ಕುಣಿಗಲ್ :
ವಯೋವೃದ್ಧ ಮಹಿಳೆಯೊಬ್ಬಳು ಕೆಲ ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಊಟ ಉಪಚಾರವಿಲ್ಲದೆ ನರಳಾಡುತ್ತಿದ್ದ ಬಗ್ಗೆ ದೂರು ಆಲಿಸಿದ ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಮತ್ತು ಸಿಬ್ಬಂದಿಗಳು ಆಕೆಗೆ ಸೂಕ್ತ ಚಿಕಿತ್ಸೆ ಕೊಡಿಸಿ ನಿರಾಶ್ರಿತರ ತಾಣಕ್ಕೆ ಸುರಕ್ಷಿತವಾಗಿ ಕಳಿಸಿಕೊಡುವ ಮೂಲಕ ನಾಗರೀಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪಟ್ಟಣದ 11ನೇ ವಾರ್ಡ್‍ನ ಚೌಡೇಶ್ವರಿ ಬೀದಿಯ ಬಾಡಿಗೆ ಮನೆಯೊಂದರಲ್ಲಿ ಕೂಲಿ-ನಾಲಿ ಮಾಡಿಕೊಂಡು ಶಕ್ತಿ ಇರುವವರೆಗೂ ದುಡಿದು ಸ್ವಾಭಿಮಾನದಿಂದ ಬಾಳುತ್ತ ಜೀವನ ಸಾಗಿಸುತ್ತಿದ್ದ ಜಯಮ್ಮ ಎಂಬ 65 ವರ್ಷದ ಅನಾಥ ವಯೋವೃದ್ಧ ಮಹಿಳೆಯೊಬ್ಬರು ಕೆಲ ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಊಟ ಉಪಚಾರವಿಲ್ಲದೆ ನರಳಾಡುತ್ತಿದ್ದಾಗ ಲಾಕ್ಡೌನ್ ವೇಳೆ ಕೆಲ ಸಂಘ ಸಂಸ್ಥೆಯ ಯುವಕರು ಊಟ ನೀಡುತ್ತಿದ್ದರು. ಆದರೆ ಇತ್ತೀಚೆಗೆ ಜಯಮ್ಮನಿಗೆ ಅನಾರೋಗ್ಯ ಹೆಚ್ಚಾದ ಕಾರಣ ಸುತ್ತಮುತ್ತಲ ನಾಗರೀಕರು ಕೊರೋನಾ ರೋಗವು ಹೆಚ್ಚುತ್ತಿರುವುದರಿಂದ ಈ ಸ್ಥಿತಿಯಲ್ಲಿ ಬಂಧು ಬಳಗವಿಲ್ಲದ ಅನಾಥೆಯ ಸ್ಥಿತಿಯನ್ನು ನೋಡಲಾಗದೇ ಪುರಸಭಾ ಅಧ್ಯಕ್ಷರಾದ ಎಸ್.ಕೆ.ನಾಗೇಂದ್ರ ಅವರಿಗೆ ತಿಳಿಸಲಾಗಿ ಅವರು ಜಯಮ್ಮ ವಾಸಿಸುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಸೀಲಿಸಿ ನಂತರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಗುಣಮುಖ ಆಗುವವರೆಗೆ ಚಿಕಿತ್ಸೆ ಕೊಡಿಸುವುದರ ಜೊತೆಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದ್ದರು.
ಜೂ.07 ರಂದು ಅವರ ಆರೋಗ್ಯ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ವಾಹನದ ವ್ಯವಸ್ಥೆಯೊಂದಿಗೆ ಜಿಲ್ಲೆಯ ಮಧುಗಿರಿಯ ಬಳಿ ಇರುವ ನಿರಾಶ್ರಿತರ ತಾಣಕ್ಕೆ ಸುರಕ್ಷಿತವಾಗಿ ಕಳಿಸಿಕೊಟ್ಟಿರುವುದಾಗಿ ತಿಳಿಸಿದರು ಈ ಹಿಂದೆಯೂ ಸಹ ನನ್ನ ಕೈಲಾದಷ್ಟು ಸೇವೆಯನ್ನು ಯಾವುದೇ ಅಧಿಕಾರ ಇರಲಿ ಬಿಡಲಿ ಮಾಡಿಕೊಂಡು ಬಂದಿದ್ದು ಮುಂದೆಯೂ ಅಮಾಯಕರ, ನಿರ್ಗತಿಕರ ಸೇವೆಯನ್ನು ಮಾಡುವುದಾಗಿ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
