ಕುಣಿಗಲ್ :
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ಧೋರಣೆ ವಿರೋಧಿಸಿ ನಡೆಸಿದ ತಾಲ್ಲೂಕು ಬಂದ್‍ಗೆ ಭಾಗಶಃ ಮಿಶ್ರ ಪ್ರತಿಕ್ರಿಯೆ ಉಂಟಾಗುವ ಮೂಲಕ ಬಂದ್ ಶಾಂತಿಯುತವಾಗಿ ಯಶಸ್ವಿಯಾಯಿತು.
ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸಿದ್ದ ಪೊಲೀಸರು ಸಂಘಟನೆಗಳ ಬೆನ್ನುಹತ್ತಿ ಸಂಚರಿಸುವ ಮೂಲಕ ದುರ್ಘಟನೆಗಳಾಗದಂತೆ ಹದ್ದಿನ ಕಣ್ಣಿಡುವ ಮೂಲಕ ಪಟ್ಟಣದಲ್ಲಿ ಶಾಂತಿಯುತ ವ್ಯವಸ್ಥೆಯನ್ನು ಕೈಗೊಂಡಿದ್ದರು.
ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಪ್ರತಿಭಟನಾಕಾರರು :
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿಯ ವಿರುದ್ಧ ಕಳೆದ ಹತ್ತು ತಿಂಗಳಿಂದ ರೈತರು ಹೋರಾಟ ಮಾಡುತ್ತಿದ್ದರೂ ಸಹ ಬಿಜೆಪಿ ಸರ್ಕಾರ ಕಿಂಚಿತ್ತು ಸ್ಪಂದಿಸದೆ, ಕಾರ್ಪೋರೇಟ್ ಕಂಪನಿಗಳ ಆದಾಯ ಹೆಚ್ಚಿಸಲು ಕೇಂದ್ರ ಸರ್ಕಾರ ಹೊರಟಿದ್ದು, ಕೊರೋನಾ ಸಂದರ್ಭದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೃಷಿಗೆ ಸಂಬಂಧಿಸಿದ ಶಾಸನಗಳನ್ನು ತಮಗೆ ಅನುಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದು, ಸರ್ಕಾರವು ಯಾವುದೇ ರೈತ ಕೂಗಿಗೆ ಧ್ವನಿ ಕೊಡುತ್ತಿಲ್ಲ. ಇನ್ನು ಕಾರ್ಮಿಕರ ಗೋಳಾಗಲಿ, ಹೆಚ್ಚುತ್ತಿರುವ ಪೆಟ್ರೋಲ್, ಡಿಸೇಲ್ ವಿದ್ಯುತ್, ಜನ ಸಾಮಾನ್ಯರ ಅಗತ್ಯ ವಸ್ತುಗಳ ಬೆಲೆ ಏರಿಕೆಗಾಗಲಿ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಮಾನವ ಸರಪಳಿ ನಿರ್ಮಿಸಿ ಖಂಡನೆ :
ದುಡಿಯು ಕೈಗಳಿಗೆ ಉದ್ಯೋಗವಿಲ್ಲದೇ ಆರ್ಥಿಕತೆ ಕುಸಿದು ಹೋಗಿದೆ. ಕಾನೂನು ಗಾಳಿಗೆ ತೂರಿ, ನೂತನ ಶಿಕ್ಷಣ ನೀತಿಯ ಹೆಸರಿನಲ್ಲಿ ಅನ್ಯಾಯವೆಸಗುತ್ತಾ ಲೂಟಿ ಮಾಡುತ್ತಿರುವ ಸರ್ಕಾರದ ನೀತಿ ಖಂಡನೀಯ ರಾಷ್ಟ್ರಾದ್ಯಂತ ಬಂದ್ ನಡೆಸಿ ಆಳುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನೇಕ ಧೋರಣೆಯನ್ನು ಖಂಡಿಸಿ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಹುಚ್ಚ ಮಾಸ್ತಿಗೌಡ ವೃತ್ತದ ವರೆವಿಗೂ ಮೆರವಣಿಗೆ ನಡೆಸಿ ಮಾನವ ಸರಪಳಿ ಮಾಡಿ ರೈತರು ಸರ್ಕಾರದ ನಡೆಯನ್ನು ಖಂಡಿಸಿದರು.
