ಶಿರಸಿ :
ಶಿರಸಿ ತಾಲೂಕಿನ ಬನವಾಸಿ ಹೋಬಳಿ ವ್ಯಾಪ್ತಿಯ ಕುಪ್ಪಗಡ್ಡೆ ಮತ್ತು ವದ್ದಲ ಗ್ರಾಮಗಳನ್ನು ಸಂಪರ್ಕಿಸುವ ನಕಾಶೆ ಕಂಡ ಸಾರ್ವಜನಿಕ ರಸ್ತೆ ಮಾರ್ಗದ ಒತ್ತುವರಿಯಾಗಿದ್ದು ಮಾರ್ಗಕ್ಕೆ ಹೊಂದಿಕೊಂಡಿರುವ ಐದಾರು ಮನೆಗಳಿಗೆ ರಸ್ತೆ ಸಂಪರ್ಕವೇ ಇಲ್ಲದಂತಾಗಿದೆ.ಇದರಿಂದಾಗಿ ಇಲ್ಲಿನ ನಿವಾಸಿಗಳ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರುವಂತಾಗಿದೆ.
ಅಸಮಾನತೆ ತಲೆದೋರಿದ್ದು ಧಾರ್ಮಿಕ ಆಚರಣೆಗಳಿಗೂ ತೊಂದರೆಯಾಗುತ್ತಲಿದೆ.ಈಗಾಗಲೇ ನಕಾಶೆ ಕಂಡ ರಸ್ತೆ ಮಾರ್ಗದ ಒತ್ತುವರಿ ತೆರವುಗೊಳಿಸಿ ಸಂಪರ್ಕ ಕಲ್ಪಿಸಿ ಕೊಡುವಂತೆ ಬಹಳ ಕಾಲದಿಂದ ತಹಶೀಲ್ದಾರರಿಗೆ,ಶಾಸಕರಿಗೆ ಹಲವು ಬಾರಿ ಇಲ್ಲಿನ ನಿವಾಸಿಗಳು ಮನವಿ ಮಾಡಿದರೂ ಸಹ ನಮ್ಮ ಮನವಿಗೆ ಸರಿಯಾದ ಸ್ಪಂದನೆ ಇಲ್ಲದೇ ವಿನಾಕಾರಣ ವಿಳಂಬವಾಗುತ್ತಾ ಸಾಗಿದೆ ಎಂದು ನೋವಿನಿಂದ ಹೇಳುತ್ತಾರೆ.
ಇಲ್ಲಿ ಒತ್ತುವರಿ ತೆರವುಗೊಳಿಸಿ ಸಂಪರ್ಕ ಕಲ್ಪಿಸುವುದರಿಂದ ಕೇವಲ ಮಾರ್ಗಕ್ಕೆ ಹೊಂದಿಕೊಂಡಿರುವ ಐದಾರು ಮನೆಗಳಿಗೆ ಅಷ್ಟೇ ಅಲ್ಲದೆ ಅಕ್ಕಪಕ್ಕದ ಹತ್ತಾರು ಹಳ್ಳಿಗಳ ಸಂಪರ್ಕಕ್ಕೆ ಅನುಕೂಲ ಆಗಲಿದೆ.ಮತ್ತು ಮಾರ್ಗಕ್ಕೆ ಹೊಂದಿಕೊಂಡಿರುವ ಸುಮಾರು 50 -60 ಹೆಕ್ಟೇರ್ ಕೃಷಿ ಜಮೀನುಗಳಿಗೆ ಸಂಪರ್ಕ ಕಲ್ಪಿಸಿದಂತಾಗುತ್ತದೆ.ಆದ್ದರಿಂದ ಅಧಿಕಾರಿಗಳು ಈ ರಸ್ತೆ ಮಾರ್ಗದ ಒತ್ತುವರಿಯನ್ನು ಆದಷ್ಟು ಬೇಗ ತೆರವುಗೊಳಿಸಬೇಕೆಂಬುದು ಇಲ್ಲಿನವರ ಅಳಲಾಗಿದೆ.
