ಶಿರಾ :
ಕಾಗಿನೆಲೆಯಿಂದ ಕೈಗೊಂಡಿರುವ ಕುರುಬ ಸಮುದಾಯವನ್ನು ಎಸ್.ಟಿ. ಮೀಸಲಾತಿಗೆ ಸೇರಿಸುವಂತಹ ಬೃಹತ್ ಪಾದಯಾತ್ರೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಲಘುವಾಗಿ ತೆಗೆದುಕೊಳ್ಳಬಾರದು. ಫೆ.7 ರಂದು ಬೆಂಗಳೂರಲ್ಲಿ ಹೊಡೆಯುವ ಡೊಳ್ಳಿನ ಶಬ್ದ ದೆಹಲಿಯ ಕೆಂಪುಕೋಟೆಯನ್ನು ಮುಟ್ಟುವಂತಿರಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.
ಹಿರಿಯೂರು ಮಾರ್ಗವಾಗಿ ಶಿರಾ ನಗರಕ್ಕೆ ಗುರುವಾರ ಆಗಮಿಸಿದ ಕುರುಬ ಸಮುದಾಯದ ಎಸ್.ಟಿ. ಮೀಸಲಾತಿ ಹೋರಾಟದ ಪಾದಯಾತ್ರೆಯ ನೇತೃತ್ವ ವಹಿಸಿದ್ದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಹಕ್ಕನ್ನು ಪಡೆಯುವ ಸಲುವಾಗಿ ಕಾಗಿನೆಲೆಯಿಂದ ಪಾದಯಾತ್ರೆಯನ್ನು ಆರಂಭಿಸಿದಾಗ ಸದರಿ ಯಾತ್ರೆಯಲ್ಲಿ ಕೇವಲ 1,500 ಮಂದಿ ಯಾತ್ರಾರ್ಥಿಗಳಿದ್ದರು. ದಿನದಿಂದ ದಿನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಯಾತ್ರಾರ್ಥಿಗಳ ಪ್ರಮಾಣ ಹೆಚ್ಚುತ್ತಿದ್ದು, ಅದರಲ್ಲೂ ಶಿರಾ ಗಡಿಗೆ ತಲುಪಿದಾಗ ಅದ್ದೂರಿಯ ಸ್ವಾಗತದೊಂದಿಗೆ ಸಹಸ್ರಾರು ಸಂಖ್ಯೆಯ ಜನಸ್ತೋಮ ನಮ್ಮ ಪಾದಯಾತ್ರೆಗೆ ಶಕ್ತಿ ತುಂಬಿದೆ ಎಂದರು.
ಕುರುಬ ಸಮುದಾಯವು ತಲೆ ತಲಾಂತರದಿಂದಲೂ ಎಸ್.ಟಿ. ಸೌಲಭ್ಯ ಪಡೆಯಲಾಗದೆ ವಂಚಿತಗೊಂಡಿದೆ. ಮೂಲ ಬುಡಕಟ್ಟಿನಿಂದ ಬಂದ ಈ ಸಮುದಾಯವನ್ನು ಆಳುವ ಸರ್ಕಾರಗಳು ಕಡೆಗಣಿಸಿವೆ. ನಮ್ಮ ಸಮುದಾಯಕ್ಕೆ ಸಾಮಾಜಿಕ ಹಾಗೂ ಶೈಕ್ಷಣಿಕ ನ್ಯಾಯ ಕೊಡಿಸಲು ನಾವು ಮುಂದಾಗಿದ್ದೇವೆ. 60 ಲಕ್ಷ ಕುರುಬರ ಏಳ್ಗೆಗಾಗಿ ಈ ಹೋರಾಟ ಅನಿವಾರ್ಯವಾಗಿದೆ ಎಂದು ಶ್ರೀಗಳು ನುಡಿದರು.
ಟಗರು ಗುದ್ದುವ ಮುನ್ನ ಎರಡು ಹೆಜ್ಜೆ ಹಿಂದೆ ಹೋಗುತ್ತದೆ. ಹಾಗಂತ ಆ ಟಗರು ಯುದ್ಧಕ್ಕೆ ಹೆದರಿದೆ ಎಂದು ಭಾವಿಸಿದರೆ ತಪ್ಪಾಗುತ್ತದೆ. ಟಗರು ಎರಡು ಹೆಜ್ಜೆ ಹಿಂದೆ ಹೋದರೆ ಅದು ಯುದ್ಧಕ್ಕೆ ಸನ್ನದ್ಧವಾಗಿದೆ ಎಂಬುದರ ಸಂದೇಶವೆಂಬುದನ್ನು ಸರ್ಕಾರಗಳು ಅರಿಯಬೇಕಿದೆ. ಫೆ.7 ರಂದು ಸರ್ಕಾರವನ್ನು ಗುದ್ದಲು ಟಗರುಗಳು ತಯಾರಾಗಿದ್ದು, ಅದಕ್ಕೂ ಮುನ್ನವೆ ಕುರುಬ ಸಮುದಾಯವನ್ನು ಎಸ್.ಟಿ. ಮೀಸಲಾತಿಗೆ ಸೇರಿಸಿದರೆ ಒಳಿತು ಎಂದು ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ಎಚ್ಚರಿಸಿದರು.
ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳು ಪಾದಯಾತ್ರೆಯನ್ನುದ್ದೇಶಿಸಿ ಮಾತನಾಡಿ, ಪಾದಯಾತ್ರೆಯು ಶಿರಾ ನಗರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಇಡೀ ನಗರದಲ್ಲಿ ರಾರಾಜಿಸುತ್ತಿದ್ದ ಭಂಡಾರದ ಧ್ವ್ವಜಗಳು ನಮಗೆ ಶಕ್ತಿ ತುಂಬಿವೆ. ಕುರುಬರ ಕೂಗು ಕೈಲಾಸವನ್ನು ಮುಟ್ಟಬೇಕಿದೆ. ನಮ್ಮ ಸಮಾಜವು ಎಸ್.ಟಿ. ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರಗಳಿಗೆ ಒಗ್ಗಟ್ಟಿನ ಮಂತ್ರದ ಸ್ಪಷ್ಟ ಸಂದೇಶವನ್ನು ನೀಡಲಿದೆ ಎಂದರು.
ಶ್ರೀಗಳ ನೇತೃತ್ವದಲ್ಲಿ ಸಮುದಾಯದ ಪಾದಯಾತ್ರೆಯು ಆರಂಭಗೊಂಡಾಗಿನಿಂದಲೂ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ಭಾಗದಿಂದ ಕ್ವಿಂಟಾಲ್‍ಗಟ್ಟಲೆ ಊಟಕ್ಕಾಗಿ ರೊಟ್ಟಿ, ಆಹಾರ ಧಾನ್ಯಗಳು ಬರುತ್ತಿದ್ದು, ಧಾನ್ಯಗಳನ್ನು ಇಟ್ಟುಕೊಂಡು ಮುಂದೆ ಸಾಗುವುದು ಕಷ್ಟವಾಗಿದೆ. ಇಡೀ ರಾಜ್ಯದಲ್ಲಿನ ಕುರುಬ ಸಮುದಾಯ ಸಾಂಘಿಕ ಶಕ್ತಿಯನ್ನು ಕಂಡುಕೊಂಡು ಎಚ್ಚೆತ್ತಿದೆ ಎಂದರು.
ಕಳೆದ 73 ವರ್ಷಗಳಿಂದ ನಮಗಾಗಿರುವ ಅನ್ಯಾಯವನ್ನು ಯಾರೂ ಕೂಡ ಸರಿ ಮಾಡಲು ಆಗುತ್ತಿಲ್ಲ. ಅಲೆಮಾರಿ ಕುರುಬರು, ಕಾಡುಮೇಡುಗಳಲ್ಲಿ ವಾಸಿಸುವ ಕುರುಬರು ಇಂದಿಗೂ ಈ ಸೌಲಭ್ಯಕ್ಕಾಗಿ ಹಪಹಪಿಸುತ್ತಿದ್ದಾರೆ. 73 ವರ್ಷಗಳಿಂದ ಎಸ್.ಟಿ. ಸೌಲಭ್ಯವಿದ್ದರೂ ಅದನ್ನು ನಾವು ಪಡೆಯಲಾಗುತ್ತಿಲ್ಲ. ಕುರುಬರಿಗೆ ನಾಲ್ಕು ಜಿಲ್ಲೆಗಳಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ಕೊಡಗಿನ ಕುರುಬರನ್ನು ಎಸ್.ಟಿ.ಗೆ ಸೇರ್ಪಡೆ ಮಾಡಿದಂತೆ ರಾಜ್ಯದ ಎಲ್ಲಾ ಕುರುಬ ಸಮುದಾಯವನ್ನು ಈ ಮೀಸಲಾತಿಗೆ ಒಳಪಡಿಸಲೇಬೇಕೆಂಬುದು ನಮ್ಮ ಒತ್ತಾಯವಾಗಿದೆ ಎಂದರು.
