ಜಿಲ್ಲೆಗೆ ಕುರುಬರ ಎಸ್.ಟಿ. ಮೀಸಲಾತಿ ಹೋರಾಟದ ಪಾದಯಾತ್ರೆ

  ಶಿರಾ : 

      ಕುರುಬ ಸಮುದಾಯವನ್ನು ಪ.ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಕಾಗಿನೆಲೆ ಮಹಾ ಸಂಸ್ಥಾನ ಮಠದಿಂದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳ ನೇತೃತ್ವದ ಬೆಂಗಳೂರಿಗೆ ಹೊರಟಿರುವ ಬೃಹತ್ ಪಾದಯಾತ್ರೆಯು ಗುರುವಾರ ಸಂಜೆ ಶಿರಾ ನಗರವನ್ನು ಪ್ರವೇಶಿಸಿತು.

      ತಾವರೆಕೆರೆ ಮಾರ್ಗವಾಗಿ ಆಗಮಿಸಿದ ಸಹಸ್ರಾರು ಮಂದಿ ಜನಸ್ತೋಮದ ಈ ಪಾದಯಾತ್ರೆಯು ಸಂಜೆ 6 ಗಂಟೆಗೆ ಶಿರಾ ನಗರಕ್ಕೆ ಆಗಮಿಸಿತು.

ಪಾದಯಾತ್ರೆಯು ಶಿರಾ ತಾಲ್ಲೂಕಿನ ತಾವರೆಕೆರೆಗೆ ಪ್ರವೇಶ ಮಾಡಿದ ಕೂಡಲೆ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀ ನಿರಂಜನಾನಂದಪುರಿ ಶ್ರೀಗಳು, ರಾಜ್ಯದ ಕುರುಬರಿಗೆ ಎಸ್.ಟಿ. ಮೀಸಲಾತಿಗಾಗಿ ಹಮ್ಮಿಕೊಂಡಿರುವ ಪಾದಯಾತ್ರೆಗೆ ನಿರೀಕ್ಷೆಗಿಂತ ಹೆಚ್ಚಾಗಿ ಬೆಂಬಲ ಸಿಕ್ಕಿರುವುದು ಅತ್ಯಂತ ಸಂತೋಷವಾಗಿದೆ. ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶದ ನಂತರ ಕುರುಬರ ಶಕ್ತಿ ಏನೆಂಬುದು ಕೇಂದ್ರ ಸರ್ಕಾರಕ್ಕೆ ತಿಳಿಯಲಿದೆ ಎಂದರು.

      ಕುರುಬರ ಎಸ್.ಟಿ. ಮೀಸಲಾತಿಗಾಗಿ ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯು 14ನೆ ದಿನವಾದ ಗುರುವಾರ ಸಿರಾ ತಾಲ್ಲೂಕಿಗೆ ಪ್ರವೇಶ ಮಾಡಿದ ನಂತರ ಮಧ್ಯಾಹ್ನ ತಾವಕೆರೆಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ನಿರಂಜನಾನಂದಪುರಿ ಶ್ರೀಗಳು ಭಾಗವಹಿಸಿ ಮಾತನಾಡಿದರು.

      ರಾಜ್ಯದ ಕುರುಬರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಈ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದು, ದಿನೆದಿನೆ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾತ್ರಿಗಳೆಲ್ಲರೂ ದೂರದ ಊರುಗಳಿಂದ ತಮ್ಮ ಸ್ವಂತ ಖರ್ಚಿನಲ್ಲೇ ಬಂದು ಸೇರುತ್ತಿರುವುದು ನಮ್ಮ ಹೋರಾಟಕ್ಕೆ ಸಿಕ್ಕಿರುವ ಬೆಂಬಲ ಎಂದರು.

