ಕುಣಿಗಲ್:
ನಡೆಯದ ಪಾಠಗಳು ಬೀದಿಗಿಳಿದು ಪ್ರತಿಭಟಿಸಿದ ವಿದ್ಯಾರ್ಥಿಗಳು
ಪರೀಕ್ಷೆಗಳು ಸಮೀಪಿಸುತ್ತಿದ್ದು, ಉಪನ್ಯಾಸಕರ ಕೊರತೆಯಿಂದ ಸಮರ್ಪಕವಾಗಿ ಪಾಠ-ಪ್ರವಚನಗಳು ನಡೆಯುತ್ತಿಲ್ಲ ಎಂದು ಆತಂಕಗೊಂಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತಮಗಾಗುತ್ತಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಆಗ್ರಹಿಸಿ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟಿಸಿದರು.
ಬುಧವಾರ ಎಂದಿನಂತೆ ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಉಪನ್ಯಾಸಕರ ಮತ್ತು ಅತಿಥಿ ಉಪನ್ಯಾಸಕರ ಕೊರತೆಯಿಂದ ಬೇಸತ್ತು ಕಾಲೇಜಿನಿಂದ ತಾಲ್ಲೂಕು ಕಚೇರಿಯವರೆಗೆ ಎರಡು ಕಿ.ಮೀ. ಮೌನ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ನೀಡಿದರು. ಇದಕ್ಕೂ ಮುನ್ನ ತಹಶೀಲ್ದಾರ್ ಕಚೇರಿಯ ಮುಂದೆ ತಹಸೀಲ್ದಾರ್ ಅವರಿಗೆ ಕಾದು ಕೂತ ವಿದ್ಯಾರ್ಥಿಗಳು ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರ ಕೊರತೆ ಇದ್ದು ಕೂಡಲೆ ಕೊರತೆ ನೀಗಿಸಿ ಎಂದು ಜೈಕಾರ ಕೂಗುತ್ತ ಒತ್ತಾಯಿಸಿದರು.
ಪಾಠವಿಲ್ಲದೆ ಪರೀಕ್ಷೆ ಬರೆಯುವುದಾದರೂ ಹೇಗೆ :
ಚನ್ನಕೇಶವ ಎಂಬ ವಿದ್ಯಾರ್ಥಿ ಮಾತನಾಡಿ, ಈ ಕಾಲೇಜಿನಲ್ಲಿ ಓದುತ್ತಿರುವವರು ರೈತಾಪಿ ಜನರ ಮಕ್ಕಳು, ಕಾಲೇಜಿಗೆ ಪಾಠ ಕೇಳಲು ದೂರದ ಹಳ್ಳಿಗಳಿಂದ ಬಂದರೆ ಇಲ್ಲಿ ಉಪನ್ಯಾಸಕರೆ ಇಲ್ಲ. ನಾವು ಪರೀಕ್ಷೆಗಳಲ್ಲಿ ಓದಿ ಬರೆಯುವುದಾದರೂ ಹೇಗೆ ಎಂದ ಅವರು ಸರ್ಕಾರ ಶೀಘ್ರ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆ ಹರಿಸಿ ನಮ್ಮ ಭವಿಷ್ಯ ಮಸುಕಾಗದಂತೆ ನೋಡಿಕೊಳ್ಳಬೇಕು. ಕಾಲೇಜು ಕಟ್ಟಡಗಳು ಸೋರುತ್ತಿದ್ದು ವ್ಯವಸ್ಥಿತವಾದ ಕೊಠಡಿಗಳ ಕೊರತೆಯೂ ಇದೆ. ಬಂದು ನೋಡಿ ಸಮಸ್ಯೆ ಬಗೆಹರಿಸುವಂತೆ ತಹಸೀಲ್ದಾರ್ ಅವರಿಗೆ ಮನವಿ ಮಾಡಿದರು.
ವಿದ್ಯಾರ್ಥಿಗಳಿಗೆ ತಹಶೀಲ್ದಾರ್ ಕಿವಿಮಾತು :
ಮನವಿ ಸ್ವೀಕರಿಸಿದ ತಹಸೀಲ್ದಾರ್ ಮಹಾಬಲೇಶ್ವರ್ ಅವರು ಮಾತನಾಡಿ, ವಿದ್ಯಾರ್ಥಿಗಳ ಸಮಸ್ಯೆ ಅರ್ಥವಾಗಿದ್ದು ಸಮಸ್ಯೆಯ ಬಗ್ಗೆ ಈ ಕೂಡಲೆ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮಾಹಿತಿ ನೀಡುವ ಮೂಲಕ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿ, ಪ್ರತಿಭಟನೆ ನಿಲ್ಲಿಸಿ ಕಾಲೇಜಿಗೆ ತೆರಳುವಂತೆ ಕಿವಿಮಾತು ಹೇಳಿದರು.
ಶಾಸಕರ ಪರವಾಗಿ ಹೇಳಿಕೆ :
ಇದೇ ವೇಳೆ ಕಾಂಗ್ರೆಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ರಂಗಣ್ಣಗೌಡ ಮಾತನಾಡಿ, ಶಾಸಕರಾದ ರಂಗನಾಥ್ ಅವರು ಅಧಿವೇಶನದಲ್ಲಿ ಇರುವುದರಿಂದ ಅವರೆ ಪೋನ್ ಮಾಡಿ ವಿದ್ಯಾರ್ಥಿಗಳ ಸಮಸ್ಯೆಗೆ ಮುಂದಿನ ದಿನಗಳಲ್ಲಿ ಸ್ಪಂದಿಸುವ ಭರವಸೆ ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೂ ಕೂಡಲೆ ಗಮನಹರಿಸುವಂತೆ ತಿಳಿಸುವುದಾಗಿ ಶಾಸಕರು ನನಗೆ ತಿಳಿಸಿದ್ದಾರೆ ದಯಮಾಡಿ ವಿದ್ಯಾರ್ಥಿಗಳು ಪ್ರತಿಭಟನೆ ಬಿಡುವಂತೆ ಮನವಿಮಾಡಿದರು ನಂತರ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟು ಕಾಲೇಜಿಗೆ ತೆರಳಿದರು.
ಪ್ರತಿಭಟನೆಯ ನೇತೃತ್ವವನ್ನು ವಿದ್ಯಾರ್ಥಿ ಘಟಕದ ಪ್ರಮುಖರಾದ ಮನೋಜ್‍ಗೌಡ, ಕೆ.ಆರ್.ರವೀಶ್, ಪವನ್, ಲಾವಣ್ಯ, ಕಾವ್ಯ, ಸವಿತ ಮುಂತಾದರು ವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
