ಕುಣಿಗಲ್ : ಹೇಮಾವತಿ ನೀರು ಹರಿದು ದೊಡ್ಡ ಮಧುರೆ ಕೆರೆ ಕೋಡಿ

ಕುಣಿಗಲ್ :  

      ಎರಡು ದಶಕದ ನಂತರ ದೊಡ್ಡ ಮಧುರೆ ಕೆರೆ ಹೇಮಾವತಿ ನೀರಿನಿಂದ ತುಂಬಿ ಕೋಡಿ ಸಂದರ್ಭದಲ್ಲಿ ಗ್ರಾಮಸ್ಥರು ಗ್ರಾಮದೇವತೆ ಹಬ್ಬದ ರೀತಿಯಲ್ಲಿ ಭಾನುವಾರ ಗಂಗಾ ಪೂಜೆ ನೇರವೇರಿಸಿ ಸಂಭ್ರಮಿಸಿದರು.

      ತಾಲ್ಲೂಕಿನ ದೊಡ್ಡ ಮಧುರೆ ಕೆರೆಗೆ ಹೇಮಾವತಿ ನಾಲೆ ನಿರ್ಮಾಣವಾಗಿ 20 ವರ್ಷ ಕಳೆದರೂ ಹೇಮಾವತಿ ನೀರು ಹರಿಯದೇ ಕೆರೆ ಬತ್ತಿಹೋಗಿತ್ತು. ಇದರಿಂದ ಕೃಷಿ ಹಾಗೂ ಜನ, ಜಾನವಾರುಗಳಿಗೂ ಕುಡಿಯುವ ನೀರಿಲ್ಲದೆ ಪರದಾಟವಾಗಿತ್ತು. ಕೆರೆಗ ನೀರು ಹರಿಸಲು ಗ್ರಾಮಸ್ಥರು ಹೋರಾಟ ನಡೆಸಿದ್ದರು. ನೀರು ಹರಿಸುವುದಾಗಿ ಶಾಸಕರು ಮಾತು ಕೊಟ್ಟಿದ್ದರು.

      ಶಾಸಕ ಡಾ.ರಂಗನಾಥ್ ಹೇಮಾವತಿ ನಾಲಾ ವಲಯದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತುರುವೇಕರೆ ಹಾಗೂ ಗುಬ್ಬಿ ತಾಲೂಕಿನ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಡಿ 26 ನಾಲೆಯ ಬಳಿ ದೊಡ್ಡ ಮಧುರೆ ಕೆರೆಗೆ ನೀರು ಹರಿಯುವ ಗೇಟ್‍ನ್ನು ತೆಗೆಸಿ ನೀರು ಹರಿಸಿದರು. ಇದರಿಂದ ಈಗ ದೊಡ್ಡ ಮಧುರೆ ಕೆರೆ ತುಂಬಿ ಕೋಡಿಯಾಗಿದೆ. ಇದರ ಜೊತೆಗೆ ಎಡೆಯೂರು ಹೋಬಳಿಯ 14 ಸಾಲು ಕೆರೆಗಳು ಕೂಡ ಹೇಮಾವತಿ ನೀರಿನಿಂದ ಭರ್ತಿಯಾಗಿವೆ.

     ದೊಡ್ಡ ಮಧುರೆ ಕೆರೆ ಕೋಡಿಯಾಗಿರುವುದು ಗ್ರಾಮಸ್ಥರ ಸಂಭ್ರಮಕ್ಕೆ ಪಾರವೆ ಇಲ್ಲದಂತಾಗಿದೆ. ಭಾನುವಾರ ದೊಡ್ಡ ಮಧುರೆ ಗ್ರಾಮವು ಗ್ರಾಮದೇವತೆ ಹಬ್ಬದಂತೆ ಸಿಂಗಾರಗೊಂಡಿತ್ತು. ಹೇಮಾವತಿ ನೀರು ಹರಿಸಿ ಕೆರೆ ತುಂಬಲು ಶ್ರಮಿಸಿದ ಶಾಸಕ ಡಾ.ರಂಗನಾಥ್ ಗಂಗಾಪೂಜೆಗೆ ಅಗಮಿಸುತ್ತಿದ್ದಂತೆ ಗ್ರಾಮದ ಹೊರ ಭಾಗದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಮೆರೆವಣಿಗೆ ಮೂಲಕ ಕೆರೆಯ ಏರಿಗೆ ಕರೆತರಲಾಯಿತು. ನಂತರ ಶಾಸಕರು ಗಂಗಾ ಪೂಜೆ ನೆರವೇರಿಸಿದರು.  

     ನಂತರ ಗ್ರಾಮದೇವತೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮಸ್ಥರೇ ಸ್ವತಃ ಖರ್ಚಿನಿಂದ ಅಕ್ಕಪಕ್ಕದ ಗ್ರಾಮದ ಜನತೆಗೂ 16 ಮರಿ ಕಡಿದು ಭರ್ಜರಿ ಬಾಡೂಟ ಹಾಕಿಸಿದರು. 

      ಗಂಗಾ ಪೂಜೆ ನೆರವೇರಿಸಿದ ನಂತರ ಶಾಸಕ ಡಾ.ರಂಗನಾಥ್ ಮಾತನಾಡಿ, 20 ವರ್ಷದಿಂದ ಕೆರೆಗೆ ಹೇಮಾವತಿ ನೀರು ಹರಿಯದಿರುವುದು ಗ್ರಾಮಸ್ಥರಿಂದ ವಿಷಯ ತಿಳಿಯಿತು. ಅಧಿಕಾರಿಗಳ ಮೇಲೆ ಒತ್ತಡ ತಂದು ಹೇಮಾವತಿ ನೀರು ಹರಿಸಲಾಗಿದೆ.

      ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ಸಹಕಾರದಿಂದ ಹೇಮಾವತಿ ನಾಲೆ ಹೂಳೆತ್ತುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಿಕೊಟ್ಟಿದ್ದರಿಂದ ಕುಣಿಗಲ್ ತಾಲ್ಲೂಕಿನ ಎಡೆಯೂರು ಹೋಬಳಿಯ 14 ಕೆರೆಗೆಳಿಗೆ ಇದೇ ಪ್ರಥಮ ಬಾರಿಗೆ ಹೇಮಾವತಿ ನೀರು ಹರಿಸಿ ಕೆರೆ ತುಂಬಿಸಲಾಗಿದೆ. ರೈತರಿಗೆ ನೀರು ಎಷ್ಟು ಮುಖ್ಯ ಅನ್ನುವುದು ಕೆರೆ ತುಂಬಿರುವ ಖುಷಿಯನ್ನು ಗ್ರಾಮಸ್ಥರು ಸಂಭ್ರಮಿಸಿರುವುದುನ್ನು ಕಂಡು ನನಗೆ ತಿಳಿಯುತ್ತಿದೆ ಎಂದರು.

      ಕುಣಿಗಲ್ ತಾಲ್ಲೂಕು ಪಾಲಿನ ನೀರು ಹರಿದರೆ ತಾಲ್ಲೂಕಿನ ಬಹುತೇಕ ಕೆರೆಗಳು ಭರ್ತಿಯಾಗಲಿವೆ. ಇದಕ್ಕೆ ಲಿಂಕ್ ಕೆನಾಲ್ ಯೋಜನೆ ಜಾರಿಯಾದರೆ ಮಾತ್ರ ಸಾಧ್ಯವಾಗಲಿದೆ ಎಂದು ತಿಳಿಸಿದ ಅವರು, ಇಚ್ಛಾಶಕ್ತಿ ಇದ್ದರೆ ಮಾತ್ರ ಕೆರೆಗಳಿಗೆ ನೀರು ಹರಿಸುವ ಕೆಲಸ ಮಾಡಲು ಸಾಧ್ಯವಾಗಲಿದೆ. ಹಿಂದಿನ ಶಾಸಕರು ಮತ್ತು ತಾಲ್ಲೂಕಿನ ರಾಜಕಾರಣಿಗಳು ಎಡೆಯೂರು ಹೋಬಳಿ ಕೆರೆಗಳಿಗೆ ಏಕೆ ನೀರು ಹರಿಸುವ ಪ್ರಯತ್ನ ಮಾಡಲಿಲ್ಲ ಎಂದು ವಿರೋಧಿಗಳಿಗೆ ಪ್ರಶ್ನಿಸಿದರು.

      ಇಂದಿನಿಂದ ತಾಲ್ಲೂಕಿನ ಬೇಗೂರು ಕೆರೆಗೂ ಹೇಮಾವತಿ ನೀರು ಹರಿಸಲಾಗುತ್ತದೆ. ನಾಲೆ ನಿರ್ಮಾಣವಾಗದಿದ್ದರೂ ಪೈಪ್‍ಗಳ ಮೂಲ ನೀರು ಹರಿಸಲಾಗುತ್ತಿದೆ ಎಂದು ತಿಳಿಸಿದರು.

      ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಲೋಹಿತ್‍ಗೌಡ, ಗ್ರಾ.ಪಂ ಚಂದ್ರ ಮಾಯಗೋನಹಳ್ಳಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap