ಕುಣಿಗಲ್ :

ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಕೋವಿಡ್ ಸಂಕಷ್ಟದಲ್ಲಿರುವ ಜನರ ನೋವಿಗೆ ನೆರವಾಗುವ ಮೂಲಕ ಶಕ್ತಿ ಮೀರಿ ಶ್ರಮಿಸುತ್ತಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾllಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದ ಜಿಕೆಬಿಎಂಎಸ್ ರಂಗಮಂದಿರದಲ್ಲಿ ಶಾಸಕ ಡಾ.ರಂಗನಾಥ್ ಅವರ ನೇತೃತ್ವದಲ್ಲಿ ಡಿ.ಕೆ.ಎಸ್. ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕೊರೋನಾ ಸಂಕಷ್ಟದಲ್ಲಿರುವ ಜನರ ನೆರವಿಗೆ 75 ಸಾವಿರ ದಿನಸಿ ಕಿಟ್ ಹಾಗೂ 500 ಉಚಿತ ಕೋವಿಡ್ ಲಸಿಕೆಯನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ದೇಶದ ಜನರು ಕೋವಿಡ್ ಸಂಕಷ್ಟದಿಂದ ಬೀದಿ ಬೀದಿಯಲ್ಲಿ ಸಾವನ್ನಪ್ಪುತ್ತಿದ್ದಾರೆ ಇದನ್ನು ಸಮರ್ಪಕವಾಗಿ ನಿಭಾಯಿಸದ ಪ್ರಧಾನ ಮಂತ್ರಿಗಳು ಉದ್ದನೆಯ ಗಡ್ಡ ಬಿಟ್ಟುಕೊಂಡಿದ್ದಾರೆ ಬಿಟ್ಟುಕೊಳ್ಳಲಿ, 14 ಲಕ್ಷದ ಸೂಟ ಧರಿಸಲಿ ನಮ್ಮ ಅಭ್ಯಂತರವಿಲ್ಲ ಆದರೆ ಅವರು ಆರೂವರೆ ಕೋಟಿ ಲಸಿಕೆಗಳನ್ನು ಹೊರದೇಶಗಳಿಗೆ ಕಳಿಸುತ್ತಾರೆ ಇಲ್ಲಿ ದೇಶವಾಸಿಗಳು ಲಸಿಕೆ ಇಲ್ಲದೆ ಸಾವನ್ನಪ್ಪುತ್ತಿದ್ದು ಗೋಚರಿಸಲಿಲ್ಲವೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ಸರ್ಕಾರದ ಮಂತ್ರಿಗಳು ಆಡಳಿತದ ಯಾವುದೆ ಹಿಡಿತವಿಲ್ಲದೆ ಚಾಮರಾಜನಗರದಲ್ಲಿ 38 ಜನ ಆಮ್ಲಜನಕ, ಔಷಧಿ, ಸಲಕರಣೆ ಇಲ್ಲದೆ ಸಾವನ್ನಪ್ಪಿದರು. ಆಡಳಿತದಲ್ಲಿ ವಿರೋಧ ಪಕ್ಷದವರನ್ನು ಯಾವುದೆ ಸಂದರ್ಭದಲ್ಲಿಯೂ ಪರಿಗಣಿಸಲಿಲ್ಲ, ಅವರ ಸಲಹೆಯನ್ನು ಪಡೆಯಲಿಲ್ಲ. ಜನರ ಸಂಕಷ್ಟವನ್ನು ಮನಗಂಡ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ನಾನು ಸೇರಿದಂತೆ ಕಾಂಗ್ರೆಸ್ ಪಕ್ಷವು ರಾಜ್ಯಾದ್ಯಂತ ಜನರ ನೆರವಿಗೆ ನಿಂತು ಉತ್ತಮ ಕಾರ್ಯವನ್ನು ಕೈಗೊಂಡಿದೆ.
ಕುಣಿಗಲ್ ಕ್ಷೇತ್ರದ ಜನರಿಗೆ ಸಿದ್ಧಾರ್ಥ ಮೆಡಿಕಲ್ ಕಾಲೇಜಿನ 20 ವೈದ್ಯರ ತಂಡವನ್ನು ಪ್ರತಿ ಮನೆ ಮನೆಗೆ ಕಳಿಸಿ ಒಂದು ತಿಂಗಳು ಆರೋಗ್ಯ ತಪಾಸಣೆ ಕೈಗೊಂಡು ಅವರಿಗೆ ಎಲ್ಲಾ ಸೌಲಭ್ಯಗಳನ್ನು ಹಳ್ಳಿಗಾಡಿನ ಜನಕ್ಕೆ ಒದಗಿಸಲಾಗುವುದು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಪ್ರಾಣ ಉಳಿಸಿಕೊಳ್ಳಿ ಎಂದು ಮನವಿ ಮಾಡಿದರು.
ಶಾಸಕರಾದ ಡಾ.ರಂಗನಾಥ್ ಅವರು ಕೊರೊನಾ ಸಮಯದಲ್ಲಿ ಮಾಡಿದ ಸೇವೆ ರಾಜ್ಯದಲ್ಲಿಯೆ ಪ್ರಶಂಸೆಗೆ ಪಾತ್ರವಾಗಿದ್ದು ಈ ಮೂಲಕ ಅವರೊಬ್ಬ ಮಾದರಿ ಶಾಸಕರಾಗಿದ್ದಾರೆ. 3 ಕೋಟಿ ವೆಚ್ಚದಲ್ಲಿ 75 ಸಾವಿರಕ್ಕೂ ಹೆಚ್ಚು ಆಹಾರ ಧಾನ್ಯಗಳು, ಆಂಬ್ಯೂಲೆನ್ಸ್ ವ್ಯವಸ್ಥೆ, ಆಸ್ಪತ್ರೆಗೆ 50 ಆಕ್ಸಿಜನ್ ಬೆಡ್‍ಗಳು ಸೇರಿದಂತೆ ಜನ ಸಾಮಾನ್ಯರಿಗೆ ಸ್ಪಂದಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯ ಶಾಸಕರ ಕಾರ್ಯ ವೈಖರಿ ಮೆಚ್ಚತಕ್ಕದ್ದು, ಕಾಂಗ್ರೆಸ್ ಪಕ್ಷವು ಬಡವರು, ಮಹಿಳೆಯರು ಸೇರಿದಂತೆ ಜನಸಾಮಾನ್ಯರ ಪರವಾಗಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಸಂಸತ್ ಸದಸ್ಯ ಡಿ.ಕೆ.ಸುರೇಶ್ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೊರೋನಾ ಹೋಗಲಾಡಿಸಲು ಜನರಿಗೆ ದೀಪ ಹಚ್ಚಿ, ಜಾಗಟೆ ಹೊಡೆಯಿರಿ ಎನ್ನುತ್ತಾರೆ. ಜನರ ಕಷ್ಟಕ್ಕೆ ಯಾವುದೇ ನೆರವು ನೀಡಿರುವುದಿಲ್ಲ, 21 ಲಕ್ಷ ಕೋಟಿ ಕೊರೋನಾ ಪರಿಹಾರ ಘೋಷಣೆ ಮಾಡಿದ್ದರು ಸಹ ಯಾವುದೇ ಬಡವನ ಖಾತೆಗೆ ಹಣ ಸಂದಾಯ ಆಗಿರುವುದಿಲ್ಲ ಎಂದು ದೂರಿದರು. ಕೊರೋನಾ ಲಸಿಕೆಯನ್ನು ಸುಪ್ರೀಂಕೋರ್ಟ್ ಆದೇಶದಂತೆ ಉಚಿತವಾಗಿ ನೀಡಲು ತೀರ್ಮಾನ ಕೈಗೊಂಡಿದ್ದಾರೆ. ದೇಶದ ಜನರಿಗೆ ಅಚ್ಚೆ ದಿನ ಕಾಲ ಬರುತ್ತದೆ ಎಂದು ಪ್ರಧಾನಿ ಮೋದಿಜಿ ಹೇಳುತ್ತಿರುತ್ತಾರೆ ಆದರೆ ಬಾಯಿ, ಮೂಗು ಮುಚ್ಚಿ ಕೊಂಡಿರುವುದೆ ಬಡವರ ಪಾಲಿನ ಅಚ್ಚೆ ದಿನವಾಗಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಲೀಂಅಹ್ಮದ್ ಮಾತನಾಡಿ ಮಂತ್ರಿಗಳು ಜಿಲ್ಲಾ ಪ್ರವಾಸ ಕೈಗೊಳ್ಳದೆ ಕೇವಲ ಮುಖ್ಯಮಂತ್ರಿಗಳ ಬದಲಾವಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬಿಜೆಪಿ ಪಕ್ಷವು ಭ್ರಷ್ಟಾಚಾರದಲ್ಲಿದ್ದು, ಕಾಂಗ್ರೆಸ್ ಪಕ್ಷವು ಎಲ್ಲಾ 224 ಕ್ಷೇತ್ರಗಳಲ್ಲಿ ಬಡವರ ಪರವಾಗಿ ನಿಲ್ಲುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಜನರಿಗೆ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಹಲವರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಲಾಯಿತು.
ಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ.ರಂಗನಾಥ್, ಪುರಸಭಾಧ್ಯಕ್ಷ ನಾಗೇಂದ್ರ, ಮಂಜುಳಾ ರಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಮುಖಂಡರಾದ ಕೆಂಪೀರೇಗೌಡ, ಬೇಗೂರು ನಾರಾಯಣ್, ಆಲ್ಕೆರೆ ನಾರಾಯಣ್, ಕೊತ್ತಗೆರೆ ನಾರಾಯಣ್, ಎಸ್.ಆರ್.ಚಿಕ್ಕಣ್ಣ, ಶಂಕರ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








