆಯಿತು. ಕಾಂಗ್ರೆಸ್ ಬೆಂಬಲಿಗರಾದ ಚಂದ್ರಪ್ಪ, ಐ.ಜಿ.ರಮೇಶ್, ಬಿಜೆಪಿ ಬೆಂಬಲಿಗರಾದ ದೊಡ್ಡ ತಿಮ್ಮೇಗೌಡ ನಾಮಪತ್ರ ಸಲ್ಲಿಸಿದ್ದರು ಇನ್ನೂ ಜೆಡಿಎಸ್ ಬೆಂಬಲಿಗರಾದ ಬಿ.ಶಿವಣ್ಣ, ಕಾಮನಹಳ್ಳಿ ರಾಮಣ್ಣ, ಗಿರೀಶ್ ಬಾಬು, ಹೆಚ್.ಎಂ ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್‍ನ ನಾಲ್ಕು ಮಂದಿ ತಲಾ 10 ಮತಗಳನ್ನು ಪಡೆದು ಜಯಶೀಲರಾದರೇ ಕಾಂಗ್ರೆಸ್ ಐ.ಜಿ.ರಮೇಶ್ ಜೆಡಿಎಸ್‍ನ 9 ಮತಗಳನ್ನು ಪಡೆದು ಜಯಶೀಲರಾದರು.
ಜೆಡಿಎಸ್ ಬಿ.ಶಿವಣ್ಣ 8ನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದರು. ಜೆಡಿಎಸ್ ಮತಗಳಿಂದ ನಾನು ನಿರ್ದೇಶಕನಾಗಿ ಆಯ್ಕೆಯಾಗಿದ್ದೇನೆ ಈ ಸಂಬಂಧ ಬಿ.ಶಿವಣ್ಣ ಅವರ ಪರವಾಗಿ ನಾನು ಸಹಕಾರ ಕ್ಷೇತ್ರದ ಬೆಂಬಲ ನೀಡುವುದಾಗಿ ನೂತನ ನಿರ್ದೇಶಕ ಕಾಂಗ್ರೆಸ್ ಬೆಂಬಲಿತ ಐ.ಜಿ.ರಮೇಶ್ ತಿಳಿಸಿದರು.
ಅವಿರೋಧವಾಗಿ ಗೌಡಯ್ಯ, ರಂಗಸ್ವಾಮಿ, ಶ್ರೀನಿವಾಸ್, ವರದರಾಜು, ಆಶೋಕ್, ಹುಚ್ಚಯ್ಯ, ನಂದಿನಿ ಹರೀಶ್, ಮಂಜುಳ ಅರುಣ್ ಕುಮಾರ್ ಹಾಗೂ ಲಕ್ಷ್ಮಣ್ ಆಯ್ಕೆಯಾಗಿದ್ದರು.
ಗೆಲವು ಸಾಧಿಸಿದ ಜೆಡಿಎಸ್‍ನ ಎಲ್ಲಾ 14 ಮಂದಿ ನಿರ್ದೇಶಕರಿಗೆ ಅಭಿನಂದಿಸಿ ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ತಾಲೂಕಿನಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ನಾಯಕರು ಇನ್ನಿಲ್ಲದ ಎಲ್ಲಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಎಂತಹ ಸರ್ಕಸ್ ಮಾಡಿದರೂ ಜೆಡಿಎಸ್ ಪಕ್ಷವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬದಕ್ಕೆ ಇಂದು ನಡೆದಿರುವ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಒಂದು ಸ್ಥಾನ ಗೆಲುವು ಸಾದಿಸಲಾಗದಿರುವುದೇ ಸಾಕ್ಷಿ ಎಂದು ತಿಳಿಸಿದರು.
ರಾಜ್ಯ ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎನ್.ಜಗದೀಶ್, ತಾಲೂಕು ಜೆಡಿಎಸ್ ಬ್ಲಾಕ್ ಅಧ್ಯಕ್ಷ ಕೆ.ಎಲ್.ಹರೀಶ್, ತಾ.ಪಂ ಮಾಜಿ ಅಧ್ಯಕ್ಷ ಹರೀಶ್ ನಾಯ್ಕ್, ಯುವ ಮುಖಂಡ ಪ್ರಮೋದ್ ಶಿವಣ್ಣ ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