ಚಿತ್ರದುರ್ಗ:
ಬರದನಾಡು ಚಿತ್ರದುರ್ಗ ಜಿಲ್ಲೆಗೆ ನಿಗಧಿತ ಅವಧಿಯೊಳಗೆ ಭದ್ರಾಮೇಲ್ದಂಡೆ ಯೋಜನೆಯನ್ನು ಜಾರಿಗೊಳಿಸುವಂತೆ ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಒತ್ತಡ ಹೇರಲು ಜ.ಕೊನೆ ವಾರದಲ್ಲಿ ಚಿತ್ರದುರ್ಗದಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿ ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ತಿಳಿಸಿದರು.
ಬಿಜೆಪಿ.ಕಾರ್ಯಾಲಯದಲ್ಲಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಭದ್ರಾಮೇಲ್ದಂಡೆ ಯೋಜನೆ, ಚಿತ್ರದುರ್ಗಕ್ಕೆ ಮೆಡಿಕಲ್ ಕಾಲೇಜು, ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಯೋಜನೆ ಜಾರಿಗಾಗಿ ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆಯಿಂದ ಹತ್ತುಸಾವಿರ ಕಾರ್ಯಕರ್ತರು, ರೈತಮೋರ್ಚ, ಕಿಸಾನ್‍ಸಂಘದೊಂದಿಗೆ ಬೆಂಗಳೂರಿಗೆ ಪಾದಯಾತ್ರೆ ಕೈಗೊಳ್ಳಲಾಗುವುದಲ್ಲದೆ ಚಿತ್ರದುರ್ಗದಲ್ಲಿ ಮಹಿಳೆಯರ ಮೂಲಕ ಉಪವಾಸ ಸತ್ಯಾಗ್ರಹ ನಡೆಸಲು ಜಿಲ್ಲೆಯಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಕಳೆದ ನಾಲ್ಕುವರೆ ವರ್ಷಗಳಿಂದಲೂ ಕೇಂದ್ರ ಸರ್ಕಾರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ.ಯ ಫಲಾನುಭವಿಗಳು ಯಾರ್ಯಾರಿದ್ದಾರೆ ಎಂಬುದನ್ನು ವ್ಯಕ್ತಿಗತವಾಗಿ ತಿಳಿದುಕೊಳ್ಳಲು ಡಿ.ಮೊದಲನೆ ವಾರದಿಂದ ಒಂದುವರೆ ತಿಂಗಳ ಕಾಲ ಚಿತ್ರದುರ್ಗ ಜಿಲ್ಲೆಯಲ್ಲಿ ಮತ್ತೊಮ್ಮೆ ಮೋದಿ ಅಭಿಯಾನವನ್ನು ಜಿಲ್ಲೆಯ ಎಲ್ಲಾ ಬೂತ್‍ನಲ್ಲಿ ಕೈಗೊಳ್ಳುವಂತೆ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ಹದಿನೆಂಟು ವರ್ಷ ತುಂಬಿರುವ ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿವುದು.
ಬಿಟ್ಟುಹೋಗಿರುವ ಹೆಸರುಗಳನ್ನು ಸೇರಿಸುವ ಕೆಲಸ ಈಗಿನಿಂದಲೇ ಕಾರ್ಯಕರ್ತರು ಮಾಡಬೇಕು. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್ ಸರ್ಕಾರ, ಈಗಿನ ಸಮ್ಮಿಶ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ಅಧಿಕಾರಿಗಳ ಮೂಲಕ ಕೆಲವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಕುತಂತ್ರ ನಡೆಸಿದೆ. ವಿಧಾನಸಭೆ ಚುನಾವಣೆಯಲ್ಲಿ ನಾನು ಮತಚಲಾಯಿಸಿದ್ದೇನೆ. ನಗರಸಭೆ ಚುನಾವಣೆಯಲ್ಲಿ ಮತಕೇಂದ್ರಕ್ಕೆ ಹೋದಾಗ ನನ್ನ ಹೆಸರೇ ಇಲ್ಲ. ಇದೊಂದು ಫ್ರೀಪ್ಲಾನ್ ಕೆಲಸ ಎಂದು ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು.
ಜಿಲ್ಲಾ ಉಸ್ತುವಾರಿ ಮಂತ್ರಿ ವೆಂಕಟರಮಣಪ್ಪ ಡಿ.10 ರೊಳಗೆ ಭದ್ರಾಮೇಲ್ದಂಡೆ ಯೋಜನೆ ನೀರು ಜಿಲ್ಲೆಗೆ ಹರಿದು ಬರಲಿದೆ ಎಂದು ಹೇಳಿದ್ದಾರೆ. ವಿಪರ್ಯಾಸವೆಂದರೆ ಸಂಬಂಧಪಟ್ಟ ಇಲಾಖೆ ಹೊರಡಿಸಿರುವ ಕರಪತ್ರದಲ್ಲಿ 2023 ಕ್ಕೆ ಭದ್ರಾಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಹೇಳಿದೆ ಇಂತಹ ಅಸಂಬದ್ದ ಹೇಳಿಕೆಗಳನ್ನು ವಿರೋಧಿಸಿ ಹಾಗೂ ತ್ವರಿತಗತಿಯಲ್ಲಿ ನೀರಾವರಿ ಯೋಜನೆಯನ್ನು ಜಾರಿತರುವಂತೆ ರಾಜ್ಯ ಸಮ್ಮಿಶ್ರಕ್ಕೆ ಒತ್ತಡ ಹಾಕಲು ಜಿಲ್ಲೆಯಲ್ಲಿ ಜಾಗೃತಿ ಜಾಥ ನಡೆಸಲಾಗುವುದು ಎಂದರು.
ಚಿತ್ರದುರ್ಗ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಂಬಂಧಪಟ್ಟಂತೆ ಎರಡು ವರ್ಷದ ಹಿಂದೆ ದೆಹಲಿಗೆ ನಿಯೋಗ ಹೋಗಿದ್ದು ಏನಾಯಿತು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೆ.ಎಸ್.ನವೀನ್ ನಮ್ಮ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದರ ಫಲವಾಗಿ ಪ್ರತಿ ಜಿಲ್ಲೆಗಳಿಗೆ ಜನರಿಕ್ ಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಎಮ್ಸ್, ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ ಜಾಗದ ಪರಿಶೀಲನೆ ನಡೆಯುತ್ತಿದೆ. ಚಿತ್ರದುರ್ಗ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪನವರು ನಿಯೋಗದಲ್ಲಿದ್ದರೂ ಅಭಿವೃದ್ದಿ ವಿಚಾರದಲ್ಲಿ ನಮ್ಮ ಜೊತೆ ಸರಿಯಾಗಿ ಕೈಜೋಡಿಸಲಿಲ್ಲ ಎಂದು ವಿಷಾಧಿಸಿದರು.
ಕಬ್ಬು ಬಾಕಿ ಹಣ ಪಾವತಿಸುವಂತೆ ಬೆಳಗಾವಿಯಲ್ಲಿ ಹೋರಾಟ ನಡೆಸುತ್ತಿರುವ ರೈತರನ್ನು ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಗುರವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದ ಕೆ.ಎಸ್.ನವೀನ್ ಇಲ್ಲಿಯತನಕ ಎಲ್ಲಿ ಮಲಗಿದ್ದೆ ಎಂದು ರೈತ ಮಹಿಳೆಯನ್ನು ಕೇಳಿದ ಮುಖ್ಯಮಂತ್ರಿ ಕೂಡಲೆ ರೈತರ ಕ್ಷಮೆಯಾಚಿಸಬೇಕು. ಮಾಜಿ ಪ್ರಧಾನಿ ದೇವೇಗೌಡರು ಮಗ ಕುಮಾರಸ್ವಾಮಿ ಹೇಳುವ ಎಲ್ಲಾ ಹೇಳಿಕೆಗಳನ್ನು ಸಮರ್ಥಿಸಿಕೊಂಡು ಪುತ್ರ ವ್ಯಾಮೋಹ ಪ್ರದರ್ಶಿಸುತ್ತಿದ್ದಾರೆ ಎಂದು ಗೇಲಿ ಮಾಡಿದರು.
ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮಾಜಿ ಶಾಸಕ ಆರ್.ರಾಮಯ್ಯ, ಮುಖಂಡರುಗಳಾದ ಜಿ.ಎಂ.ಸುರೇಶ್, ವೆಂಟಕಸ್ವಾಮಿ, ಮುರಳಿ, ಮಲ್ಲಿಕಾರ್ಜುನ್, ಜೈಪಾಲ್, ವಿಜಯಣ್ಣ, ದಗ್ಗೆಶಿವಪ್ರಕಾಶ್, ನಾಗರಾಜ್‍ಬೇದ್ರೆ, ಶ್ಯಾಮಲಶಿವಪ್ರಕಾಶ್ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
