ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನಗಳು ದೂರವಿಲ್ಲ : ಲಕ್ಷ್ಮಿ ಹೆಬ್ಬಾಳ್ಕರ್

ಬೀದರ್:

    ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸದ್ಯ ಹಿನ್ನಡೆಯಾಗಿರಬಹುದು, ಆದರೆ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನಗಳು ದೂರವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು. ಬೀದರ್ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ, ಮಹಿಳೆಯರು, ಬಡವರ ಬಗ್ಗೆ ಯೋಚಿಸಿ‌ ಕಾಂಗ್ರೆಸ್ ಪಕ್ಷ ಯೋಜನೆಗಳನ್ನು ರೂಪಿಸುತ್ತದೆ ಎಂದರು.

   ಕಳೆದ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಕೇಂದ್ರ ಸರ್ಕಾರ ಬರೀ ಪೊಳ್ಳು ಭರವಸೆಯನ್ನು ಕೊಡುತ್ತಾ, ಜನ ಸಾಮಾನ್ಯರನ್ನು ವಂಚಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದು ಅವರು ಕಿಡಿಕಾರಿದರು.

   ಎಲ್ಲರ ಸಹಕಾರ ನಮ್ಮ ಪಕ್ಷದ ಮೇಲೆ ಇರಲಿ, ರಾಜ್ಯದ ಏಳು ಕೋಟಿ ಜನಸಂಖ್ಯೆಗೆ ಏಕೈಕ ಮಹಿಳಾ ಸಚಿವೆಯಾಗಿರುವೆ. ಸಾಮಾನ್ಯ ಕಾರ್ಯಕರ್ತೆಯಾಗಿದ್ದ ನನ್ನನ್ನು ಗುರುತಿಸಿ ಪಕ್ಷ ನನಗೆ ಟಿಕೆಟ್ ನೀಡಿತು.‌ ಬ್ಲಾಕ್‌, ಜಿಲ್ಲಾ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕೆಲಸ ಮಾಡಿರುವೆ. ಎರಡು ಬಾರಿ ಸೋತರೂ ಪಕ್ಷ ನನ್ನನ್ನು ಗುರುತಿಸಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

    ಕಾರ್ಯಕರ್ತರ ವೈಯಕ್ತಿಕ ಕೆಲಸಗಳಿಗೆ ಹಾಗೂ ಸಮಸ್ಯೆಗಳಿಗೆ ನಾನು ಸದಾ ಸ್ಪಂದಿಸುವೆ. ಕಾಂಗ್ರೆಸ್ ಪಕ್ಷದ ಕಚೇರಿ ನಮ್ಮ ಪಾಲಿಗೆ ದೇವಾಲಯ ವಿದ್ದಂತೆ. ಎಲ್ಲರೂ ಪಕ್ಷಕ್ಕಾಗಿ ದುಡಿಯೋಣ, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು.ಈ ವೇಳೆ ಮುಖಂಡರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಸನ್ಮಾನಿಸಿದರು. ಇದೇ ವೇಳೆ ಬಗರ್ ಹುಕುಂ ಸಮಿತಿಗೆ ಆಯ್ಕೆಗೊಂಡ ಸದಸ್ಯರನ್ನು ಸಚಿವರು ಸನ್ಮಾನಿಸಿದರು. 

    ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ್ ಚಿಮಕೊಡೆ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಜಿಲ್ಲಾಧ್ಯಕ್ಷ ಬಸವರಾಜ್ ಜಾಬ್ ಶೆಟ್ಟಿ, ಯುವ ಮುಖಂಡರಾದ ಅನಿಲ್ ಬೆಲ್ದಾರ್, ದತ್ತು ಮುಲಗೆ, ಸಂಜಯ್ ಜಹಾಗೀರ್ ದಾರ್, ಶ್ರೀಕಾಂತ್ ಸ್ವಾಮಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link