ಬೆಂಗಳೂರು :
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಕಾಗಿನೆಲೆಯ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಲಕ್ಷಾಂತರ ಮಂದಿ ಕುರುಬ ಸಮುದಾಯದ ಜನ ರಾಜಧಾನಿಯಲ್ಲಿ ರಣಕಹಳೆ ಮೊಳಗಿಸಿದರು. ಈ ಮೂಲಕ ಕುರುಬ ಸಮುದಾಯ ಬೃಹತ್ ಬಲಪ್ರದರ್ಶನ ನಡೆಸಿದರು.
ಜನವರಿ 15 ರಂದು ಆರಂಭವಾದ ಪಾದಯಾತ್ರೆ ಬೆಂಗಳೂರಿನಲ್ಲಿ ಸಂಪನ್ನಗೊಂಡಿದೆ. ಬಿಐಇಸಿ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಸ್ವಾಮೀಜಿಗಳು, ರಾಜಕೀಯ ನಾಯಕರು ಕುರುಬ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಿದ್ದಾರೆ.
ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಜನಜಾಗೃತಿ ಮೂಡಿಸಿದ್ದ ಸ್ವಾಮೀಜಿಗಳು ಮತ್ತು ರಾಜಕೀಯ ನಾಯಕರು, ಬೃಹತ್ ಸಮಾರೋಪ ಸಮಾವೇಶದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪ್ರಬಲ ಹಕ್ಕೊತ್ತಾಯ ಮಂಡಿಸಿದರು.
ಬೃಹತ್ ಸಮಾವೇಶದಲ್ಲಿ ಸಚಿವರಾದ ಕೆಎಸ್ ಈಶ್ವರಪ್ಪ, ಬೈರತಿ ಬಸವರಾಜ, ಎಂಟಿಬಿ ನಾಗರಾಜ್, ಆರ್ ಶಂಕರ್, ಜೆ.ಡಿ.ಎಸ್, ಶಾಸಕ ಬಂಡೆಪ್ಪ ಕಾಶೆಂಪೂರ ಸೇರಿದಂತೆ ಕಾಂಗ್ರೆಸ್ ಬಿಜೆಪಿ ಮತ್ತು ಜೆಡಿಎಸ್ ಜನಪ್ರತಿನಿಧಿಗಳು ಸ್ವಾಮೀಜಿಗಳು ಸೇರಿದಂತೆ ಹಲವು ನಾಯಕರು ಪಾಲ್ಗೊಂಡು ಶೀಘ್ರವೇ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒಕ್ಕೊರಲಿನಿಂದ ಒತ್ತಾಯಿಸಿದರು.
ರಾಜ್ಯ ಸರ್ಕಾರದ ಪ್ರತಿನಿಧಿಯಾಗಿ ಕಂದಾಯ ಸಚಿವ ಆರ್.ಅಶೋಕ್ ಆಗಮಿಸಿ, ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕೆನ್ನುವ ಮನವಿ ಪತ್ರವನ್ನು ಸ್ವೀಕರಿಸಿದರು.
ಕಾಗಿನೆಲೆಯ ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಮಾವೇಶದಲ್ಲಿ ಮಾತನಾಡಿ, ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ನಾವು ಬೇಡುವ ಸ್ಥಾನದಲ್ಲಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪ ವರ ಕೊಡುವ ಸ್ಥಾನದಲ್ಲಿದ್ದಾರೆ. ನಮ್ಮ ಬೇಡಿಕೆಗಳನ್ನು ರಾಜ್ಯ ಸರ್ಕಾರ ಪರಿಗಣಿಸಿ ಕೂಡಲೇ ಕೇಂದ್ರ ಸರ್ಕಾರಕ್ಕೆ ನಮ್ಮ ಮನವಿ ಬಗ್ಗೆ ಶಿಫಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
ಕುರುಬ ಸಮುದಾಯದ ಜನಸಂಖ್ಯೆ 60 ಲಕ್ಷದಷ್ಟಿದ್ದು, ಶೀಘ್ರ ಸಚಿವ ಸಂಪುಟ ಸಭೆ ಕರೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ನಮ್ಮ ಸಮುದಾಯಕ್ಕೆ ಮೀಸಲಾತಿ ಎಂಬ ಊಟ ನೀಡಬೇಕು. ಉಪ್ಪಿನ ಕಾಯಿಯಲ್ಲ. ನಮ್ಮ ಸಮಾವೇಶ ಯಾವುದೇ ರಾಜಕೀಯ ಉದ್ದೇಶ ಹೊಂದಿಲ್ಲ. ಪಕ್ಷಾತೀತ ಹೋರಾಟ ಇದಾಗಿದ್ದು, ನಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ನಮ್ಮ ಸಮುದಾಯಕ್ಕೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಮೀಸಲಾತಿ ದೊರೆಯಬೇಕು. ಇದಕ್ಕಾಗಿ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿ ಜನ ಪಾಲ್ಗೊಂಡಿದ್ದಾರೆ ಈ ಮೂಲಕ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಂಡಿಸುವ ಹೋರಾಟಕ್ಕೆ ಶಕ್ತಿ ಬಂದಿದೆ. ನಮ್ಮ ಹೋರಾಟಕ್ಕೆ ಸಮುದಾಯದಿಂದ ಉತ್ತಮ ಸ್ಪಂದನೆ ದೊರಕಿದೆ ಎಂದರು.
