ಕುಣಿಗಲ್ :
ನ್ಯಾಯಾಂಗ ವ್ಯವಸ್ಥೆ ಬಲಿಷ್ಠಗೊಳ್ಳಲು ವಕೀಲರು ಸೈನಿಕರಂತೆ ಪ್ರಾಮಾಣಿಕವಾಗಿ ಹಗಲಿರುಳು ಶ್ರಮಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ತುಮಕೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.
ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ವಕೀಲರ ಸಂಘದ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ವಕೀಲರು ತ್ಯಾಗ ಬಲಿದಾನಗಳಿಂದ ಬಂದಂತಹ ಸ್ವಾತಂತ್ರ್ಯವನ್ನು ಉಳಿಸಿ ಬೆಳೆಸುವಂತಹ ಕಾರ್ಯಗಳನ್ನು ಇಂದಿನ ವಕೀಲರು ಕೈಗೊಳ್ಳಬೇಕಾಗಿದೆ. ಯಾವುದೇ ಕಕ್ಷಿದಾರರ ಕೇಸುಗಳನ್ನು ಕೈಗೊಳ್ಳುವ ಮೂಲಕ ಏಕಲವ್ಯ ಅರ್ಜುನ ಅಂತಹ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳುವ ಮೂಲಕ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ವೃತ್ತಿ ಧರ್ಮಕ್ಕೆ ಗೌರವ ಹೆಚ್ಚಾಗುತ್ತದೆ ಎಂದರು.
ಕೊರಾನಾ ಸಂದರ್ಭದಲ್ಲಿ 260 ಹೆಚ್ಚು ವಕೀಲರು ಸಾವನ್ನಪ್ಪಿದ್ದರು ಸಹ ನ್ಯಾಯಾಂಗ ವ್ಯವಸ್ಥೆಯಲ್ಲಿ ಆತ್ಮಸ್ಥೈರ್ಯದಿಂದ ಕೆಲಸ ಮಾಡುತ್ತಿರುವ ವಕೀಲರು. ನ್ಯಾಯಾಂಗ ಇಲಾಖೆ ಸಿಬ್ಬಂದಿಗಳು. ವೈದ್ಯರು. ಪೌರಕಾರ್ಮಿಕರು. ಪೆÇೀಲಿಸ್. ಆರೋಗ್ಯ ಸಿಬ್ಬಂದಿಯ ಕಾರ್ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಕ್ಕಳನ್ನು ಸಮಾಜ ಕಟ್ಟುವ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕು. ಕೇವಲ 98 ಅಂಕ ಗಳಿಸಿ ಕೆಲಸ ನಿರ್ವಹಿಸಿದರೆ ಸಾಧ್ಯವಿಲ್ಲ. ಜನರ ಹೃದಯದಲ್ಲಿ ಗುರುತಿಸಿಕೊಳ್ಳುವಂತಹ ವ್ಯಕ್ತಿಗಳಾಗಿ ಹುಟ್ಟು-ಸಾವು ಮಧ್ಯೆ ಸಾಧಕರಾಗಿ ಸಾಧಿಸಬೇಕು. ಯಾವುದೇ ಅಧಿಕಾರ ಹಣ ವಿದ್ಯೆ ಅಹಂ ಪಡೆಯದೆ ಕಕ್ಷಿದಾರರ ನ್ಯಾಯಕ್ಕೆ ಹೋರಾಟ ಮಾಡಿದಾಗ ನಿಜವಾದ ಕಕ್ಷಿದಾರನಿಗೆ ಬಡವರಿಗೆ ಸಹಾಯ ನೀಡಿದ ತೃಪ್ತಿ ಬಂದಂತಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶರಾದ ಜಿ.ಎಸ್.ಸಂಗ್ರೇಶಿ ಮಾತನಾಡಿ, ಜಿಲ್ಲಾ ಮೆಗಾ ಲೋಕ ಅದಾಲತ್‍ನಲ್ಲಿ ಜಿಲ್ಲೆಯಲ್ಲಿ 37 ಸಾವಿರಕ್ಕೂ ಹೆಚ್ಚು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿದ ಕೀರ್ತಿ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ ಸಲ್ಲುತ್ತದೆ. ಕುಣಿಗಲ್ ತಾಲ್ಲೂಕಿನ ಆರು ಸಾವಿರಕ್ಕೂ ಹೆಚ್ಚು ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥ ಮಾಡಿದ ನ್ಯಾಯಾಧೀಶರಿಗೆ ಅಭಿನಂದಿಸಿದರು. ವಕೀಲರ ಸಂಘದ ಸುಂದರ ಕಟ್ಟಡವನ್ನು ಸ್ವಚ್ಛತೆಯಿಂದ ಶಿಸ್ತುಬದ್ಧವಾಗಿ ಕಾಪಾಡಿ ಕೊಳ್ಳಬೇಕೆಂದು ತಿಳಿಸುತ್ತಾ, ವಕೀಲರು ಸಣ್ಣಪುಟ್ಟ ಘಟನೆಗಳಿಗೆ ಪ್ರತಿಭಟನೆ ಮಾಡದೆ ಕಕ್ಷಿದಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಎಂ.ಎಂ.ಮಧುಸುದನ್, ಮಾಜಿ ಸಂಸದ ಎಸ್.ಪಿ ಮುದ್ದಹನುಮೇಗೌಡ, ಶಾಸಕ ಎಚ್.ಡಿ.ರಂಗನಾಥ್, ತಾಲ್ಲೂಕು ಹಿರಿಯ ನ್ಯಾಯಾಧೀಶರಾದ ರಾಘವೇಂದ್ರ ಮತ್ತು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ವಕೀಲರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
