ಕುಣಿಗಲ್ : 2 ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳ ಪತ್ತೆ!!

ಕುಣಿಗಲ್ : 

      ಕೊಲೆ ಹಾಗೂ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣಗಳಲ್ಲಿ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವಲ್ಲಿ ಕುಣಿಗಲ್ ಉಪ ವಿಭಾಗದ ಅಮೃತೂರು ವೃತ್ತ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‍ಕುಮಾರ್ ತಿಳಿಸಿದರು.

      ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಇಲಾಖೆಯ ಸಿಬ್ಬಂದಿಗಳಿಗೆ ಅಭಿನಂದಿಸಿದರು.

ತಾಲ್ಲೂಕಿನ ಹು.ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜೂ.14 ರಂದು ಬೆಳಿಗ್ಗೆ 11 ಗಂಟೆಗೆ ಚೇತನ್ ಎಂಬ ವ್ಯಕ್ತಿ ತನ್ನ ತಾಯಿ ವಸಂತ ಅವರೊಂದಿಗೆ ಹಂದಲಗೆರೆಯಿಂದ ನಾಗವಾರಕ್ಕೆ ಟಿವಿಎಸ್‍ನಲ್ಲಿ ತೆರಳುತ್ತಿದ್ದಾಗ ಮೇದರಹಳ್ಳಿ ವಿರೂಪಸಂದ್ರ ಮಾರ್ಗ ಮಧ್ಯೆ ಪಲ್ಸರ್ ಬೈಕ್‍ನಲ್ಲಿ ಬಂದ ಅಪರಿಚಿತರು ವಸಂತ ಅವರ ಕೊರಳಿನಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಅವರನ್ನು ತಳ್ಳಿದ ಪರಿಣಾಮ ಕೆಳಗೆ ಬಿದ್ದ ವಸಂತ ಅವರ ತಲೆಗೆ ಪೆಟ್ಟಾಗಿ ಮರಣ ಹೊಂದಿದ್ದರು. ಈ ಬಗ್ಗೆ ಹು.ದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಪತ್ತೆಗಾಗಿ ಪೊಲೀಸರ ವಿಶೇಷ ತಂಡವು ತಂತ್ರಜ್ಞಾನದ ನೆರವಿನೊಂದಿಗೆ ಚಾಲಾಕಿ ಆರೋಪಿಗಳ ಜಾಡು ಹಿಡಿದು ರಾಮನಗರ, ಮಂಡ್ಯ, ಮೈಸೂರು ಜಿಲ್ಲೆಯ ರಸ್ತೆಗಳಲ್ಲಿ, ಸ್ಥಳೀಯರ ಸಹಕಾರದಿಂದ ಹುಡುಕಿ ಅಂತಿಮವಾಗಿ ಮೈಸೂರು ನಗರದ ಸಿಸಿಬಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯೊಂದಿಗೆ ಎ1 ಆರೋಪಿಯಾದ ಮದ್ದೂರು ಟೌನ್‍ನ ಹೊಳೆಬೀದಿಯ ಜನರೇಟರ್ ಮೆಕಾನಿಕ್ ಇಮ್ರಾನ್‍ಖಾನ್ (24) ನನ್ನು ವಶಕ್ಕೆ ಪಡೆದಿದ್ದಾರೆ

      ಈತ ತನ್ನ ಇತರ ಸ್ನೇಹಿತರೊಂದಿಗೆ ಸೇರಿಕೊಂಡು ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯರ ಕೊರಳಿನಿಂದ ಚಿನ್ನದ ಸರ ಕಿತ್ತುಕೊಂಡು ಮಾರಾಟ ಮಾಡಲು ತಂಡವನ್ನು ರಚಿಸಿಕೊಂಡಿದ್ದಾಗಿ ತಿಳಿದು ಬಂದಿದ್ದು ಕೃತ್ಯಕ್ಕೆ ಬಳಸಿದ್ದ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆದಿದ್ದಾರೆ. ಈತನ ಅಕ್ರಮಗಳಲ್ಲಿ ಭಾಗಿಯಾಗಿದ್ದ 5 ಜನ ಸಹಚರರ ಪತ್ತೆಗಾಗಿ ಬಲೆ ಬೀಸಲಾಗಿದ್ದು, ಇವರೆಲ್ಲರೂ ಇನ್ನೂ 8 ಪ್ರತ್ಯೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

ಜೂ.16 ರಂದು ನಡೆದ ಮತ್ತೊಂದು ಪ್ರಕರಣದಲ್ಲಿ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಮೆಣಸಿನದೊಡ್ಡಿ ಗ್ರಾಮದ ಶಿವರಾಜು ಎಂಬುವವರ ಜಮೀನಿನ ಬಳಿ ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಬಿಸಾಡಿ ಹೋಗಿದ್ದ ಶವದ ತನಿಖೆಯಿಂದ ಮೃತ ವ್ಯಕ್ತಿ ಮಾಗಡಿ ತಾಲ್ಲೂಕು ಕೊಂಡಹಳ್ಳಿ ಗ್ರಾಮದ ಮರಿಜೊಗಯ್ಯನ ಮಗ ಸಿದ್ಧಲಿಂಗಯ್ಯ ಎಂದು ತಿಳಿದುಬಂದಿದ್ದು ಈ ಕೊಲೆಗೆ ವೈಯಕ್ತಿಕ ದ್ವೇಷವೇ ಕಾರಣ ಎಂದು ತಿಳಿದು ಬಂದಿದೆ.

      ಕೊಲೆ ಆರೋಪಿಗಳಾದ ಮಂಗಳಮ್ಮ ಮತ್ತು ಆಕೆಯ ಇಬ್ಬರು ಹೆಣ್ಣು ಮಕ್ಕಳು ಮತ್ತು ಮತ್ತೊಬ್ಬ ಆರೋಪಿ ನಟರಾಜ್ ಅಲಿಯಾಸ್ ಪ್ರವೀಣ್ ಎಂಬುವರೊಂದಿಗೆ ಸೇರಿಕೊಂಡು ಕೊಲೆ ಮಾಡಿ ಶವವನ್ನು ಇಲ್ಲಿ ತಂದು ಹಾಕಿದ್ದಾರೆ ಎಂದು ತಿಳಿಸಿದರು.

2 ಪ್ರಕರಣಗಳ ಆರೋಪಿಗಳ ಪತ್ತೆ ಕಾರ್ಯವನ್ನು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್ ಅವರ ಮಾರ್ಗದರ್ಶನದಲ್ಲಿ ಕುಣಿಗಲ್ ಉಪವಿಭಾಗದ ಅಧೀಕ್ಷಕ ಜಿ.ರಮೇಶ್ ಅವರ ನೇತತ್ವದಲ್ಲಿ ಅಮೃತೂರು ವೃತ್ತ ನಿರೀಕ್ಷಕ ಎಂ.ವಿ.ಗುರುಪ್ರಸಾದ್, ಕುಣಿಗಲ್ ಪೊಲೀಸ್ ಇನ್ಸ್‍ಪೆಕ್ಟರ್ ಡಿ.ಎಲ್ ರಾಜು, ಅಮೃತೂರು ಪಿಎಸ್‍ಐ ಮಂಜುನಾಥ್, ಸಿಬ್ಬಂದಿಗಳಾದ ಪುಟ್ಟರಾಜು, ರಂಗೇಗೌಡ, ಅಮೃತೂರು ನವೀನ್, ಗುರು, ನಟರಾಜ್, ಹು.ದುರ್ಗ ರಂಗಸ್ವಾಮಿ, ಚಾಲಕರಾದ ರಾಮಣ್ಣ, ನರಸಿಂಹಮೂರ್ತಿ, ಷಡಕ್ಷರಿ ಸೇರಿದಂತೆ ಆರೋಪಿಗಳ ಪತ್ತೆ ಕಾರ್ಯಕ್ಕೆ ಶ್ರಮಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಅಭಿನಂದಿಸಿ ಶ್ಲಾಘಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link