ಮೈಸೂರು:
ಐದು ವರ್ಷ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ ಮೇಲೆ ಅಲ್ಲಿಗೆ ಎಲ್ಲವೂ ಮುಗಿದ ಕಥೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಹೇಳಿದ ಮೇಲೆ ಅಲ್ಲಿಗೆ ಎಲ್ಲ ಮುಗಿಯಿತು ಎಂದು ಅರ್ಥ. ಈಗ ಮುಗಿದ ಕಥೆ ಬಗ್ಗೆ ನಮ್ಮ ಪ್ರತಿಕ್ರಿಯೆ ನೀಡಿದರೆ ಅದು ತಪ್ಪಾಗುತ್ತದೆ. ನೀವು ಮತ್ತೆ ಮತ್ತೆ ಅದನ್ನ ಕೇಳಬೇಡಿ ಎಂದಿದ್ದಾರೆ.
ಬದಲಾವಣೆ ವಿಚಾರದ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ಎಲ್ಲಾ ಪ್ರಶ್ನೆಗಳಿಗೆ ಸಿಎಂ ಉತ್ತರ ಕೊಟ್ಟಿದ್ದಾರೆ. ಸೆಪ್ಟೆಂಬರ್‌ನಲ್ಲಿ ಯಾವ ಕ್ರಾಂತಿಯೂ ಇಲ್ಲ, ಕೇವಲ ಶಾಂತಿ ಅಷ್ಟೇ ಎಂದು ಹೇಳಿದರು.
ಮೂರು ತಿಂಗಳಿಗೊಮ್ಮೆ ಗೃಹಲಕ್ಷ್ಮೀ ಹಣ ಕೊಡುತ್ತೇವೆ ಎಂಬ ಎಚ್.ಎಂ. ರೇವಣ್ಣ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. ನಾವು ಪ್ರತಿ ತಿಂಗಳು ಹಣ ಹಾಕುತ್ತಿದ್ದೇವೆ. ಮೇ ತಿಂಗಳ ವರೆಗೂ ಸಂಪೂರ್ಣವಾಗಿ ಹಣ ಹಾಕಿದ್ದೇವೆ. ನಮಗೆ ಹಣ ಹಾಕಲು ಯಾವ ತೊಡಕುಗಳು ಇಲ್ಲ ಎಂದಿದ್ದಾರೆ.
ಎಚ್.ಎಂ ರೇವಣ್ಣ ಯಾಕೆ ಆ ರೀತಿ ಹೇಳಿದ್ದಾರೆ ಗೊತ್ತಿಲ್ಲ. ಸ್ಪಷ್ಟೀಕರಣ ಕೇಳಲು ಅವರಿಗೆ ಕರೆ ಮಾಡಿದೆ. ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಅವರು ಸಂಪರ್ಕಕ್ಕೆ ಸಿಕ್ಕಾಗ ಯಾಕೆ ಆ ರೀತಿ ಹೇಳಿದ್ರಿ ಎಂದು ಕೇಳುತ್ತೇನೆ. ನಾವು ಜನರಿಗೆ ಮಾತು ಕೊಟ್ಟಂತೆ ಹಣ ಹಾಕುತ್ತಿದ್ದೇವೆ ಎಂದರು.