ಮುಖ್ಯಮಂತ್ರಿಗಳೆ ನಾವು ಬೇರೆ ಸ್ವಾಮಿಗಳಂತೆ ಕೆಟ್ಟದಾಗಿ ಮಾತನಾಡುವವರು, ಬ್ಲಾಕ್ ಮೇಲ್ ಮಾಡುವವರು ಅಲ್ಲ, ನಾವು ಪ್ರೀತಿಯಿಂದ ಬೇಡುತ್ತಿದ್ದೇವೆ, ನಾಡ ದೊರೆಯಾಗಿ ಅದೇ ಪ್ರೀತಿಯಿಂದ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿ. ನಾವು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಎಸ್‍ಟಿ ಹಕ್ಕು ಪಡೆಯುತ್ತೇವೆ ಎಂದರು.
ಮನೆಗೊಬ್ಬ ಕುರುಬಣ್ಣ ಸಮಾವೇಶಕ್ಕೆ ಬಾರಣ್ಣ ಘೋಷವಾಕ್ಯದಡಿ ನಡೆದ ಬೃಹತ್ ಪಾದಯಾತ್ರೆ ಮತ್ತು ಸಮಾವೇಶ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವುದು ಕುರುಬ ಸಮುದಾಯದ ನಾಯಕರಲ್ಲಿ ಆತ್ಮ ವಿಶ್ವಾಸ ಮೂಡುವಂತೆ ಮಾಡಿದೆ ಎಂದರು.
ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಕುರುಬ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಲು ಅಗತ್ಯ ವಾದ ಎಲ್ಲಾ ಪೂರಕ ಅಂಶಗಳನ್ನು ಹೊಂದಿರುವುದರಿಂದ ಯಾವ ಕುಲಶಾಸ್ತ್ರಿಯ ಅಧ್ಯಯನದ ಅಗತ್ಯ ಇಲ್ಲ. ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಕೇಂದ್ರ ಸರ್ಕಾರ ಅದನ್ನು ಒಪ್ಪಿ ಎಸ್‍ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಹೇಳಿದರು.
ಕುರುಬ ಸಮಾಜ ಯಾರನ್ನು ತಮ್ಮ ತನು, ಮನ, ಧನ ಅರ್ಪಿಸಿ ಮುಖ್ಯಮಂತ್ರಿ ಮಾಡಿತೊ ಅವರು ಸಮಾವೇಶಕ್ಕೆ ಬಾರದಿರುವುದು ಅತೀವ ನೋವು ತಂದಿದೆ ಎಂದು ಸಿದ್ದರಾಮಯ್ಯನವರ ಹೆಸರನ್ನು ಪ್ರಸ್ತಾಪಿಸದೆ ವಿಶ್ವನಾಥ್ ಟೀಕಿಸಿದರು.
ಜೆಡಿಎಸ್ ಮುಖಂಡ, ಶಾಸಕ ಬಂಡೆಪ್ಪ ಕಾಶಂಪುರ ಮಾತನಾಡಿ, ಕುರುಬರನ್ನು ಎಸ್‍ಟಿ ಪಟ್ಟಿಗೆ ಸೇರಿಸುವ ತನಕ ಹೋರಾಟ ಮುಂದುವರಿಯಲಿದ್ದು, ನಮ್ಮ ಹೋರಾಟ ಇದೀಗ ಆರಂಭವಾಗಿದೆ ಎಂದರು.
ಕುರುಬರ ಎಸ್ ಟಿ ಹೋರಾಟ ಸಮಿತಿಯ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಮಾತನಾಡಿ, ಕುರುಬರ ಸಮಾನಾಂತರ ಪದಗಳನ್ನು ಈಗಾಗಲೇ ದೇಶದ ವಿವಿಧ ರಾಜ್ಯಗಳಲ್ಲಿ ಎಸ್‍ಟಿ ಪಟ್ಟಿಗೆ ಸೇರಿಸಲಾಗಿದೆ. ಅದನ್ನು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೂ ವಿಸ್ತರಿಸಬೇಕು. ರಾಜಕೀಯವಾಗಿ ಉನ್ನತ ಸ್ಥಾನ ಪಡೆದ ನಮ್ಮ ಸಮಾಜದ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ಕುರುಬರು ಇನ್ನೂ ಎಸ್ಟಿ ಪಟ್ಟಿಗೆ ಸೇರಲಾಗುತ್ತಿಲ್ಲ. ಬ್ರಿಟಿಷ್‍ರ ಕಾಲದಲ್ಲಿ ಎಸ್ಟಿ ಪಟ್ಟಿಯಲ್ಲಿದ್ದ ಕುರುಬರನ್ನು ದೇಶಕ್ಕೆ ಸ್ವಾತಂತ್ರ್ಯ ಬಂದಾಗಲೇ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕಿತ್ತು ಎಂದರು.
ಸಚಿವ ಎಂಟಿಬಿ ನಾಗರಾಜ್ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ವಾಗಿ ಹಿಂದುಳಿದಿರುವ ಕುರುಬರ ಸಮಾಜವನ್ನು ಕೇಂದ್ರ ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದರು.
ಶ್ರೀಈಶ್ವರಾನಂದ ಸ್ವಾಮೀಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಈ ಹೋರಾಟವನ್ನು ಲಘುವಾಗಿ ತೆಗೆದುಕೊಳ್ಳಬಾರದು. ನಮಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಯಲಿದೆ. ಯಾವುದಾದರೂ ಜಾತಿಯನ್ನು ಹೊಸದಾಗಿ ಎಸ್‍ಟಿ ಪಟ್ಟಿಗೆ ಸೇರ್ಪಡೆ ಮಾಡುವಾಗ ಕುಲಶಾಸ್ತ್ರಿಯ ಅಧ್ಯಯನ ಅಗತ್ಯವಿದೆಯೇ ಹೊರತು ಈಗಾಗಲೇ ಎಸ್ ಟಿ ಪಟ್ಟಿಗೆ ಸೇರಿರುವ ಕುರುಬ ಸಮಾಜಕ್ಕಲ್ಲ ಎಂದರು.
ಸಚಿವ ಆರ್.ಶಂಕರ್ ಮಾತನಾಡಿ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ವಿಶ್ವಾಸವಿದೆ. ಸಚಿವ ಸಂಪುಟದ ಮುಂದೆ ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರ್ಪಡೆ ಮಾಡುವ ವಿಷಯವನ್ನು ತರುವಂತೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಎಂ.ರೇವಣ್ಣ, ಇದು ಐತಿಹಾಸಿಕ ಹೋರಾಟದ ಆರಂಭ. ಕುರುಬರನ್ನು ಎಸ್ ಟಿ ಪಟ್ಟಿಗೆ ಸೇರಿಸುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಕಾಗಿನೆಲೆಯ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಬೃಹತ್ ಪಾದಯಾತ್ರೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸೇರಿದಂತೆ ಸಮುದಾಯದ ವಿವಿಧ ಪಕ್ಷಗಳ ನಾಯಕರು ಪಾಲ್ಗೊಳ್ಳುವ ಮೂಲಕ ಜನಾಂಗದ ವಿಷಯದಲ್ಲಿ ನಾವೆಲ್ಲ ಒಂದು ಎನ್ನುವ ಒಗ್ಗಟ್ಟು ಪ್ರದರ್ಶಿಸಿ, ಶೀಘ್ರವೇ ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಮೀಸಲಾತಿ ನೀಡುವಂತೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಕುರುಬ ಸಮುದಾಯ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದು ಸಮುದಾಯದ ಅಭಿವೃದ್ಧಿ ಮತ್ತು ಬೆಳವಣಿಗೆ ದೃಷ್ಟಿಯಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಮೀಸಲಾತಿ ಕಲ್ಪಿಸಬೇಕು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಈಶ್ವರಪ್ಪ ಸೇರಿದಂತೆ ಸಮಾವೇಶದಲ್ಲಿ ಭಾಗಿಯಾಗಿದ್ದ ನಾಯಕರು ಆಗ್ರಹಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.
ಸಮಾವೇಶದ ಹಿನ್ನೆಲೆ ಮಾದವಾರ ರಸ್ತೆ ಸೇರಿದಂತೆ ಸುತ್ತಮುತ್ತಲ ಭಾಗದಲ್ಲಿ ವಾಹನ ಸವಾರರಿಗೆ ಅಲ್ಲಲ್ಲಿ ಸಂಚಾರ ದಟ್ಟಣೆ ಎದುರುಗಾಗಿ ಪರದಾಡುವಂತಾಯಿತು. ಬೆಂಗಳೂರಿನಿಂದ ನೆಲಮಂಗಲ ಮಾರ್ಗವಾಗಿ ತುಮಕೂರು, ದಾವಣಗೆರೆ ಸೇರಿದಂತೆ ಉತ್ತರದ ಜಿಲ್ಲೆಗಳು ಯಶವಂತಪುರದಿಂದ ನೆಲಮಂಗಲದವರೆಗೂ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಕಿರಿ ಕಿರಿ ಅನುಭವಿಸಿದರು.