ಗೃಹಲಕ್ಷ್ಮಿ ಹಣ ಶೀರ್ಘ ಬಿಡುಗಡೆ : ಲಕ್ಷ್ಮಿ ಹೆಬ್ಬಾಳ್ಕರ್‌

ಬೆಳಗಾವಿ:

    ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ನಡುವೆ ವೈಮನಸ್ಸು ಮೂಡಿಸಲು ಶಕುನಿ ರಾಜಕಾರಣದಲ್ಲಿ ರಮೇಶ್ ಜಾರಕಿಹೊಳಿಯವರು ತೊಡಗಿದ್ದು, ಆದರೆ, ಇದಕ್ಕೆ ಯಾರೂ ಸೊಪ್ಪು ಹಾಕುವುದಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಬುಧವಾರ ಹೇಳಿದರು.

    ಬೆಳಗಾವಿ ಸಮೀಪದ ಸವದತ್ತಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಂದಿನಿಂದಲೂ ಬಹಳಷ್ಟು ಜನ ಶಕುನಿ ರಾಜಕಾರಣ ಮಾಡಿದ್ದಾರೆ. ಆದರೆ, ಇದಕ್ಕೆ ಯಾರೂ ಸೊಪ್ಪು ಹಾಕುವುದಿಲ್ಲ. ಸಿದ್ದರಾಮಯ್ಯ, ಡಿಕೆಶಿ ಬಹಳ ಮುತ್ಸದ್ಧಿ ರಾಜಕಾರಣಿಗಳು ಎಂದು ಹೇಳಿದರು.

    ಸಿದ್ದರಾಮಯ್ಯ ಡಿಕೆಶಿ ಕಂಟ್ರೋಲ್‌ನಲ್ಲಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ಸಂಬಂಧನೇ ಇಲ್ಲ. ನಮ್ಮ ಪಕ್ಷಕ್ಕೆ ಅವರು ಸಂಬಂಧ ಇಲ್ಲ, ಉತ್ತರ ಕೊಡುವಷ್ಟು ನಾವು ಚಿಕ್ಕವರೂ ಅಲ್ಲ. ಸಿಎಂ, ಡಿಸಿಎಂ ಮಧ್ಯೆ ವಿಷಬೀಜ ಬಿತ್ತಬೇಕು ಎಂಬುದು ಅವರ ಪೊಲಿಟಿಕಲ್ ಪ್ರೊಪಗಾಂಡಾ ಎಂದು ತಿರುಗೇಟು ನೀಡಿದರು.

    40 ವರ್ಷಗಳಿಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್ 7 ಬಾರಿ ಶಾಸಕರಾಗಿದ್ದಾರೆ, ಯಾರೂ ಚಿಕ್ಕವರಿಲ್ಲ. ಸಿಎಂ ಮಾಡೋದು ನಮ್ಮ ಹೈಕಮಾಂಡ್. ನಮ್ಮ ಪಕ್ಷದ ಮುಖ್ಯಮಂತ್ರಿಯನ್ನು ವಿಜಯೇಂದ್ರ ಮಾಡ್ತಾರಾ?…ನಮ್ಮ ಪಕ್ಷದಲ್ಲಿ ಸಿಎಂ ಮಾಡೋದು ಹೈಕಮಾಂಡ್ ಮತ್ತು ಆರಿಸಿ ಬಂದಂತಹ ಶಾಸಕರು ಎಂದು ಹೇಳಿದರು.

  ವಿಜಯೇಂದ್ರ, ಡಿಕೆಶಿ ಮಧ್ಯೆ ಹೊಂದಾಣಿಕೆ ರಾಜಕಾರಣ ಇದೆ ಎಂಬ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಆರೋಪಕ್ಕೆ ಪ್ರತಿಕ್ರಿಯಿಸಿ, ಯತ್ನಾಳ್​ ಮುತ್ಸದ್ಧಿಗಳು, ನಮ್ಮ ಸಮಾಜದ ಹಿರಿಯ ನಾಯಕರು. ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಬಹಳ ದೊಡ್ಡ ಅಭಿಮಾನ ಮತ್ತು‌ ಗೌರವವೂ ಇದೆ. ಆದರೆ, ಅವರ ರಾಜಕೀಯ ಹೇಳಿಕೆಗಳನ್ನು ನೋಡಿ. ಅವರು ಯಾವತ್ತಿದ್ರೂ ಯಡಿಯೂರಪ್ಪನವರ ವಿರುದ್ಧ ಹೇಳಿಕೆ ಕೊಡುತ್ತಾರೆ. ಅವರ ನಿನ್ನೆಯ ಹೇಳಿಕೆ ನೋಡಿ ನನಗೂ ಆಶ್ಚರ್ಯವಾಯಿತು. ಇವರು ತಮ್ಮ ಪಕ್ಷದ ಬಗ್ಗೆ ಮಾತನಾಡಲಿ, ಇನ್ನೊಬ್ಬರ ಬಗ್ಗೆ ಏಕೆ ಮಾತನಾಡ್ತಾರೆ ಎಂದು ಪ್ರಶ್ನಿಸಿದರು.

    ಈ ರೀತಿ ಬೇಜವಾಬ್ದಾರಿ ಹೇಳಿಕೆ ಶೋಭೆ ತರಲ್ಲ. ಯತ್ನಾಳ್ ಅಣ್ಣನವರು ಕೇವಲ ಗೊಂದಲ ಸೃಷ್ಟಿ ಮಾಡೋಕೆ ಹೋಗುತ್ತಾರೆ. ವಿಜಯೇಂದ್ರಗೂ, ಡಿ.ಕೆ.ಶಿವಕುಮಾರ್‌ ಅವರಿಗೂ ಏನು ಸಂಬಂಧ?… ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರು. 135 ಜನ ಆರಿಸಿ ಬಂದು ಹೈಕಮಾಂಡ್ ಆಶೀರ್ವಾದದಿಂದ ಡಿಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಸಾಹೇಬ್ರು ಸಿಎಂ ಆಗಿ ಒಳ್ಳೆಯ ರೀತಿ ಆಡಳಿತ ಮಾಡ್ತಿದ್ದಾರೆ. ಈ ಸಂದರ್ಭದಲ್ಲಿ ಗೊಂದಲ ಸೃಷ್ಟಿ ಮಾಡಿ ಬೆಂಕಿ ಹಚ್ಚಲು ಯತ್ನಾಳ್​ ಅಣ್ಣ ಯತ್ನಿಸುತ್ತಿದ್ದರೆ ಅದು ಸಾಧ್ಯವಿಲ್ಲ. ಇಬ್ಬರ ಸಂಬಂಧ ಹಳಸಬೇಕು ಎಂದು ಹೊರಟಿದ್ರೆ ಇದು ಸಾಧ್ಯವಿಲ್ಲ ಎಂದು ಹೇಳಿದರು.

   ಇದೇ ವೇಳೆ ಗೃಹಲಕ್ಷ್ಮಿ ಹಣ ಬಿಡುಗಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ಸರ್ಕಾರದವರು ನಮ್ಮ ರಾಜ್ಯಕ್ಕೆ ಬರಬೇಕಾದ ದುಡ್ಡು ಕೊಟ್ಟಿಲ್ಲ. ಅದರ ಬಗ್ಗೆ ಮೊದಲು ಬೆಳಕು ಚೆಲ್ಲಲಿ. ನಾವು ಗೃಹಲಕ್ಷ್ಮಿ ಹಣ ಕೊಡುತ್ತೇವೆ. ಅವರು ಬೀಸೊ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಗೃಹಲಕ್ಷ್ಮಿ ಬಗ್ಗೆ ಹೇಳುತ್ತಾರೆ. ಶೀಘ್ರದಲ್ಲೇ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap