‘ಕುರುಬರನ್ನು ಎಸ್ಟಿಗೆ ಸೇರಿಸುವವರೆಗೂ ಹೋರಾಟ ನಿಲ್ಲದು’ – ಈಶ್ವರಾನಂದಪುರಿ ಶ್ರೀ

ತುಮಕೂರು : 

      ಕುರುಬ ಸಮುದಾಯವನ್ನು ಎಸ್ಟಿ ವರ್ಗಕ್ಕೆ ಸೇರಿಸಬೇಕು ಎಂದು ನಡೆದಿರುವ ಹೋರಾಟದ ಹಿಂದೆ ಯಾವುದೇ ವ್ಯಕ್ತಿ, ಪಕ್ಷ, ಸಂಘಟನೆ ಇಲ್ಲ, ಇಡೀ ಕುರುಬ ಸಮುದಾಯ ಇದರ ಹಿಂದೆ ಇದೆ. ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಎಂದು ಹೊಸದುರ್ಗ ಕನಕ ಗುರುಪೀಠ ಶಾಖಾಮಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಯವರು ಹೇಳಿದರು.

      ಕುರುಬರ ಎಸ್.ಟಿ. ಹೋರಾಟ ಸಮಿತಿ ಹಾಗೂ ಶ್ರೀ ಕ್ಷೇತ್ರಕಾಗಿನೆಲೆ ಕನಕಗುರುಪೀಠ ಮತ್ತು ಕುರುಬ ಸಮಾಜದ ಮಠಗಳ ಪೂಜ್ಯ ಗುರುಗಳ ಹಾಗೂ ಸಮುದಾಯದ ಸಂಘಟನೆಗಳ ಆಶ್ರಯದಲ್ಲಿ ನಡೆದಿರುವ ಹೋರಾಟದ ಅಂಗವಾಗಿ ಆಯೋಜನೆಯಾಗಿರುವ ಪಾದಯಾತ್ರೆಯ ಕುರಿತಂತೆ ಶುಕ್ರವಾರ ನಗರದ ಶ್ರೀ ಬೀರೇಶ್ವರ ಕಲ್ಯಾಣ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 

     ಕಾಗಿನೆಲೆಯಿಂದ ಹೊರಟ ಪಾದಯಾತ್ರೆ ತುಮಕೂರು ಜಿಲ್ಲೆಗೆ ಆಗಮಿಸುವ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಲು ಜಿಲ್ಲೆಯ ಕಾಳಿದಾಸ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು, ಸಮಾಜದ ಇತರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘಟಿತರಾಗಿ ಶ್ರಮಿಸಬೇಕು. ಕುರುಬ ಸಮುದಾಯದ ಪ್ರತಿಯೊಬ್ಬರೂ ಈ ಹೋರಾಟದಲ್ಲಿ ಭಾಗಿಯಾಗುವ ಮೂಲಕ ತಮ್ಮ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದು ಸ್ವಾಮೀಜಿ ಕರೆನೀಡಿದರು.

      ಕುರುಬರ ಎಸ್.ಟಿ ಹೋರಾಟ ಪಕ್ಷಾತೀತವಾದ ಹೋರಾಟ, ಹಕೊತ್ತಾಯದ ಹೋರಾಟ. ಕುರುಬರನ್ನು ಎಸ್ಟಿಗೆ ಸೇರಿಸುವವರೆಗೂ ಈ ಹೋರಾಟ ನಿಲ್ಲುವುದಿಲ್ಲ, ಅದೇ ಸಂಕಲ್ಪದಿಂದ ಎಲ್ಲರೂ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

      ನಗರದ ರೇವಣ್ಣಸಿದ್ದೇಶ್ವರ ಮಠದ ಶ್ರೀ ಬಿಂದುಶೇಖರ್ ಒಡೆಯರ್ ಸ್ವಾಮೀಜಿ, ಮಾಜಿ ಸಚಿವ ಎಚ್.ಎಂ. ರೇವಣ್ಣ, ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ, ರಾಜ್ಯ ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್, ಕುರುಬರ ಎಸ್ಟಿ ಹೋರಾಟ ಸಮಿತಿ ಪಾದಯಾತ್ರೆಯ ರಾಜ್ಯ ಸಂಚಾಲಕ ಸೋಮಶೇಖರ್, ಮಹಿಳಾ ಘಟಕದ ವಿಜಯೇಶ್ವರಿ, ಪ್ರದೇಶ ಕುರುಬರ ಸಂಘದ ನಿರ್ದೇಶಕರಾದ ಟಿ.ಇ.ರಘುರಾಮ್, ಶಂಕರ್, ಗುರುಪ್ರಸಾದ್, ನಗರಪಾಲಿಕೆ ಸದಸ್ಯರಾದ ಲಕ್ಷ್ಮೀನರಸಿಂಹರಾಜು, ಹೆಚ್.ಡಿ.ಕೆ.ಮಂಜುನಾಥ್, ಮಾಜಿ ಸದಸ್ಯ ಇಂದ್ರಕುಮಾರ್, ಮುಖಂಡರಾದ ಆರ್.ಎಂ.ಸಿ.ರಾಜು, ಮೈಲಾರಪ್ಪ ಮತ್ತಿತರರು ಭಾಗವಹಿಸಿದ್ದರು.

ಸರ್ಕಾರಕ್ಕೆ ಕುರುಬರ ಹಕ್ಕೊತ್ತಾಯ: ಹೆಚ್.ಎಂ.ರೇವಣ್ಣ 

      ಕುರುಬರನ್ನು ಎಸ್.ಟಿ ವರ್ಗಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ, ಸರ್ಕಾರದ ಗಮನ ಸೆಳೆಯಲು ಶ್ರೀಕ್ಷೇತ್ರ ಕಾಗಿನೆಲೆಯಿಂದ ರಾಜಧಾನಿ ಬೆಂಗಳೂರುವರೆಗೆ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಹಾಗೂ ಸಮುದಾಯದ ವಿವಿಧ ಮಠಾಧೀಶರುಗಳ ನೇತೃತ್ವದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬರುವ ಜನವರಿ 15ರಿಂದ ಆರಂಭಗೊಂಡು 340 ಕಿ.ಮೀ. ಸಾಗಿ ಫೆಬ್ರವರಿ 7ರಂದು ಬೆಂಗಳೂರು ತಲುಪಿ ಅಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಚ್‍ಎಂ ರೇವಣ್ಣ ಹೇಳಿದರು.

      ಹೋರಾಟದ ಪಾದಯಾತ್ರೆ ಕುರಿತು ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಯವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೋರಾಟದ ಯಶಸ್ವಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು.

      ಕಾಗಿನೆಲೆ ಕ್ಷೇತ್ರದಿಂದ ಹೊರಟ ಪಾದಯಾತ್ರೆ ಜನವರಿ 28ರಂದು ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿ ತಲುಪಿ ಅಲ್ಲಿಂದ ಹೊರಟು ತುಮಕೂರು ಜಿಲ್ಲೆ ತಲುಪಲಿದೆ. ಬೆಂಗಳೂರಿಗೆ ಹೋಗುವ ಮಾರ್ಗಮಧ್ಯೆ ಶಿರಾ, ಕಳ್ಳಂಬೆಳ್ಳ, ಸೀಬಿ, ತುಮಕೂರು ನಂತರ ದಾಬಸ್‍ಪೇಟೆಯಲ್ಲಿ ರಾತ್ರಿ ವೇಳೆ ತಂಗಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತದೆ. ಪಾದಯಾತ್ರಿಗಳಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲು ತುಮಕೂರು ಜಿಲ್ಲಾ ಮಟ್ಟದಲ್ಲಿ ವಿವಿಧ ಸಮಿತಿಗಳನ್ನು ರಚಿಸುವ ಸಂಬಂಧ ಚರ್ಚಿಸಲು ಈ ಪೂರ್ವಭಾವಿ ಸಭೆ ನಡೆಸಲಾಯಿತು ಎಂದು ಹೇಳಿದರು.

      ಕುರುಬರ ಎಸ್ಟಿ ಹೋರಾಟ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಪಕ್ಷಾತೀತವಾದ ಸಮಾಜದ ಎಲ್ಲರೂ ಒಳಗೊಂಡಂತೆ ಜನಪ್ರತಿನಿಧಿಗಳ ಸಹಯೋಗದಲ್ಲಿ ಸರ್ಕಾರದ ಗಮನ ಸೆಳೆಯಲು ನಡೆದಿದೆ. ಬ್ರಿಟೀಷ್ ಆಡಳಿತದಲ್ಲಿ 1868ರಲ್ಲಿ ಆಗಿನ ಸರ್ಕಾರದ ಗೆಜೆಟೇರಿಯರ್‍ನಲ್ಲಿ ಕುರುಬರನ್ನು ಎಸ್ಟಿಗೆ ಸೇರಿಸಲಾಗಿದೆ. ಅದನ್ನು ಆಧರಿಸಿ, ಕುರುಬ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ಆಧಾರದ ಮೇಲೆ ಎಸ್ಟಿಗೆ ಸೇರಿಸಿ ನ್ಯಾಯಯುತ ಸೌಲಭ್ಯಗಳನ್ನು ದೊರಕಿಸಿಕೊಡಬೇಕೆಂದು ಸರ್ಕಾರವನ್ನು ಒತ್ತಾಯಿಸುವ ಹೋರಾಟ ಇದಾಗಿದೆ ಎಂದು ಹೆಚ್.ಎಂ.ರೇವಣ್ಣ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap