ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲ – ಜಮೀರ್ ಅಹಮದ್

ಕುಣಿಗಲ್ :

     ರಾಜ್ಯದ ಬಿಜೆಪಿ ಸರ್ಕಾರ ಕೊರೋನ ಎರಡನೆ ಅಲೆಯನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಸಮರ್ಪಕ ನಿರ್ಧಾರಗಳನ್ನು ತೆಗೆದುಕೊಳ್ಳದೆ ಜನರೊಂದಿಗೆ ಚೆಲ್ಲಾಟವಾಡುವ ಮೂಲಕ ಹೆಚ್ಚಿನ ಸಾವು ನೋವಿಗೆ ಕಾರಣವಾಯಿತು ಎಂದು ಮಾಜಿ ಸಚಿವ ಹಾಗೂ ಶಾಸಕ ಜಮೀರ್ ಅಹಮದ್ ಕಟುವಾಗಿ ಟೀಕಿಸಿದರು.

     ಪಟ್ಟಣದ ಕೋಟೆ ಪ್ರದೇಶದಲ್ಲಿ ಡಿ.ಕೆ.ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬಿಜೆಪಿ ಸರ್ಕಾರವು ಕೊರೊನಾ ರೋಗವನ್ನು ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದು, ರಾಜ್ಯಾದ್ಯಂತ ಸುಮಾರು 35 ಸಾವಿರ ಜನ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಮನೆಯ ಹಿರಿಯರೊಬ್ಬರು ಮರಣ ಹೊಂದಿದ್ದರೆ ಅಂತವರಿಗೆ ಒಂದು ಲಕ್ಷ ರೂಪಾಯಿಗಳ ಪರಿಹಾರ ಕೊಡುತ್ತೇವೆ ಎಂದು ಹೇಳಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ. ಈ ಸರ್ಕಾರದ ನಿರ್ಲಕ್ಷ್ಯವೇನಂದರೆ ದುಡಿಯುವ ವ್ಯಕ್ತಿ ಮರಣ ಹೊಂದಿದ್ದರೆ ಕೇವಲ ಒಂದು ಲಕ್ಷ ನೀಡುವಂತಹ ವ್ಯವಸ್ಥೆ ಕೈಗೊಂಡಿರುವುದಾಗಿದೆ.
ಸರ್ಕಾರ ಜನರನ್ನು ಮರುಳು ಮಾಡಿ ಚೆಲ್ಲಾಟವಾಡುತ್ತಿದ್ದು, ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರು ಮರಣ ಹೊಂದಿದ್ದಾರೆ ಆದರೇ ಸರ್ಕಾರದ ಮಂತ್ರಿಗಳು ಕೇವಲ ಮೂರು ಜನ ಸತ್ತಿದ್ದಾರೆ ಎಂದು ಸುಳ್ಳು ಹೇಳುತ್ತಾರೆ. ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿತು ಎಂದು ದೂರಿದರು.

     ಮುಸ್ಲಿಂ ಬಾಂಧವರು ಭಯಪಡದೆ ಅಪಪ್ರಚಾರಕ್ಕೆ ಹೆದರದೆ ಕೋರೋನ ಲಸಿಕೆಯನ್ನು ತಪ್ಪದೇ ಹಾಕಿಕೊಳ್ಳುವ ಮೂಲಕ ರೋಗವನ್ನು ನಿಯಂತ್ರಿಸಲು ಸಹಕರಿಸಬೇಕು ಎಂದರು. ಕಾರ್ಯಕ್ರಮದಲ್ಲಿ 50 ಮುಸ್ಲಿಂ ವಿಧವಾ ಮಹಿಳೆಯರಿಗೆ ತಲಾ ಒಂದು ಸಾವಿರದಂತೆ 50 ಸಾವಿರ ಹಣವನ್ನು ನೀಡಿದರು.

      ಶಾಸಕ ಎಚ್.ಡಿ. ರಂಗನಾಥ್ ಮಾತನಾಡಿ ಕೊರೋನಾ ರೋಗವನ್ನು ನಿಯಂತ್ರಿಸುವ ವೈದ್ಯರು ಯಾವುದೆ ಜಾತಿ, ಧರ್ಮವಿಲ್ಲದೆ ಪ್ರತಿಯೊಬ್ಬರೂ ಸಹಕರಿಸಿದರು. ಅದರಲ್ಲೂ ರೋಗಕ್ಕೆ ತುತ್ತಾದಾಗ ಮುಸ್ಲಿಂ ಬಾಂಧವರು ಅಂತ್ಯಕ್ರಿಯೆ ನೆರವೇರಿಸಿದರು. ರಾಜ್ಯದಲ್ಲಿ ಪ್ರತಿ ಹಂತದಲ್ಲಿಯೂ ಸರ್ಕಾರ ವಿಫಲಗೊಂಡಿದೆ ಎಂದರು.

      ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ, ಸಮಿಉಲ್ಲಾ, ಮಾಜಿ ಪುರಸಭಾಧ್ಯಕ್ಷ ರೆಹಮಾನ್ ಶರೀಫ್, ಮುಖಂಡರಾದ ಬಿ.ಎಂ.ಹುಚ್ಚೇಗೌಡ, ಶಂಕರ್, ಅಬ್ದುಲ್ ಹಮೀದ್, ಸುಂದ್ರಕುಪ್ಪೆ ಪಾಪಣ್ಣ, ರಂಗಣ್ಣಗೌಡ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link