ದಾವಣಗೆರೆ:
ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದ್ದು, ಎಲ್ಲೆಂದರಲ್ಲಿ ಪೈಪ್ ಒಡೆದು ನೀರು ಸೋರುತ್ತಿರುವುದರಿಂದ ಕಾಮಗಾರಿ ಮಾಡಿರುವ ಎಲ್ ಅಂಡ್ ಟಿ ಕಂಪೆನಿಯು ಮತ್ತೊಂದು ಬಾರಿ ಪೈಪ್ ಲೈನ್ ಅಳವಡಿಸಿ ಸಮಸ್ಯೆ ಸರಿಪಡಿಸಬೇಕು. ಇಲ್ಲದಿದ್ದರೆ, ಆ ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು 22 ಕೆರೆಗಳ ಏತನೀರಾವರಿ ಹೋರಟಾ ಸಮಿತಿ ಅಧ್ಯಕ್ಷ ಡಾ.ಮಂಜುನಾಥಗೌಡ ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಂಬಿಕಾರ್ಹ ಎಲ್ ಅಂಡ್ ಟಿ ಕಂಪನಿಗೆ ಏತ ನೀರಾವರಿ ಯೋಜನೆಯ ಕಾಮಗಾರಿಯ ಗುತ್ತಿಗೆ ನೀಡಲಾಗಿತ್ತು. ಆದರೆ, ಕಂಪನಿಯವರೇ ಕಾಮಗಾರಿ ಮಾಡದೇ, ಸ್ಥಳೀಯ ಗುತ್ತಿಗೆದಾರರಿಗೆ ತುಂಡುಗುತ್ತಿಗೆ ನೀಡಿದ್ದರ ಪರಿಣಾಮ ಇಡೀ ಯೋಜನೆಯ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಹೀಗಾಗಿ ಪದೇ, ಪದೇ ಪೈಪ್ ಲೈನ್ ಒಡೆದುಕೊಳ್ಳುತ್ತಿರುವ ಕಾರಣ 22 ಕೆರೆಗಳ ಪೈಕಿ ಯಾವ ಕೆರೆಯಲ್ಲೂ ಶೇ.20 ರಷ್ಟು ಸಹ ನೀರು ತುಂಬಿಲ್ಲ ಎಂದು ಆರೋಪಿಸಿದರು.
ಪೈಪ್‍ಲೈನ್ ಮೂಲಕ ಪ್ರತಿ ವರ್ಷ 150ರಿಂದ 180 ದಿನಗಳ ಕಾಲ ನಿರಂತರವಾಗಿ ನೀರನ್ನು ಎತ್ತುವ ಮೂಲಕ ಎಲ್ಲಾ 22 ಕೆರೆಗಳಿಗೆ ನೀರು ತುಂಬಿಸಲು ಅವಕಾಶ ಇದೆ. ಆದರೆ, ಕಳಪೆ ಕಾಮಗಾರಿಯಿಂದಾಗಿ, ಪದೇ, ಪದೇ ಪೈಪ್‍ಲೈನ್ ಹಾನಿಯಾಗುವುದರಿಂದ ಹಾಗೂ ಕಾಂಕ್ರಿಟ್ ನಿರ್ಮಿತ ಜಾಕ್‍ವೆಲ್ ತಡೆಗೋಡೆ ಕುಸಿಯುತ್ತಿರುವುದರಿಂದ, 5 ವರ್ಷಗಳ ಕಳೆದರೂ 150 ದಿನಗಳ ಕಾಲ ಸರಿಯಾಗಿ ನೀರು ಹರಿದಿಲ್ಲ. 2014ರಲ್ಲಿ 40, 2015ರಲ್ಲಿ 30, 2016ರಲ್ಲಿ 20, 2017ರಲ್ಲಿ 68 ಹಾಗೂ ಪ್ರಸ್ತುತ ಅವಧಿಯ ಮೂರು ಮೂರು ತಿಂಗಳಲ್ಲಿ 20 ದಿನಗಳ ಕಾಲ ಮಾತ್ರ ನೀರು ಹರಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನದಿಯಿಂದ ನೀರು ಎತ್ತುವ ಮೊದಲನೇ ಮತ್ತು ಎರಡನೇ ಜಾಕ್‍ವೆಲ್‍ಗಳಿಗೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಎಕ್ಸ್‍ಪ್ರೆಸ್ ಲೈನ್ ಅಳವಡಿಸಲಾಗಿದೆ. ಆದರೆ, ಎರಡೂ ಜಾಕ್‍ವೆಲ್‍ಗಳಿಗೆ ಬೇರೆ, ಬೇರೆ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುತ್ತಿರುವ ಕಾರಣ ಹೊಂದಾಣಿಕೆಯ ಕೊರತೆ ಹಾಗೂ ಎಕ್ಸ್‍ಪ್ರೆಸ್ ಲೈನಿನಿಂದ ಬೇರೆಯವರಿಗೆ ಅನುಕೂಲವಾಗುವಂತೆ ಸಂಪರ್ಕ ಕಲ್ಪಿಸಿಕೊಟ್ಟಿದ್ದರಿಂದಲೂ ಮತ್ತಷ್ಟು ತೊಂದರೆಯಾಗುತ್ತಿದೆ. ಇದನ್ನು ಹೋಗಲಾಡಿಸಲು ಕರ್ನಾಟಕ ನೀರಾವರಿ ನಿಗಮದ ಅಡಿಯಲ್ಲಿ ಪ್ರತ್ಯೇಕ ಏತ ನೀರಾವರಿ ಕಚೇರಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಯಾವುದೇ ಪೈಪ್‍ಲೈಲ್ ಅಳವಡಿಸುವಾಗ ಹಗೂ ಅಳವಡಿಸಿದ ನಂತರ, ಹೈಡ್ರೋಟೆಸ್ಟಿಂಗ್ ಮೂಲಕ ನೀರಿನ ಒತ್ತಡವನ್ನು ಎಷ್ಟರಮಟ್ಟಿಗೆ ಪೈಪು ಹಾಗೂ ಜಾಯಿಂಟುಗಳು ತಡೆಯುತ್ತವೆ ಎಂಬುದನ್ನು ಪತ್ತೆ ಹಚ್ಚಬಹುದಾಗಿದೆ. ಇವೆಲ್ಲವನ್ನೂ ಕೇವಲ ಸ್ಥಳ ಪರಿಶೀಲನೆ ಮಾಡದೆ ಹಾಗೆಯೇ ಕೆಲಸ ಪೂರ್ಣಗೊಂಡ, ಪ್ರಮಾಣ ಪತ್ರ ನೀಡಿದ ಕರ್ನಾಟಕ ನೀರಾವರಿ ನಿಗಮದ ಅಂದಿನ ಇಂಜಿನಿಯರುಗಳ ವಿರುದ್ಧವೂ ಕ್ರಮಕೈಳ್ಳಬೇಕು. ಕಳಪೆ ಕಾಮಗಾರಿಯಿಂದಾಗಿ ಆದ ನಷ್ಟವನ್ನು ವಸೂಲಿ ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಲ್.ಕೊಟ್ರೇಶ್ ನಾಯ್ಕ, ಹಾಲೇಕಲ್ಲು ಚಂದ್ರನಾಯ್ಕ, ನೇರ್ಲಗಿ ಸ್ವಾಮಿ, ಬಾಬುಗೌಡ, ಪ್ರಕಾಶ್ ಪಾಟೀಲ್ ಅಣಜಗಿ, ಮಂಜಣ್ಣ, ಮಲ್ಲಿಕಾರ್ಜುನ, ಸಿದ್ದೇಶ್, ಶಿವಕುಮಾರ್, ಕೆಂಚವೀರಪ್ಪ, ನಿಜಲಿಂಗಪ್ಪ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