1976ರಲ್ಲಿ ದೇವರಾಜ ಅರಸು ಅವರು ಮೊದಲ ಬಾರಿಗೆ ಕುರುಬ ಸಮುದಾಯವನ್ನು ಎಸ್.ಟಿ. ಮೀಸಲಾತಿಗೆ ಸೇರಿಸಲು ಸರ್ಕಾರಕ್ಕೆ ಒತ್ತಡ ತಂದಾಗ ನಾವು ಕೈಕಟ್ಟಿ ಕುಳಿತಿದ್ದೆವು. 1986ರಲ್ಲಿ ರಾಮಕೃಷ್ಣ ಹೆಗಡೆಯವರು ಕುರುಬರಿಗಾಗಿ ಈ ಸೌಲಭ್ಯ ನೀಡಲು ಸರ್ಕಾರವನ್ನು ಒತ್ತಾಯಿಸಿದಾಗಲು ನಾವು ಅರಿವಾಗದೆ ಸುಮ್ಮನಿದ್ದೆವು. ಇನ್ನೂ ಕೂಡ ಸುಮ್ಮನಿದ್ದರೆ ನಮ್ಮ ಹಕ್ಕನ್ನೇ ನಾವು ಕಳೆದುಕೊಳ್ಳುತ್ತೇವೆ ಎಂದು ಶ್ರೀ ಈಶ್ವರಾನಂದಪುರಿಸ್ವಾಮೀಜಿ ಎಚ್ಚರಿಸಿದರು.
ಫೆ.7 ರಂದು ರಾಜಧಾನಿಯಲ್ಲಿ ನಡೆಯುವ ಬೃಹತ್ ಸಭೆಗೆ ರಾಜ್ಯದ ಇಡೀ ಕುರುಬ ಸಮುದಾಯವೇ ಆಗಮಿಸಿ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಬಾರಿಸಬೇಕು. ಎಸ್.ಟಿ. ಮೀಸಲಾತಿ ನಮ್ಮ ಹಕ್ಕು ಎಂಬುದನ್ನು ಸಾಬೀತುಪಡಿಸಬೇಕು ಎಂದು ಶ್ರೀಗಳು ಮನವಿ ಮಾಡಿದರು.
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಮಾತನಾಡಿ, ಒಗ್ಗಟ್ಟಿಗೆ ಮತ್ತೊಂದು ಹೆಸರು ಕುರುಬ ಸಮುದಾಯವೆಂಬುದು ಈ ಪಾದಯಾತ್ರೆಯಿಂದ ಸಾಬೀತಾಗಿದೆ. ನಮ್ಮ ಹಕ್ಕು ಪ್ರತಿಪಾದನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ತಲುಪಬೇಕಿದೆ. ಫೆ.7 ರಂದು ಬೆಂಗಳೂರಿನಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಸಮಾವೇಶಗೊಳ್ಳುವ ಸಾಧ್ಯತೆ ಇದ್ದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ ಎಂದರು.
ತೆಂಗು ಮತ್ತು ನಾರು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಬಿ.ಕೆ.ಮಂಜುನಾಥ್ ಮಾತನಾಡಿ, ಕಾಗಿನೆಲೆಯಿಂದ ಆರಂಭಗೊಂಡ ಈ ಪಾದಯಾತ್ರೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಎಸ್.ಟಿ. ಹೋರಾಟದ ಕಿಚ್ಚಿಗೆ ಸರ್ಕಾರ ಸ್ಪಂದಿಸಬೇಕಿದೆ. ಈ ಬೃಹತ್ ಹೋರಾಟ ಮುಂದಿನ ಪೀಳಿಗೆಗೆ ಕೊಡುಗೆಯಾಗಲಿದೆ ಎಂದರು.
ಕನಕ ಗುರು ಪೀಠದ ವಿವಿಧ ಸ್ವಾಮೀಜಿಗಳು, ಕುರುಬ ಸಮುದಾಯದ ಹಿರಿಯ ಮುಖಂಡರಾದ ಬಿ.ಜೆ.ಕರಿಯಪ್ಪ ಸೇರಿದಂತೆ ತಾಲ್ಲೂಕಿನ ಕುರುಬ ಸಂಘಟನೆಗಳ ಮುಖಂಡರು, ಕನಕ ಸಂಘ, ಕನಕ ಮಹಿಳಾ ಸಂಘ, ತಾ,ಕುರುಬರ ಸಂಘದ ಪದಾಧಿಕಾರಿಗಳು, ಕನಕ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪಾದಯಾತ್ರೆಯಲ್ಲಿ ಆಗಮಿಸಿದ್ದ ವಿವಿಧ ಜಿಲ್ಲೆ ಹಾಗೂ ತಾಲ್ಲೂಕುಗಳಿಂದ ಆಗಮಿಸಿದ್ದ ಯಾತ್ರಾರ್ಥಿಗಳು ನಗರದಲ್ಲಿ ತಂಗಲು ಸ್ಥಳೀಯ ಕುರುಬ ಸಂಘಟನೆಗಳ ಯುವಕರು ಹಾಗೂ ಹಿರಿಯ ಮುಖಂಡರು ಕೈಗೊಂಡ ಊಟೋಪಚಾರದ ವ್ಯವಸ್ಥೆ ಎಲ್ಲರ ಗಮನ ಸೆಳೆದಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