ಹೊಸ ಮುಖ್ಯಮಂತ್ರಿಯಿಂದಲೂ ರಾಜ್ಯ ಚೈತನ್ಯ ಕಾಣುತ್ತಿಲ್ಲ

ಕುಣಿಗಲ್ : 

     ಮುಖ್ಯ ಮಂತ್ರಿಗಳು ಬದಲಾದರೂ ರಾಜ್ಯದಲ್ಲಿ ಹೊಸ ಚೈತನ್ಯ ಕಾಣುತ್ತಿಲ್ಲ. ಸಾಮಾನ್ಯ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ವಿಫಲವಾಗಿರುವ ರಾಜ್ಯ ಸರ್ಕಾರ ಇದಾಗಿದ್ದು, ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠಕಲಿಸುತ್ತಾರೆ ಎಂದು ಶಾಸಕ ಡಾ.ಹೆಚ್.ಡಿ.ರಂಗನಾಥ್ ಕಟುವಾಗಿ ಟೀಕಿಸಿದರು.

     ನಗರದ ಪುರಸಭೆ ವ್ಯಾಪ್ತಿಯಲ್ಲಿ ಬರುವ 40 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ ಪುರಸಭೆಯ ಅನುದಾನದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಉಚಿತ ಗ್ಯಾಸ್ ಪರಿಕರ ವಿತರಿಸಿ ಅವರು ಮಾತನಾಡಿದರು. 40 ಲಕ್ಷ ರೂ. ವೆಚ್ಚದಲ್ಲಿ 13, 17 ಹಾಗೂ 15ನೇ ವಾರ್ಡ್ ಸೇರಿದಂತೆ ಪಟ್ಟಣದ 6 ಕಡೆ ವಿವಿಧ ಕಾಮಗಾರಿಗಳಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.

ಭರವಸೆ ಈಡೇರಿಸುವಲ್ಲಿ ವಿಫಲ :

      ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರಾಜ್ಯದ ಸಾಮಾನ್ಯ ಜನರಿಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದ್ದು, ಪ್ರತಿಯೊಂದು ಹಂತದಲ್ಲೂ ಸೋತುಹೋಗಿದೆ. ಈಗ ಹೊಸ ಮುಖ್ಯಮಂತ್ರಿಗಳು ಅಧಿಕಾರವಹಿಸಿ ಕೊಂಡಾಗ ಏನೋ ಬದಲಾವಣೆ ಕಾಣಬಹುದು ಎಂದುಕೊಂಡಿದ್ದೆವು, ಆದರೆ ಯಾವುದೇ ಹೊಸ ಚೈತನ್ಯವನ್ನು ಮೂಡಿಸುವಲ್ಲಿ ಹೊಸ ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ ಎಂದ ಶಾಸಕರು ರಾಜ್ಯದಲ್ಲಿ ಶ್ರೀಸಾಮಾನ್ಯರ ಕೈಗೆ ಎಟುಕದ ವಸ್ತುವಿನಂತಾಗಿರುವ ಈ ಸರ್ಕಾರ ಕ್ಷೇತ್ರವಾರು ಅನುದಾನಗಳನ್ನು ಬಿಡುಗಡೆ ಮಾಡಲು ತಾರತಮ್ಯ ಮಾಡುತ್ತಿರುವುದರಿಂದ ಕ್ಷೇತ್ರದ ಅಭಿವೃದ್ಧಿಗೆ ಕುಂಟಿತವಾಗಿದೆ ಇದೇ ರಿತಿ ಮುಂದುವರಿಸಿದರೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯೇ ಈಗಿನ ಸರ್ಕಾರಕ್ಕೆ ತಕ್ಕಪಾಠ ಕಲಿಸುತ್ತಾರೆ ಎಂದರು.

