ಸಿಟಿ ರವಿ ಅಶ್ಲೀಲ ಪದ ಬಳಸಿದ ಪ್ರಕರಣ : ವಿಡಿಯೊ ರಿಲೀಸ್‌ ಮಾಡಿದ ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ: 

   ವಿಧಾನ ಪರಿಷತ್ ಕಲಾಪದಲ್ಲಿ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಂಧನವಾಗಿದ್ದ ಬಿಜೆಪಿ ಎಂಎಲ್​ಸಿ ಸಿ.ಟಿ. ರವಿ ಬಿಡುಗಡೆಗೆ ಹೈಕೋರ್ಟ್‌ ಇತ್ತೀಚೆಗೆ ಆದೇಶ ನೀಡಿತ್ತು. ಇನ್ನು ಸಚಿವೆ ವಿರುದ್ಧ ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಎಂದು ಸಿ.ಟಿ.ರವಿ ಹೇಳಿರುವ ಬೆನ್ನಲ್ಲೇ ಸಿ.ಟಿ. ರವಿ ಆಡಿದ ಮಾತುಗಳಿರುವ ವಿಡಿಯೊವನ್ನು ಲಕ್ಷ್ಮಿ ಹೆಬ್ಬಾಳ್ಕರ್‌ ರಿಲೀಸ್ ಮಾಡಿದ್ದಾರೆ.

   ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ‌ವಿಡಿಯೊ ರಿಲೀಸ್ ಮಾಡಿ ತಿರುಗೇಟು ನೀಡಿದ್ದಾರೆ. ಎರಡು ಪ್ರತ್ಯೇಕ ‌ವಿಡಿಯೊ ಮಾಡಿದ್ದು, ಇದರಲ್ಲಿನ ಒಂದು ವಿಡಿಯೋದಲ್ಲಿ ಸಿಟಿ ರವಿ ಆಕ್ಷೇಪಾರ್ಹ ಪದ ಬಳಸಿದ್ದು, ಮತ್ತೊಂದು ವಿಡಿಯೋದಲ್ಲಿ ರಾಹುಲ್ ಗಾಂಧಿಗೆ ಡ್ರಗ್ ಅಡಿಕ್ಟ್‌ ಎಂದಿದ್ದ ವಿಡಿಯೊ ರಿಲೀಸ್ ಮಾಡಿದ್ದಾರೆ.

   18 ಸೆಕೆಂಡ್‌ ಇರುವ ವಿಡಿಯೊದಲ್ಲಿ ಸಿ.ಟಿ ರವಿ ಅವರು ಎದ್ದುನಿಂತು ಪೋಸ್ಟರ್ ಹಿಡಿದು ಎದುರಿಗೆ ಇರುವವರ ವಿರುದ್ಧ ಧಿಕ್ಕಾರ ಕೂಗುತ್ತಿರುತ್ತಾರೆ. ಈ ಸಂದರ್ಭದಲ್ಲಿ ಕೊನೆಗೆ ಪ್ರಾ** ಎಂಬ ಪದವನ್ನು ಮೂರು ಬಾರಿ ಹೇಳಿದಂತೆ ಕೇಳಿಸುತ್ತದೆ. ಇನ್ನೊಂದು ವಿಡಿಯೊದಲ್ಲಿ ಹೇ ಡ್ರಗ್ ಅಡಿಕ್ಟ್ ಎಂದು ಹೇಳಿರುವುದು ಕೇಳುತ್ತದೆ.

   ಈ ವೇಳೆ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು, ನಾನು ಎರಡು ದಿನ ಮೌನಕ್ಕೆ ಶರಣಾಗಿದ್ದೆ. ನನಗೆ ಬಹಳಷ್ಟು ನೋವಾಗಿತ್ತು. 26 ವರ್ಷ ಸಂಘರ್ಷದಿಂದ ಮೇಲೆ ಬಂದಿದ್ಧೇನೆ. ನಾನು ರೆಡ್‌ ಕಾರ್ಪೆಟ್‌ ಮೇಲೆ ನಡೆದು ಬಂದಿಲ್ಲ. ಆದರೆ ಹಾರ ತುರಾಯಿ ಹಾಕಿಸಿಕೊಂಡು ವೈಭವಿಕರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಅಪರಾಧಿ ಭಾವನೆ ಕಾಡುತ್ತಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್‌ ಹೇಳಿದ್ದಾರೆ.

   ನಾನು ಮತ್ತೆ ಸಭಾಪತಿ ಅವರಿಗೆ ದೂರು ಕೊಡುತ್ತೇನೆ.‌ ಸಿ.ಟಿ. ರವಿ ವಿರುದ್ಧ ಹೋರಾಟ ಮುಂದುವರಿಸುವೆ. ಪೊಲೀಸ್ ತನಿಖೆ ತ್ವರಿತವಾಗಿ ಆಗಬೇಕು. ಎಫ್‌ಎಸ್‌ಎಲ್ ವರದಿ ಬೇಗ ಬಹಿರಂಗವಾಗಬೇಕು. ಇಂತಹ ಸಂದರ್ಭದಲ್ಲೂ ಬಿಜೆಪಿಯವರು ಸಿಟಿ ರವಿ ಬೆನ್ನಿಗೆ ನಿಂತಿದ್ದಾರೆ ಎಂದು ಸಚಿವರು ಕಿಡಿಕಾರಿದ್ದಾರೆ.

   ಸಚಿವೆ ಲಕ್ಷ್ಮಿ ಹೆಬ್ಬಾಳ್ಳರ್ ಕುರಿತು ಅಶ್ಲೀಲ ಪದ ಬಳಕೆ ಪ್ರಕರಣದಲ್ಲಿ ಬಂಧನವಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ಬಿಡುಗಡೆ ಮಾಡುವಂತೆ ಡಿ.20ರಂದು ಹೈಕೋರ್ಟ್ ಆದೇಶ ಹೊರಡಿಸಿತ್ತು. ಸಿಟಿ ರವಿ ವಿರುದ್ಧದ ಎಫ್​ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಕ್ಷಣ ಬಿಡುಗಡೆಗೆ ಮಧ್ಯಂತರ ಆದೇಶ ಹೊರಡಿಸಿತ್ತು. ಆದರೆ, ತನಿಖೆಗೆ ಸಹಕರಿಸಬೇಕೆಂದು ಷರತ್ತು ವಿಧಿಸಿತ್ತು.

Recent Articles

spot_img

Related Stories

Share via
Copy link