ಮೋದಿ ಅಣುಕು ಶವಯಾತ್ರೆ :
ಹಲವು ಮುಖಂಡರು ಪ್ರತಿಭಟನೆ ಕುರಿತು ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‍ಶಾ ಅವರ ಅಣುಕು ಶವಯಾತ್ರೆ ಕೈಗೊಂಡು ದಹನ ಮಾಡಿದರು. ಭಾಗಶಃ ಅಂಗಡಿ ಹೋಟೆಲುಗಳು ಮುಚ್ಚಿದ್ದವು. ಬಂದ್‍ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಲಾ-ಕಾಲೇಜು, ಕೆಎಸ್‍ಆರ್ಟಿಸಿ, ವಾಹನ, ಬ್ಯಾಂಕುಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಜನಜೀವನ ಎಂದಿನಂತೆ ಇತ್ತು.
ಹಲವು ಸಂಘಟಕಾರರು ಭಾಗಿ :
ಈ ಪ್ರತಿಭಟನೆಯಲ್ಲಿ ಕರ್ನಾಟಕ ರೈತ ಸಂಘ, ಹಸಿರು ಸೇನೆಯ ತಾಲ್ಲೂಕು ಅಧ್ಯಕ್ಷ ಅನಿಲ್‍ಕುಮಾರ್, ಕಾರ್ಯದರ್ಶಿ ವೆಂಕಟೇಶ್, ಲಕ್ಷ್ಮಣಗೌಡ, ವಕೀಲರಾದ ವೆಂಕಟೇಶ್, ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಶಿವಣ್ಣ, ರಾಜ್ಯ ಮಾಹಿತಿ ಸಂಘದ ಅಧ್ಯಕ್ಷ ಹೆಜ್.ಜಿ.ರಮೇಶ್, ಶ್ರಮಜೀವಿ ಕಟ್ಟಡ ಸಂಘದ ಕೃಷ್ಣರಾಜು, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಮಿತಿ ಜಿಲ್ಲಾ ಅಧ್ಯಕ್ಷ ಕರಿಗೌಡ, ಕೆಆರ್‍ಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಜಾಣಗೆರೆ ರಘು, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಶಾಂತಕುಮಾರಿ, ಗೌರಮ್ಮ, ನಾಸಿರಾಭಾನು, ಗುಲ್ಜಾರ್, ದಲಿತ ಹಕ್ಕು ಹೋರಾಟ ಅಧ್ಯಕ್ಷ ರಾಜು, ವೆಂಕಟಪ್ಪ ಸೇರಿದಂತೆ ಅನೇಕ ಸಂಘಟನೆಯ ಮುಖಂಡರು ಮಾತನಾಡಿ ಆಳುವ ಬಿಜೆಪಿ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಖಂಡಿಸಿದರು.
ಪೊಲೀಸರಿಂದ ಬಿಗಿ ಬಂದೋಬಸ್ತ್ :
ಅಮೃತೂರು, ಯಡಿಯೂರು, ಹುಲಿಯೂರುದುರ್ಗ, ಕೊತ್ತಗೆರೆ, ಹುತ್ರಿದುರ್ಗ ಹೋಬಳಿ ಸೇರಿದಂತೆ ಎಲ್ಲಿಯೂ ಅಹಿತಕರ ಘಟನೆ ನಡೆಯದಂತೆ, ಪೊಲೀಸರು ಬೆಳಿಗ್ಗೆಯಿಂದಲೆ ಬಿಗಿಯಾದ ವ್ಯವಸ್ಥೆಯನ್ನು ಡಿವೈಎಸ್‍ಪಿ ರಮೇಶ್ ಅವರ ನೇತೃತ್ವದಲ್ಲಿ ಅಮೃತೂರು ಪೊಲೀಸ್ ವೃತ್ತ ನಿರೀಕ್ಷಕ ಗುರುಪ್ರಸಾದ್, ಕುಣಿಗಲ್ ಪೊಲೀಸ್ ಇನ್ಸ್‍ಪೆಕ್ಟರ್ ರಾಜು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