ಸರ್ಕಾರ ಶೀಘ್ರ ಅಧಿವೇಶನ ನಡೆಸಲಿ :

      ಸರ್ಕಾರ ಅಧಿವೇಶನ ನಡೆಸಿದ್ದರೆ ನಮ್ಮ ಕ್ಷೇತ್ರದ ಸಮಸ್ಯೆ ಹೇಳಬದಿತ್ತು ಆದರೆ ಮುಖ್ಯಮಂತ್ರಿಗಳು ಅಧೀವೇಶನ ನಡೆಸಲು ಇನ್ನೂ ಮನಸ್ಸು ಮಾಡಿಲ್ಲ, ನಾನು ಸಿಎಂ ಭೇಟಿಯಾಗಲು ಕಾಲಾವಕಾಶ ಕೂಡ ಸಿಕ್ಕಿಲ್ಲ ಎಂದ ಅವರು ಇಲ್ಲಿನ ಯುಜಿಡಿ ಕಾಮಗಾರಿ ಸೇರಿದಂತೆ ಪಟ್ಟಣದ ಖಾಸಗಿ ಬಸ್ ನಿಲ್ದಾಣ ಮತ್ತು ನೀರಾವರಿ ಸೇರಿದಂತೆ ಹಲವು ಯೋಜನೆಗಳ ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತ ತಾರತಮ್ಯ ನೀತಿ ಅನುಸರಿಸಿ ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಟೀಕಿಸಿದರು.

ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ಎಸ್.ಕೆ.ನಾಗೇಂದ್ರ, ಉಪಾಧ್ಯಕ್ಷೆ ಮಂಜುಳರಂಗಪ್ಪ, ಮುಖ್ಯಾಧಿಕಾರಿ ರವಿಕುಮಾರ್, ಸದಸ್ಯರಾದ ಅರುಣ್‍ಕುಮಾರ್, ಕೋಟೆನಾಗಣ್ಣ, ಸನಾವುಲ್ಲಾ, ಜಯಲಕ್ಷ್ಮಿ, ಶ್ರೀನಿವಾಸ್, ದೇವರಾಜ್, ಉದಯ್, ತಾಲ್ಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಆಲ್ಕೆರೆ ನಾರಾಯಣ್, ಸತೀಶ್, ನಾರಾಜು, ಮುಂತಾದವರು ಹಾಜರಿದ್ದರು.

      ಶಿರಾಗೆ ಹೇಮಾವತಿ ನೀರು ಹರಿಸುವುದು ತಪ್ಪು : ಶಿರಾ ತಾಲ್ಲೂಕು ಕೃಷ್ಣಾ ಕೊಳ್ಳ ವ್ಯಾಪ್ತಿಗೆ ಒಳಪಟ್ಟಿದ್ದರೂ ಆ ಭಾಗಕ್ಕೆ ಕಾವೇರಿ ಕೊಳ್ಳದ ಹೇಮಾವತಿ ನೀರು ಹರಿಸಿದರೆ ತಪ್ಪಾಗುತ್ತದೆ. ಮೂಲ ನಕ್ಷೆಯಂತೆ ತಾಲ್ಲೂಕಿಗೆ ಹೇಮಾವತಿ ನೀರು ಹರಿಸಬೇಕಾಗಿದ್ದು, ಕುಣಿಗಲ್‍ಗೆ ನಿಗಧಿಯಾದಷ್ಟು ಹೇಮಾವತಿ ನೀರು ಸಮರ್ಪಕವಾಗಿ ಹರಿಯ ಬೇಕಾದರೆ ಹಿಂದಿನ ಸರ್ಕಾರ ಅನುಮೋದಿಸಿದ್ದ ಪೈಪ್‍ಲೈನ್ ಕಾಮಗಾರಿ ಮಾಡಿಸಲು ಸಹಕಾರ ನೀಡಬೇಕು ಆದರೆ ರಾಜಕೀಯ ಮಾಡುತ್ತಿದ್ದಾರೆ ಇದಕ್ಕೆ ಮುಂದೆ ತಕ್ಕ ಪಾಟಕಲಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link