      ಬೆಂಗಳೂರು ವಿಭಾಗದ ಕನಕ ಗುರುಪೀಠ ಹೊಸದುರ್ಗ ಶಾಖಾಮಠದ ಪೀಠಾಧ್ಯಕ್ಷ ಈಶ್ವರಾನಂದಪುರಿ ಮಹಾಸ್ವಾಮಿಗಳು ಮಾತನಾಡಿ, ಕುರುಬ ಜನಾಂಗವನ್ನು ಈ ಹಿಂದೆ ಎಸ್.ಟಿ. ಪಟ್ಟಿಗೆ ಸೇರಿಸಲಾಗಿತ್ತು. ನಂತರ ನಡೆದ ಬೆಳವಣಿಗೆಗಳಿಂದ ಎಸ್.ಟಿ. ಪಟ್ಟಿಯಿಂದ ಹೊರಗೆ ಇಡಲಾಗಿದೆ. ಇತ್ತೀಚೆಗೆ ಕುರುಬ ಜನಾಂಗದ ಮೇಲೆ ದಬ್ಬಾಳಿಕೆ ನಡೆಯುತ್ತಿರುವುದನ್ನು ಕಂಡು ನಮಗೆ ಸಾಕಷ್ಟು ನೋವಾಗಿದೆ. ಈ ನೋವನ್ನು ಸಹಿಸಲಾಗದೆ ಸಮುದಾಯ ಹೋರಾಟಕ್ಕಿಳಿಯಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಎಸ್.ಟಿ. ಮೀಸಲಾತಿಗಾಗಿ ಹಿಂದಿನಿಂದಲೂ ಹಕ್ಕೊತ್ತಾಯ ಮಾಡುತ್ತಾ ಬರಲಾಗಿದೆ. ಆದಾಗ್ಯೂ ಸರ್ಕಾರಗಳಿಂದ ಸ್ಪಂದನೆ ಸಿಕ್ಕಿಲ್ಲವಾದ್ದರಿಂದ ಇಂದು ಪಾದಯಾತ್ರೆ ಮೂಲಕ ರಾಜ್ಯ ಮತ್ತು ಕೇಂದ್ರದ ಗಮನ ಸೆಳೆಯಲಾಗುತ್ತಿದೆ ಎಂದರು.

      ಸಮಾರಂಭದಲ್ಲಿ ಸರೂರು ಅಗಸ್ಥ್ಯ ತೀರ್ಥ ರೇವಣಸಿದ್ದೇಶ್ವರ ಮಹಾಮಠದ ಶಾಂತಮಯ ಮಹಾಸ್ವಾಮಿ, ಮುತ್ತೇಶ್ವರ ಮಹಾಸ್ವಾಮಿ, ತುರುವಿನಾಳ ಮಾದಯ್ಯ ಮಹಾಸ್ವಾಮಿ, ಮನಗುಳಿ ಶರಭಯ್ಯಸ್ವಾಮಿ, ತೆಂಗಿನ ನಾರಿನ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮಾಜಿ ಶಾಸಕ ಸಿ.ಬಿ.ಸುರೇಶಬಾಬು, ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಸಮಾಜ ಸೇವಕ ಕಲ್ಕೆರೆ ರವಿಕುಮಾರ್, ಪ್ರಜಾಪ್ರಗತಿಯ ಸಂಪಾದಕ ಎಸ್.ನಾಗಣ್ಣ, ಉಪ ಸಂಪಾದಕ ಮಧುಕರ್, ರಂಗನಾಥ್ ಎಸ್.ಕೆ.ದಾಸಪ್ಪ, ಮಂಜುನಾಥ್ ಆರ್.ಡಿ, ಎಸ್.ಎಲ್.ರಂಗನಾಥ್, ಡಾ.ಮಂಜುನಾಥ್, ಬಿ.ಜೆ.ಕರಿಯಪ್ಪ, ಶಿವಶಂಕರ್, ಭಾನುಪ್ರಕಾಶ್, ಸುರೇಶ್ ನಿಸರ್ಗ, ನಟರಾಜ್ ಬರಗೂರು ಸೇರಿದಂತೆ ಕುರುಬ ಸಮಾಜದ ಅನೇಕ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪ್ರಮುಖರು ಹಾಜರಿದ್ದರು.

      ರಾಜ್ಯದ ವಿವಿಧೆಡೆಗಳಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಸುಮಾರು 150 ಕ್ಕೂ ಹೆಚ್ಚು ಬಸ್‍ಗಳಲ್ಲಿ ಆಗಮಿಸಿದ್ದ ಜನ ಪಾದಯಾತ್ರೆ ಸೇರಿ ಸಿರಾವರೆಗೂ ಕಾಲ್ನಡಿಗೆಯಲ್ಲಿ ಬಂದಿದ್ದು ಆಕರ್ಷಕವಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap